Connect with us

ತನ್ನದಲ್ಲದ ತಪ್ಪಿಗೆ ಉಗಾಂಡದಲ್ಲಿ ಕನ್ನಡಿಗ ಜೈಲುಪಾಲು

ತನ್ನದಲ್ಲದ ತಪ್ಪಿಗೆ ಉಗಾಂಡದಲ್ಲಿ ಕನ್ನಡಿಗ ಜೈಲುಪಾಲು

-ಮಂಗ್ಳೂರಿನ ವಾಟ್ಸಪ್ ಗ್ರೂಪ್ ಸದಸ್ಯರ ಸಹಾಯದಿಂದ ಹೆಂಡತಿ, ಮಕ್ಕಳು ಭಾರತಕ್ಕೆ ವಾಪಸ್

ಮಂಗಳೂರು: ಕರಾವಳಿಯ ಯುವಕನೊಬ್ಬ ದೂರದ ಉಗಾಂಡ ದೇಶಕ್ಕೆ ದುಡಿಯಲು ಹೋಗಿದ್ರು. ಆದ್ರೆ ತನ್ನದಲ್ಲದ ತಪ್ಪಿಗೆ ಆ ದೇಶದಲ್ಲೀಗ ಜೈಲು ಶಿಕ್ಷೆ ಅನುಭವಿಸ್ತಿದ್ದಾರೆ. ಹೀಗಾಗಿ ಆತನ ಕುಟುಂಬ ದಿಕ್ಕಿಲ್ಲದೇ ಕಂಗಾಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮಾಲಾಡಿ ಗ್ರಾಮದ ರಶೀದ್ ಶಾಫಿ ಉಗಾಂಡದ ಗುಜರಾತಿ ಕಂಪೆನಿಯೊಂದರಲ್ಲಿ ಕೆಲಸ ಮಾಡ್ತಿದ್ರು. ಸೋಮಾಲಿಯಾ ದೇಶದ ಪ್ರಜೆಯೊಂದಿಗೆ ಮದುವೆಯಾಗಿರೋ ರಶೀದ್, ಮೂವರು ಮಕ್ಕಳ ಜೊತೆ ಸುಂದರ ಸಂಸಾರ ನಡೆಸ್ತಿದ್ರು. ಹೀಗಿರುವಾಗ ಕಳೆದ 10 ತಿಂಗಳ ಹಿಂದೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ರಶೀದ್ ಕೈಯ್ಯಲ್ಲಿದ್ದ ಕಂಪೆನಿಯ 12 ಲಕ್ಷ ರೂಪಾಯಿ ಹಣವನ್ನ ದರೋಡೆಕೋರರು ದೊಚಿದ್ದರು. ಆದ್ರೆ ಕಂಪೆನಿ ಮಾತ್ರ ರಶೀದ್ ಹಣವನ್ನ ದುರ್ಬಳಕೆ ಮಾಡಿದ್ದಾರೆಂದು ಆರೋಪ ಮಾಡಿ ಜೈಲಿಗೆ ಕಳುಹಿಸಿದೆ. ತಮ್ಮ ಮಗನನ್ನ ಬಿಡುಗಡೆ ಮಾಡಲು ಸಹಾಯ ಮಾಡಿ ಅಂತ ರಶೀದ್ ತಂದೆ ಕೇಂದ್ರ ಸರ್ಕಾರಕ್ಕೆ ಅಂಗಲಾಚುತ್ತಿದ್ದಾರೆ.

ಕಳೆದ 10 ತಿಂಗಳಿನಿಂದ ರಶೀದ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಯಜಮಾನನಿಲ್ಲದ ಮನೆಯಲ್ಲಿ ರಶೀದ್ ಅವರ ಪತ್ನಿ ಹಾಗೂ ಮಕ್ಕಳು ಸಂಕಷ್ಟದಲ್ಲಿದ್ದಾರೆ. ಇದನ್ನ ಅರಿತ ಮಂಗಳೂರಿನ ಎಂ.ಫ್ರೆಂಡ್ಸ್ ವಾಟ್ಸಪ್ ಗ್ರೂಪ್‍ನ ಗೆಳೆಯರು ರಶೀದ್ ಪತ್ನಿ ಹಾಗೂ ಮಕ್ಕಳನ್ನ ಭಾರತಕ್ಕೆ ಕರೆತಂದಿದ್ದಾರೆ. ನಿರಪರಾಧಿಯಾದ ರಶೀದ್ ಬಿಡುಗಡೆಗೂ ಹಣ ಹೊಂದಿಸಲು ಎಂ.ಫ್ರೆಂಡ್ಸ್ ಸದಸ್ಯರು ಪ್ರಯತ್ನ ಮಾಡ್ತಿದ್ದು, ದಾನಿಗಳ ಮೂಲಕ ಹಣ ಸಂಗ್ರಹಿಸಲು ಮುಂದಾಗಿದ್ದಾರೆ.

ಒಟ್ನಲ್ಲಿ ಅನಿವಾಸಿ ಭಾರತೀಯ ತನ್ನದಲ್ಲದ ತಪ್ಪಿಗೆ ಉಗಾಂಡದಲ್ಲಿ ಶಿಕ್ಷೆ ಅನುಭವಿಸ್ತಿದ್ದಾರೆ.

Advertisement
Advertisement