ಸೋನು ನಿಗಮ್ ಅವರನ್ನು ಕನ್ನಡ ಸಿನಿಮಾಗಳಲ್ಲಿ ಹಾಡಿಸದಿರಲು ಫಿಲ್ಮ್ ಚೇಂಬರ್ ತೀರ್ಮಾನ ಕೈಗೊಂಡಿದೆ. ಈ ನಿರ್ಧಾರದ ಕುರಿತು ‘ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿರುವ ಗಾಯಕಿ ಶಮಿತಾ ಮಲ್ನಾಡ್, ಕನ್ನಡ ಹಾಡು ಹಾಡಿ ಅಂದಿದ್ದಕ್ಕೆ ಉಗ್ರರ ದಾಳಿಗೆ ಹೋಲಿಸುವಂತಹದ್ದು ತುಂಬಾ ನೋವು ಕೊಡುವ ವಿಚಾರ ಎಂದು ಹೇಳಿದ್ದಾರೆ. ಇದನ್ನೂ ಓದಿ:ಪಾಕಿಸ್ತಾನದ ನಟನ ಸಿನಿಮಾ ಭಾರತದಲ್ಲಿ ಬ್ಯಾನ್ ಮಾಡೋಕೆ ಅದೇನು ನೀಲಿಚಿತ್ರವಾ?- ಪ್ರಕಾಶ್ ರಾಜ್ ಕೆಂಡ
ಕನ್ನಡ ಸಿನಿಮಾಗಳಲ್ಲಿ ಸೋನು ನಿಗಮ್ (Sonu Nigam) ಅವರನ್ನು ಹಾಡಿಸದಿರಲು ಫಿಲ್ಮ್ ಚೇಂಬರ್ ತೀರ್ಮಾನಿಸಿದೆ ಎಂಬುದನ್ನು ಗಾಯಕಿ ಶಮಿತಾ (Shamitha Malnad) ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಅವರು ಕ್ಷಮೆ ಕೇಳುವವರೆಗೂ ಇದು ಮುಂದುವರೆಯುತ್ತದೆ. ಅವರು ಏನಾದರೂ ಕ್ಷಮೆ ಕೇಳಿದ್ರೆ, ಮತ್ತೊಂದು ಸಭೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಅಮೆರಿಕದ ಹೊರಗಡೆ ತಯಾರಾದ ಸಿನಿಮಾಗಳಿಗೆ 100% ಸುಂಕ – ಟ್ರಂಪ್ ಘೋಷಣೆ
ಸೋನು ನಿಗಮ್ ಮಾಡಿರುವುದು ಬಹಳ ದೊಡ್ಡ ಅಪರಾಧನೇ. ನಾವು ಅಭಿಮಾನಿಯಾಗಿ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಕನ್ನಡ ಭಾಷೆ ಮೊದಲು ನಮಗೆ, ಆಮೇಲೆ ನಾವು ಸಿಂಗರ್ಸ್. ಕನ್ನಡಕ್ಕೋಸ್ಕರ ಹಾಡುತ್ತಿದ್ದೇವೆ, ಕನ್ನಡದಲ್ಲಿ ಹೆಸರು ಮಾಡಿದ್ದೀವಿ ಅಂದರೆ ಕನ್ನಡ ಮೊದಲು ನಮಗೆ. ಕನ್ನಡ ಹಾಡು ಹಾಡಿ ಎಂದು ಕೇಳಿದ್ದಕ್ಕೆ ಅವರು ಯಾರೋ ಉಗ್ರರಿಗೆ ಹೋಲಿಸುವಂತಹದ್ದು ತುಂಬಾ ನೋವು ಕೊಡುವ ವಿಚಾರ ಎಂದು ಸೋನು ನಿಗಮ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೇದಿಕೆಗೆ ಹೋದಾಗ ಸಂಗೀತ ಅಭಿಮಾನಿಗಳು ನೆಚ್ಚಿನ ಸಿನಿಮಾ ನಟರ ಹಾಡು ಹಾಡಿ ಎಂದೆಲ್ಲಾ ಕೇಳೇ ಕೇಳುತ್ತಾರೆ. ನಾವು ಅದನ್ನು ಪ್ರಬುದ್ಧರಾಗಿ ನಿಭಾಯಿಸಬೇಕು. ಅವರು ಹೊಸಬರೇನು ಅಲ್ಲ ಶೋ ಮಾಡುವಾಗ ಸೋನು ನಿಗಮ್ ತಾಳ್ಮೆ ಕಳೆದುಕೊಳ್ಳಬಾರದಿತ್ತು ಎಂದಿದ್ದಾರೆ.
ಒಬ್ಬ ಗಾಯಕರಾಗಿ ಎಲ್ಲಿ ಬೇಕಾದರೂ ಯಾವ ಭಾಷೆಯ ಹಾಡನ್ನು ಬೇಕಾದ್ರೂ ಹಾಡಬಹುದು. ಪರಭಾಷೆಯ ಗಾಯಕರು ಹಾಡುವಾಗ ಆ ಭಾಷೆಯ ನೆಲಕ್ಕೆ ಗೌರವ ಕೊಡಬೇಕಾಗುತ್ತದೆ. ಈಗ ನಾನು ಬೇರೆ ಭಾಷೆಗಳಲ್ಲಿ ಹಾಡುತ್ತಾ ಇವರಂತೆಯೇ ಮಾತನಾಡಿದ್ರೆ ಅಲ್ಲಿನವರು ಸುಮ್ಮನೆ ಇರುತ್ತಿದ್ರಾ? ಖಂಡಿತ ಇಲ್ಲವಲ್ಲ ಎಂದು ಗಾಯಕಿ ಪ್ರಶ್ನಿಸಿದ್ದಾರೆ. ನಾವು ಕನ್ನಡಿಗರು ಎಲ್ಲವನ್ನು ಎಲ್ಲರನ್ನೂ ಒಪ್ಪಿಕೊಳ್ಳುತ್ತೇವೆ ಅದೇ ಸಮಸ್ಯೆ ಎಂದಿದ್ದಾರೆ.
ಮೇ 2ರಂದು ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ, ಇದಕ್ಕೇನೇ ಪಹಲ್ಗಾಮ್ ದಾಳಿ ನಡೆದಿದ್ದು ಎಂದ ಸೋನು ನಿಗಮ್ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು.