ಚಾಮರಾಜನಗರ: ನಮ್ಮ ಅಣ್ಣನ ತಿಥಿಗಾಗಿ ಚೂರಲ್ಮಲಗೆ (Chooralmala) ಹೋಗಿದ್ದೆವು. ಎಲ್ಲಾ ವ್ಯವಸ್ಥೆ ಮಾಡಬೇಕು ಎಂದು ಐದು ದಿನ ಮೊದಲೇ ಹೋಗಿದ್ದೆ. ಅಲ್ಲಿಂದ ಬದುಕಿ ಬಂದಿರುವುದೇ ನಮ್ಮ ಪುಣ್ಯ ಎಂದು ಚೂರಲ್ಮಲದಲ್ಲಿ ನಡೆದ ಭೂಕುಸಿತದ (Landslide) ಭೀಕರ ಘಟನೆಯನ್ನು ಕನ್ನಡಿಗ ಸ್ವಾಮಿ ಶೆಟ್ಟಿ ಬಿಚ್ಚಿಟ್ಟಿದ್ದಾರೆ.
ಸ್ವಾಮಿ ಶೆಟ್ಟಿ ಗುಂಡ್ಲುಪೇಟೆ ತಾಲೂಕಿನ ತ್ರಯಂಭಕಪುರ ಗ್ರಾಮದ ನಿವಾಸಿ. ಇವರು ಅಣ್ಣನ ತಿಥಿ ಕಾರ್ಯಕ್ಕೆಂದು ಚೂರಲ್ಮಲಗೆ ತೆರಳಿದ್ದರು. ಈ ವೇಳೆ ಭೀಕರ ಭೂಕುಸಿತ ಉಂಟಾಗಿದ್ದು, ತಾನೂ ಬದುಕಿದ್ದಲ್ಲದೇ ಮೊಮ್ಮಗ ಹಾಗೂ ಮಗಳ ಪ್ರಾಣವನ್ನೂ ಸ್ವಾಮಿ ಶೆಟ್ಟಿ ಉಳಿಸಿದ್ದಾರೆ. ಬದುಕಿ ಬಂದ ಬಳಿಕ ‘ಪಬ್ಲಿಕ್ ಟಿವಿ’ ಮಾತನಾಡಿದ ಅವರು, ಘಟನೆಯ ತೀವ್ರತೆಯನ್ನು ತಿಳಿಸಿದ್ದಾರೆ.
ನಾವು ಹೋಗಿದ್ದೇ ಒಂದು ಕಾರ್ಯ ಆದರೆ ಅಲ್ಲಿ ನಡೆದದ್ದೇ ಬೇರೆ. ನೀರು ಜೋರಾಗಿ ಬಾಗಿಲು ತಟ್ಟಿತ್ತು. ಈ ವೇಳೆ 8 ಮಂದಿ ಮನೆಯಲ್ಲಿ ಇದ್ದೆವು. ಈಗ ಎಲ್ಲರೂ ಕೂಡ ಸೇಫ್ ಆಗಿದ್ದೇವೆ. ನಾವಿದ್ದ ಸ್ಥಳದಲ್ಲಿ 10 ರಿಂದ 12 ಜನರಷ್ಟೇ ಉಳಿದಿದ್ದಾರೆ. ತುಂಬಾ ಜನರು ಕೊಚ್ಚಿ ಹೋಗಿದ್ದಾರೆ. ತಾರಸಿಯಂತಹ ಮನೆಗಳೇ ಕುಸಿದು ಬಿದ್ದಿವೆ. ನಮ್ಮ ಕಥೆ ಮುಗಿದೇ ಹೋಯಿತು ಅಂದುಕೊಂಡಿದ್ದೆವು. ತಂತಿಗಳನ್ನು ಕಟ್ಟಿದ್ದೆವು. ಅದರ ಸಹಾಯದಿಂದ ಮೇಲೆ ಬಂದು ಬಚಾವ್ ಆಗಿದ್ದೇವೆ. ಬೆಳಗ್ಗೆ ಹೋಗಿ ನೋಡಿದ ವೇಳೆ ಅಲ್ಲಿ ಒಂದು ಕಡ್ಡಿಯೂ ಇರಲಿಲ್ಲ. ಅಲ್ಲಿಂದ ತಪ್ಪಿಸಿಕೊಂಡು ಬರುವಾಗ ನನಗೆ ಹಾಗೂ ನನ್ನ ಮಗಳ ಕಾಲಿಗೆ ಗಾಯವಾಗಿದೆ. ಆ ಸ್ಥಳದಿಂದ ಮೇಲೆ ಹತ್ತುವ ವೇಳೆ ಹೆಬ್ಬೆರಳಿಗೆ ಗಾಯವಾಗಿದೆ ಎಂದು ಸ್ವಾಮಿ ಶೆಟ್ಟಿ ಹೇಳಿದ್ದಾರೆ.
ಮುಂದುವರಿದು ಮಾತನಾಡಿ, ಕೂಲಿ ಮಾಡಿ ಹಸುಗಳನ್ನು ಕೊಂಡು ಸಾಕಿದ್ದರು. ಆರು ಹಸುಗಳ ಹಗ್ಗಗಳನ್ನು ಕೂಡ ಬಿಚ್ಚಿದ್ದೆವು. ಆದರೂ ಕೂಡ ಹಸುಗಳು ಕೊಚ್ಚಿ ಹೋಗಿವೆ. ಊರೇ ಇಲ್ಲ ಅಂದಮೇಲೆ ದನಕರು ಎಲ್ಲಿ ಇರುತ್ತೆ ಹೇಳಿ. ಸೇತುವೆ ಒಡೆದು ಹೋದ ಮೇಲೆ ನೀರು ನುಗ್ಗಿತ್ತು. ಅದು ತುಂಬಾ ಹಳೇ ಸೇತುವೆ. ನಮ್ಮ ಮನೆ ಪಕ್ಕದಲ್ಲಿ 9 ತಿಂಗಳ ಗರ್ಭಿಣಿ ಹಾಗೂ ಗಂಡ ವಾಸವಿದ್ದರು. ಘಟನೆಯಲ್ಲಿ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಕೊಚ್ಚಿ ಹೋದರು. ಯಾರನ್ನು ಕೂಡ ರಕ್ಷಣೆ ಮಾಡಲೂ ಹೋಗಿಲ್ಲ. ಸೇತುವೆ ಒಡೆದು ನೀರು ಕೊಚ್ಚಿ ಹೋಯಿತು ಎಂದು ಘಟನೆ ಬಗ್ಗೆ ವಿವರಿಸಿದರು.
ಇನ್ನು ಸ್ವಾಮಿ ಶೆಟ್ಟಿ ಸೊಸೆ ನಂದಿನಿ ಈ ಬಗ್ಗೆ ಮಾತನಾಡಿ, ಅವರಿಗೆ ಏಟಾಗಿದೆ ಅಂದ ತಕ್ಷಣ ನಮಗೆ ಊಟ ಕೂಡ ಸೇರಿರಲಿಲ್ಲ. ಸಿದ್ದಪ್ಪಾಜಿ ಬಳಿ ಮನೆಗೆ ನಮ್ಮ ಮಾವ ಮರಳಿ ಬಂದರೆ ಸಾಕು ಎಂದು ಹರಕೆ ಹೊತ್ತಿದ್ದೆವು. ತಂದೆಯಂತೆ ಪ್ರೀತಿ ಕೊಟ್ಟು ನಮ್ಮನ್ನು ನೋಡಿಕೊಂಡಿದ್ದಾರೆ. ಅವರೇ ನಮಗೆ ಮುಖ್ಯ. ವಾಪಸ್ ಬಂದರೆ ಸಾಕು ಎಂದು ದೇವರಲ್ಲಿ ಕೇಳಿಕೊಂಡಿದ್ದೆವು. ನಾವು ಹರಕೆ ಮಾಡಿಕೊಂಡ ಮೇಲೆ ದೇವರು ಕನಸಿನಲ್ಲಿ ಬಂದಿತ್ತು. ನಿಮ್ಮ ಮಾವನನ್ನು ಮನೆಗೆ ಕರೆದುಕೊಂಡು ಬಂದು ಸೇರಿಸುತ್ತೇನೆ ಎಂದು ಹೇಳಿತ್ತು. ಆ ನಂತರ ನನ್ನ ಮನಸ್ಸಿಗೂ ಕೂಡ ಸಮಾಧಾನವಾಯಿತು. ಕೇರಳದಲ್ಲಿ ನೀರು ತುಂಬಿದೆ. ಎಲ್ಲರೂ ಕೊಚ್ಚಿಕೊಂಡು ಹೋಗಿದ್ದಾರೆಂದು ಕೇಳಿದಾಗ ಗಾಬರಿಯಾಗಿತ್ತು. ಬೇರೆಯವರ ಕೈಯಲ್ಲಿ ಕರೆ ಮಾಡಿಸಿದ್ದರು. ಧೈರ್ಯ ತೆಗೆದುಕೊಳ್ಳಿ ನಮಗೆ ಏನೂ ಆಗಿಲ್ಲ ಎಂದು ಹೇಳಿದ್ದರು. ಅಳಬೇಡಿ, ಸುಮ್ನಿರಿ ನಾನು ಬರ್ತೀನಿ ಅಂದಿದ್ದರು. ಅವರು ಮರಳಿ ಬಂದಿದ್ದು ನಂಗೆ ತುಂಬಾ ಸಂತಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.