Connect with us

Cinema

ಅನಾಥಾಶ್ರಮದಲ್ಲಿ ಬೆಳೆದ ಹುಡುಗ ಇಂದು ಕರುನಾಡಿನ ಸ್ಟಾರ್ – ಗೊತ್ತೇ ಶನಿ ಪಾತ್ರಧಾರಿಯ ಮನಮಿಡಿಯುವ ಕಥನ

Published

on

ಬೆಂಗಳೂರು: ಡ್ಯಾನ್ಸ್, ಮ್ಯೂಸಿಕ್, ಕರಾಟೆ, ಜಿಮ್ಮು ಅದು ಇದು ಎಂದು ತರಬೇತಿ ಪಡೆದು ಬಣ್ಣದ ಲೋಕಕ್ಕೆ ಕಾಲಿಟ್ಟು ಮುಗ್ಗರಿಸಿ ಬಿದ್ದವರ ಉದಾಹರಣೆಗಳು ನಮ್ಮ ಬಳಿ ಸಾಕಷ್ಟು ಇದೆ. ಆದರೆ ಅನಾಥಾಶ್ರಮದಲ್ಲಿ ಬೆಳೆದು ಇಂದು ಕರುನಾಡಿನ ಮನೆಮಾತಾಗಿರುವ ಶನಿ ಧಾರಾವಾಹಿಯ ಶನಿ ಪಾತ್ರಧಾರಿ ಸುನಿಲ್ ಬದುಕಿನ ಕಥೆ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ.

ಹೌದು, ಯಾವ ಸೀರಿಯಲ್ ಕಥೆಗೂ ಕಡಿಮೆ ಇಲ್ಲದ ಶನಿ ಪಾತ್ರಧಾರಿ ಸುನಿಲ್ ಜೀವನದ ರೋಚಕ ಬದುಕಿನ ಕಥನ ನಿಮ್ಮ ಮುಂದಿದೆ. ಪ್ರತಿದಿನ ಸಂಜೆಯಾಗುತ್ತಿದಂತೆ ಶನಿ ಪಾತ್ರಧಾರಿಯಾಗಿ ನಮ್ಮ ಮುಂದೇ ಬರುವ ಸುನಿಲ್ ಅವರು, ತಮ್ಮ ನೋವನ್ನೆಲ್ಲಾ ಅದುಮಿಟ್ಟುಕೊಂಡು ನಗುನಗುತ್ತಾ ಮಾತನಾಡುತ್ತಾರೆ. ಆದರೆ ಅವರ ಜೀವನ ಅಕ್ಷರಶಃ ಬೆಂಕಿಯಲ್ಲಿ ಅರಳಿದ ಹೂವಿನಂತೆ.

ಸುನಿಲ್ ಎಂಬ ಪ್ರತಿಭೆ ಇಂದು ನಮ್ಮ ಮುಂದಿರಲು ಪ್ರಮುಖ ಕಾರಣ ಅವರನ್ನು ಬೆಳೆಸಿದ ದೀನಬಂಧು ಆಶ್ರಮ. ಸದ್ಯ ಸುನಿಲ್ ಜೀವನದ ರಹಸ್ಯಗಳನ್ನು ನಮ್ಮ ಮುಂದೇ ಬಿಚ್ಚಿಟ್ಟಿದ್ದಾರೆ ದೀನಬಂಧು ಆಶ್ರಮದಲ್ಲಿ ಸುನಿಲರನ್ನು ಸಾಕಿದ ಗುರು ಜೈದೇವ್ ಅವರು.

ಅಂದಹಾಗೇ ಸುನಿಲ್ ಅವರಿಗೆ ತಂದೆ- ತಾಯಿ ಇಲ್ಲ. ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದ ಸುನಿಲ್‍ ತಾಯಿ, ಮಗನನ್ನ ನೋಡಿ ಕೊಳ್ಳಲು ಆಗದೇ ಏಳು ವರ್ಷದವನಿದ್ದಾಗಲೇ ಚಾಮರಾಜನಗರದ ದೀನಬಂಧು ಆಶ್ರಮಕ್ಕೆ ತಂದು ಬಿಟ್ಟಿದ್ದರು. ಕೆಲ ಸಮಯ ಮಗನ ಯೋಗಕ್ಷೇಮ ವಿಚಾರಿಸಲು ಬಂದು ಹೋಗುತ್ತಿದ್ದರು. ಆದರೆ ಅವರು ಅದೊಂದು ದಿನ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನಲ್ಲಿ ಸಾವನ್ನಪ್ಪಿದ್ದರು. ಉಳಿದಂತೆ ಸುನಿಲ್ ತಂದೆ ಎಲ್ಲಿದ್ದಾರೆ ಹೇಗಿದ್ದಾರೆ? ಅಷ್ಟಕ್ಕೂ ಅವರು ಜೀವಂತವಾಗಿ ಇದ್ದಾರಾ? ಇಲ್ಲವಾ? ಇದ್ಯಾವುದಕ್ಕೂ ಮಾಹಿತಿ ಇಲ್ಲ. ಸುನಿಲ್‍ ಅವರಿಗೆ ತನ್ನವರು ಅಂತ ಯಾರು ಇಲ್ಲ. ತಂದೆ- ತಾಯಿ ಅಣ್ಣ ತಮ್ಮ ಎಲ್ಲವೂ ಆಶ್ರಮದ ಗುರುಗಳಾದ ಜೈ ದೇವಣ್ಣನವರು.

ಸುನಿಲ್ ತಾಯಿ ಇನ್ನಿಲ್ಲ ಎಂಬ ಸುದ್ದಿ ಜೈದೇವ್‍ ಅವರಿಗೆ ತಿಳಿದ ಬಳಿಕ  ಅವರು ಸುನಿಲ್‍ರನ್ನ ಮತ್ತಷ್ಟು ಸೂಕ್ಷವಾಗಿ ನೋಡಿಕೊಳ್ಳುತ್ತಾರೆ. ಬಳಿಕ ಒಂದು ದಿನ ಅಮ್ಮ ಇನ್ನಿಲ್ಲ ಎಂಬ ಸುದ್ದಿಯನ್ನ ತಿಳಿಸುತ್ತಾರೆ. ಆದರೆ ಅಷ್ಟೊತ್ತಿಗಾಗಲೇ ಆಶ್ರಮದ ವಾತಾವರಣಕ್ಕೆ ಹೊಂದಿಕೊಂಡಿದ್ದ ಸುನಿಲ್ ಅವರು, ತನ್ನ ಅಮ್ಮ ಇಲ್ಲ ತಾನೊಬ್ಬ ಅನಾಥ ಅನ್ನೋದನ್ನ ಅಷ್ಟೇನು ತಲೆಗೆ ಹಚ್ಚಿಕೊಳ್ಳದೇ ಗುರುಗಳು ಹೇಳಿದಂತೆ ತನ್ನ ಕನಸುಗಳನ್ನ ಸಾಕಾರ ಮಾಡುವತ್ತಾ ಮುಖ ಮಾಡುತ್ತಾರೆ.

ಹೀಗೆ ಅನಾಥನಾಗಿದ್ದ ಹುಡುಗನ ಬೆಳವಣಿಗೆಗೆ ಕಾರಣವಾಗಿದ್ದು, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ರವರ ಮಗ ಜೈದೇವ್ ನಡೆಸಿಕೊಂಡು ಬರುತ್ತಿರುವ ಮಕ್ಕಳ ಆಶ್ರಮ. ಚಾಮರಾಜನಗರದಲ್ಲಿರುವ ದೀನಬಂಧು ಆಶ್ರಮವೇ ಸುನಿಲ್‍ಗೆ ಮನೆ, ಬಂಧು, ಊರು ಎಲ್ಲವೂ ಆಗಿತ್ತು. ಆಶ್ರಮದಲ್ಲಿ ಬೆಳೆದಿದ್ದರಿಂದ ಶಿಸ್ತು ಕೊಂಚವೂ ಆಯತಪ್ಪಿಲ್ಲ. ಚಿಕ್ಕಂದಿನಿಂದಲೂ ಸುನಿಲ್‍ ಗೆ ಓದಿನ ಮೇಲೆ ಆಸಕ್ತಿ ಅಷ್ಟಕ್ಕಷ್ಟೆ. ಆದರೆ ಕಲೆ ಇಂದು ಅವರಿಗೆ ದೊಡ್ಡ ಸ್ಟಾರ್ ಪಟ್ಟ ನೀಡಿದೆ.

ಸುನಿಲ್ ಬದುಕಿಗೆ ಹಿಡಿದಿದ್ದ `ಶನಿ’ ಬಿಟ್ಟಿದ್ದೆಲ್ಲಿ?
ಪ್ರತಿ ನಗುವಿನ ಹಿಂದೆಯೂ ನೋವಿರುತ್ತೆ ಎಂಬಂತೆ ಸುನಿಲ್ ನೋಡಿದಾಗ ಶನಿ ಪಾತ್ರಕ್ಕೆ ಬಣ್ಣ ಹಚ್ಚೋದಕ್ಕೂ ಮುನ್ನ ಯಾರಿಗೂ ಬೇಡವಾಗಿದ್ದ. ತಮ್ಮ ಜೊತೆ ವಾಸಿಸುವವರೇ ಅಣ್ಣ, ತಮ್ಮ, ಅಕ್ಕ, ಬಂಧು ಬಳಗ ಎಂದು ಜೀವಿಸುತ್ತಿದ್ದರು. ಅದೆಷ್ಟು ಅವಮಾನವನ್ನ ಪಟ್ಟಿದ್ದರು. ಆಟೋಟಗಳಲ್ಲಿ ಆಸಕ್ತಿ ಇದ್ದ ಕಾರಣ ಇತ್ತ ಹೆಚ್ಚು ಗಮನ ಕೊಡುತ್ತಿದ್ದ ಸುನಿಲ್ ಅವರು ಒಮ್ಮೆ ಯಕ್ಷಗಾನ ಕಾರ್ಯಕ್ರಮ ನೀಡಲು ಆಶ್ರಮದಿಂದ ಉಡುಪಿಗೆ ಹೋಗಿದ್ದರು. ಅಂದೇ ಶ್ರೀಕೃಷ್ಣನ ನಾಡಾದ ಉಡುಪಿಯಲ್ಲಿ ಸುನಿಲ್ ಅವರ ಅದೃಷ್ಟವೇ ಬದಲಾಯಿತು. ಸಾವಿರಾರು ಜನ ಆಡಿಷನ್‍ಗೆ ಬಂದರೂ ಯಾರಿಗೂ ಸಿಗದ ಅದೃಷ್ಟ ಸುನಿಲ್ ಪಾಲಿಗೆ ಒಲಿಯಿತು. ತಾನೊಬ್ಬ ಡ್ಯಾನ್ಸರ್ ಆಗಬೇಕು ಎಂದು ಕನಸುಕಟ್ಟಿಕೊಂಡಿದ್ದ ಸುನಿಲ್ ಅವರಿಗೆ ಶನಿ ಧಾರಾವಾಹಿಯಲ್ಲಿ ಅವಕಾಶ ಸಿಕಿತ್ತು. ಈ ವೇಳೆ ಕೈಯಲ್ಲಿ ಒಂದು ಬಿಡುಗಾಸು ಇಲ್ಲದೆ, ಕೇವಲ ನಂಬಿಕೆಯೊಂದನ್ನೇ ಆಸ್ತಿ ಮಾಡಿಕೊಂಡಿದ್ದ ಸುನಿಲ್ ಅವರು ರಾತ್ರೋರಾತ್ರಿ ಸ್ಟಾರ್ ಆದರು.

ಅಂದಹಾಗೆ ಶನಿ ಧಾರಾವಾಹಿಯಲ್ಲಿ ಸೊಗಸಾಗಿ ಅಭಿನಯಿಸುವ ಸುನಿಲ್ ಯಾವುದೇ ಅಭಿನಯ ಶಾಲೆಯಲ್ಲೂ ತರಬೇತಿ ಪಡೆದುಕೊಂಡಿಲ್ಲ. ಆಶ್ರಮದ ಶಾಲೆಯಲ್ಲಿ ಮಾಡಿದ್ದ ಯಕ್ಷಗಾನದ ಅನುಭವವಿತ್ತು ಅಷ್ಟೇ. ಆದರೆ ಶನಿಯ ಅಭಿನಯ ಚಾತುರ್ಯ ಕಂಡ ಇಡೀ ಕರುನಾಡು ಇಂದು ಭೇಷ್ ಅನ್ನುತ್ತಿದೆ.

ಮಾಸ್ ಹೀರೋ ಆಗುವ ಕನಸಿದೆ..
ಇಷ್ಟೆಲ್ಲಾ ಕಷ್ಟಪಟ್ಟು ಬೆಳೆದ ಸುನಿಲ್ ಅವರಿಗೆ ಆ್ಯಕ್ಷನ್ ಸೀಕ್ವೆನ್ಸ್ ಬಂದರೆ ಸಾಕು ಅತಿ ಹುರುಪಿನಿಂದ ಅಭಿನಯಿಸುತ್ತಾರೆ. ಅವರಿಗೆ ಮುಂದೆ ಮಾಸ್ ಹೀರೋ ಆಗುವ ಕನಸಿದೆ. ಅಲ್ಲದೇ ಕರಾಟೆ ಕಲಿಯಬೇಕೆಂಬ ಆಸೆಯೂ ಇದೆ. ಸದ್ಯಕ್ಕೆ ಪಿಯುಸಿ ಎರಡನೇ ವರ್ಷ ಓದುತ್ತಿರುವ ಸುನಿಲ್ ಅವರು ಬಿಡುವಿಲ್ಲದಷ್ಟು ಚಿತ್ರೀಕರಣದಲ್ಲಿ ತೊಡಗುತ್ತಾರೆ. ಚಿತ್ರೀಕರಣ ಇಲ್ಲದ ಸಮಯದಲ್ಲಿ ಆಶ್ರಮದಲ್ಲಿ ಇರುತ್ತಾರೆ. ಮುಂದೆ ನೀನಾಸಂಗೆ ಸೇರಿ ಅಭಿನಯದಲ್ಲಿ ಇನ್ನೂ ಪಳಗುವ ಆಸೆ ಅವರಿಗಿದೆ. ಅಲ್ಲದೇ ಬೆಳ್ಳಿ ತೆರೆಮೇಲೆ ವಿಲನ್ ರೋಲ್ ಪ್ಲೇ ಮಾಡುವ ಆಸೆಯೂ ಇದೆ.

ಸದ್ಯಕ್ಕೆ ಸುನಿಲ್ ಕನಸಿಗೆ ದೀನಬಂಧು ಆಶ್ರಮ ನೀರು ಉಣಿಸುತ್ತಿದೆ. ಆಶ್ರಮದ ಹುಡುಗ ಎತ್ತರಕ್ಕೆ ಬೆಳೆಯ ಬೇಕು ಎಂದು ಶಕ್ತಿಮೀರಿ ಬೇಕಾದನ್ನು ನೀಡುತ್ತಿದೆ. ಈಗಾಗಲೇ ಸುನಿಲ್‍ ಅವರಿಗೆ ಸಿನಿಮಾ ರಂಗ ಸೇರಿದಂತೆ ಅನೇಕ ಕಡೆಯಿಂದ ಅವಕಾಶಗಳು ಬರುತ್ತಿದೆ. ಒಳ್ಳೆ ಹೆಸರು ಬರುತ್ತಿದಂತೆ ಬದಲಾಗುವ ಮಂದಿಗೆ ವಿರುದ್ಧವಾಗಿರುವ ಸುನಿಲ್ ಅವರು ಇಂದಿಗೂ ಅನಾಥಾಶ್ರಮದ ಜನರೊಟ್ಟಿಗೆ ಅದೇ ಪ್ರೀತಿ, ವಿಶ್ವಾಸ ಕಾಪಾಡಿಕೊಂಡು ಬಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *

www.publictv.in