– ಗೋವಾಕ್ಕೆ ಕಾರವಾರ ಸೇರಿಸಿ ಎಂದವರು ಕನ್ನಡ ಕಲಿತರು
– ಬಾಗಿಲು ಮುಚ್ಚುತ್ತಿವೆ ಮರಾಠಿ ಶಾಲೆಗಳು
ಕಾರವಾರ: ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿರುವ ಕನ್ನಡಿಗರಿಗೆ ಕಾರವಾರ ಗಡಿಯಿಂದ ಸಿಹಿಸುದ್ದಿ ಸಿಕ್ಕಿದೆ. ಗಡಿಯಲ್ಲಿ ಹೆಚ್ಚಿದ್ದ ಮರಾಠಿ ಶಾಲೆಗಳಿಗೆ ಬೀಗ ಬಿದ್ದಿದ್ದು ಅಲ್ಲಿ ಕನ್ನಡ ಕಂಪು ನಿಧಾನವಾಗಿ ಅರಳುತ್ತಿದೆ. ಈ ಮೂಲಕ ಕನ್ನಡಿಗರು ಮನಸ್ಸು ಮಾಡಿದರೆ ಹೇಗೆ ಬದಲಾವಣೆ ಮಾಡಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.
ಗೋವಾ ಗಡಿಯಲ್ಲಿರುವ ಉತ್ತರ ಕನ್ನಡದ ಕೆಲ ಭಾಗದಲ್ಲಿ ಈ ಹಿಂದೆ ಕನ್ನಡಕ್ಕಿಂತ ಮರಾಠಿ ಭಾಷೆಯೇ ಪ್ರಮುಖವಾಗಿತ್ತು. ಅದರಲ್ಲೂ ಗೋವಾ ಗಡಿಯಲ್ಲಿ ಸುಮಾರು 20ಕ್ಕೂ ಅಧಿಕ ಶಾಲೆಗಳಲ್ಲಿ ಮಕ್ಕಳಿಗೆ ಮರಾಠಿ ಶಿಕ್ಷಣವನ್ನು ಕೊಡುತ್ತಿದ್ದರು. ಆದರೆ ಈಗ ಕಾರವಾರದಲ್ಲಿ ಮರಾಠಿ ಪ್ರಾಬಲ್ಯ ಕಡಿಮೆಯಾಗಿ ಕನ್ನಡ ಪ್ರೇಮ ಹೆಚ್ಚಾಗಿದೆ. ಬಹುತೇಕ ಮರಾಠಿ ಶಾಲೆಗಳಿಗೆ ಬೀಗ ಬಿದ್ದ ಮೇಲೆ ವಿದ್ಯಾರ್ಥಿಗಳು ಕನ್ನಡ ಶಾಲೆಯತ್ತ ಮುಖಮಾಡಿದ್ದಾರೆ. ಇದನ್ನೂ ಓದಿ:ಕಾಫಿನಾಡಿನ ದೇಗುಲದಲ್ಲಿ ಕನ್ನಡ ಡಿಂಡಿಮ
Advertisement
Advertisement
ಮರಾಠಿ ಭಾಷೆಯನ್ನೇ ಮಾತನಾಡುವವರ ಸಂಖ್ಯೆ ಅಧಿಕವಾಗಿದ್ದರಿಂದ ಮರಾಠಿ ಶಾಲೆಗಳ ಸಂಖ್ಯೆ ಸಹ ಅಧಿಕವಾಗಿತ್ತು. ಅದರಲ್ಲೂ ಕಾರವಾರದ ಗಡಿ ಗ್ರಾಮಗಳಾದ ಮಾಜಾಳಿ, ಹಣಕೋಣ, ಅಸ್ನೋಟಿ, ಸದಾಶಿವಗಡ ಸೇರಿದಂತೆ ಹಲವು ಗ್ರಾಮದಲ್ಲಿ ಸುಮಾರು 31 ಮರಾಠಿ ಶಾಲೆಗಳನ್ನ ಸರ್ಕಾರವೇ ತೆರೆದಿತ್ತು. ಅಧಿಕ ವಿದ್ಯಾರ್ಥಿಗಳು ಮರಾಠಿ ಶಿಕ್ಷಣವನ್ನೇ ಪಡೆಯಲು ಇಚ್ಛಿಸುತ್ತಿದ್ದ ಹಿನ್ನೆಲೆಯಲ್ಲಿ ಮರಾಠಿ ಶಾಲೆಗಳನ್ನ ತೆರೆಯಲಾಗಿತ್ತು. ಆದರೆ ಕೆಲ ವರ್ಷದಿಂದ ಕನ್ನಡ ಪರ ಸಂಘಟನೆಗಳ ಶ್ರಮದಿಂದ ಗಡಿ ಭಾಗದಲ್ಲಿ ಮರಾಠಿ ಪ್ರೇಮ ಕಡಿಮೆಯಾಗಿ ಕನ್ನಡ ಮೇಲಿನ ಆಸಕ್ತಿ ಜನರಲ್ಲಿ ಹೆಚ್ಚಾಗತೊಡಗಿದೆ.
Advertisement
Advertisement
ಮರಾಠಿ ಶಾಲೆಗಳನ್ನ ಬಿಟ್ಟು ಕನ್ನಡ ಶಾಲೆಯತ್ತ ಮುಖಮಾಡಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಸದ್ಯ ಕಾರವಾರದಲ್ಲಿ 28 ಮರಾಠಿ ಶಾಲೆಗಳು ಬಾಗಿಲು ಮುಚ್ಚಿ ಕೇವಲ 3 ಮರಾಠಿ ಶಾಲೆಗಳು ಮಾತ್ರ ಬಾಗಿಲು ತೆರೆದಿದ್ದು, ಅದೂ ಸಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ಗಡಿಯಲ್ಲಿ ಕನ್ನಡ ಶಾಲೆಯತ್ತ ವಿದ್ಯಾರ್ಥಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸುಮಾರು 147 ಕನ್ನಡ ಶಾಲೆಗಳಲ್ಲಿ ಪ್ರಸ್ತುತ ಮಕ್ಕಳಿಗೆ ಶಿಕ್ಷಣವನ್ನ ಕೊಡುವ ಕಾರ್ಯ ಮಾಡಲಾಗುತ್ತಿದೆ ಎಂದು ಕಾರವಾರದ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ್ ನಾಯಕ್ ತಿಳಿಸಿದ್ದಾರೆ. ಇದನ್ನೂ ಓದಿ:ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಕೊಟ್ಟು ಎಂಇಎಸ್ ಪುಂಡಾಟ
ಸದ್ಯ ಮೂರು ಮರಾಠಿ ಶಾಲೆಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಶಿಕ್ಷಣ ಪಡೆಯುತ್ತಿದ್ದಾರೆ. ಗೋವಾ ಮಹಾರಾಷ್ಟ್ರ ಪಕ್ಕದ ರಾಜ್ಯವಾಗಿದ್ದು, ಗೋವಾದಲ್ಲೂ ಮರಾಠಿ ಭಾಷೆಯಲ್ಲಿಯೇ ಹಲವು ಭಾಗದ ನಿವಾಸಿಗಳು ಶಿಕ್ಷಣ ನೀಡುತ್ತಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಕಾರವಾರದಲ್ಲೂ ಮರಾಠಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿತ್ತು. ಅಲ್ಲದೇ ಬಹುತೇಕ ಗಡಿ ಭಾಗದಲ್ಲಿನ ಜನರು ಕೆಲಸಕ್ಕಾಗಿ ಗೋವಾದ ಮೊರೆ ಹೋಗುತ್ತಿದ್ದ ಕಾರಣಕ್ಕೆ ಮರಾಠಿ ಶಿಕ್ಷಣ ಪಡೆಯಲು ಮುಂದಾಗಿದ್ದರು. ಆದರೆ ಕನ್ನಡ ಬಳಕೆ, ಕರ್ನಾಟದಲ್ಲಿಯೇ ಹೆಚ್ಚಾಗಿ ಕೆಲಸಕ್ಕೆ ಹೋಗುವವರ ಸಂಖ್ಯೆ ಅಧಿಕವಾಗತೊಡಗಿತು. ಕಳೆದ 20 ವರ್ಷದಿಂದ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಂಘಟನೆಗಳ ಶ್ರಮದಿಂದಾಗಿ ಕಾರವಾರದಲ್ಲಿ ಮರಾಠಿ ಶಿಕ್ಷಣ ಮಾಯವಾಗಿ ಕನ್ನಡ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಬಂದಿದೆ ಎನ್ನುವುದು ಸ್ಥಳೀಯರ ಮಾತಾಗಿದೆ.
ಹಿಂದೆ ಪರಿಸ್ಥಿತಿ ಹೇಗಿತ್ತು?
ಕಾರವಾರದ ಸುತ್ತಮುತ್ತಲ ಗ್ರಾಮಗಳಲ್ಲಿ ಕನ್ನಡ ಶಾಲೆ ಇದ್ದರೂ ಈ ಶಾಲೆಯಲ್ಲಿ ಕನ್ನಡ ಕಲಿಯುವ ಮಕ್ಕಳೇ ಇರಲಿಲ್ಲ. ಹೀಗಾಗಿ 20 ವರ್ಷಗಳ ಹಿಂದೆ ಕನ್ನಡ ಶಾಲೆಗಳೇ ಬಂದ್ ಆಗಿ ಮರಾಠಿ ಶಾಲೆಗಳು ತನ್ನ ಪ್ರಾಬಲ್ಯ ಮೆರೆದಿದ್ದವು. ಕರ್ನಾಟಕ ನೆಲದಲ್ಲೇ ಕನ್ನಡ ಮಾಯವಾಗುತ್ತಿರುವುದು ಅರಿವಿಗೆ ಬರುತ್ತಿದ್ದಂತೆ ಕನ್ನಡ ಸಂಘಟನೆಗಳು ಕೂಡ ಕನ್ನಡ ಕಲಿಸಲು ಹಾಗೂ ಕನ್ನಡ ಪ್ರೀತಿ ಬೆಳೆಸಲು ಹಲವು ಕಾರ್ಯಕ್ರಮ ರೂಪಿಸಿತ್ತು. ಜೊತೆಗೆ ಪೋಷಕರಲ್ಲಿ ಕನ್ನಡ ಪ್ರೇಮ ಬೆಳೆಸುವ ಕಾರ್ಯ ಸಹ ನಡೆಸಿತ್ತು. ಪರಿಣಾಮ ಫಲಿತಾಂಶ ಕಾಣುತ್ತಿದ್ದು ಮರಾಠಿ ಶಾಲೆಗಳು ಹಂತ ಹಂತವಾಗಿ ಮುಚ್ಚುತ್ತಿವೆ. ಇದನ್ನೂ ಓದಿ:ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್
ಬದಲಾವಣೆ ಹೇಗಾಯ್ತು?
ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಮಟ್ಟಿಗೆ ಮರಾಠಿ, ಕೊಂಕಣಿ ಅತೀ ಪ್ರಭಾವ ಹೊಂದಿದ ಭಾಷೆಯಾಗಿದೆ. ಇನ್ನು ಇಲ್ಲಿನ ಜನ ಉದ್ಯೋಗ, ವ್ಯವಹಾರಕ್ಕಾಗಿ ಗೋವಾ ನೆಚ್ಚಿಕೊಂಡಿದ್ದರಿಂದಾಗಿ ಕೊಂಕಣಿ, ಮರಾಠಿ ಅನಿವಾರ್ಯವಾಗಿತ್ತು. ಹೀಗಾಗಿ ತಮ್ಮ ಮಕ್ಕಳಿಗೆ ಮರಾಠಿ ಶಾಲೆಯಲ್ಲಿಯೇ ಶಿಕ್ಷಣ ಕೊಡಿಸುತ್ತಿದ್ದರು. ಇದರಿಂದಾಗಿ ಈ ಭಾಗದಲ್ಲಿ ಕನ್ನಡ ಮಾತನಾಡುವ, ವ್ಯವಹರಿಸುವ ಜನರ ಸಂಖ್ಯೆ ವಿರಳವಾಗಿತ್ತು. ಹೀಗಾಗಿ ಬೇರೆ ರಾಜ್ಯಕ್ಕೆ ಬಂದಿದ್ದೇವೆ ಎಂದು ಕನ್ನಡಿಗರಿಗೆ ಅನುಭವ ಆಗುತಿತ್ತು. ಆದರೆ ಈಗ ಗೋವಾ ರಾಜ್ಯದಂತೆ ಕರ್ನಾಟಕದಲ್ಲಿಯೂ ಉದ್ಯೋಗದ ವಿಫುಲ ಅವಕಾಶ ದೊರೆಯುತಿದ್ದು, ಕಾರವಾರದ ಸ್ಥಳೀಯ ಜನರು ಕನ್ನಡ ಭಾಷೆಯತ್ತ ಮುಖಮಾಡಿದ್ದಾರೆ.
ಹೋರಾಟ ಹೇಗಾಯ್ತು?
2008ರಲ್ಲಿ ಸದಾಶಿವ ಘಡದ ಗೋವಾ ಕೊಂಕಣಿ ಮಂಚ್‍ನ ಪ್ರಕಾಶ್ ಪಾಲನ್ಕರ್, ಅಂದಿನ ಪುರಸಭಾ ಸದಸ್ಯೆ ಆಶಾ ಪಾಲನ್ಕರ್ ನೇತೃತ್ವದಲ್ಲಿ ಕಾರವಾರವನ್ನು ಗೋವಾ ರಾಜ್ಯಕ್ಕೆ ಸೇರಿಸಬೇಕೆಂದು ದೊಡ್ಡ ಪ್ರತಿಭಟನೆ ಆಗ್ರಹ ನಡೆದಿತ್ತು. ಇದಕ್ಕೆ ವಿರುದ್ಧವಾಗಿ ಅಂದಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಾನಾಯ್ಕ, ಸಾಹಿತಿ ಚಂಪಾ, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಚಂದ್ರು ಹಾಗೂ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆಸಿ, ಮನೆ ಮನೆಗೆ ತೆರಳಿ ಕನ್ನಡ ಪರ ಪ್ರಚಾರ, ಶಿಕ್ಷಣ, ಕನ್ನಡ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕನ್ನಡ ಅಭಿಮಾನವನ್ನು ಹೆಚ್ಚಿಸಲಾಯಿತು. ಇದರ ಫಲಶೃತಿಯಿಂದ ಕಾರವಾರ ಗೋವಾಕ್ಕೆ ಸೇರಬೇಕೆನ್ನುವ ಒತ್ತಾಯ ಮಾಯವಾಗಿ ಕನ್ನಡದ ಪರ ಒಲವು ಹೆಚ್ಚಾಗುವುದರ ಜೊತೆಗೆ ಕನ್ನಡದಲ್ಲೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಇಲ್ಲಿನ ಜನ ಉತ್ಸುಕರಾದರು. ಅಂದು ಬಿತ್ತಿದ್ದ ಕನ್ನಡದ ಬೀಜ ಈಗ ಚಿಗುರೊಡೆದು ಮರವಾಗುತ್ತಿದೆ.
ಗಡಿ ನಾಡಿನ ಕಾರವಾರದಲ್ಲಿ ಮರಾಠಿ ಶಾಲೆಗಳ ಪ್ರಾಬಲ್ಯವಿದ್ದ ಸ್ಥಳಗಳಲ್ಲಿ ಸದ್ಯ ಮರಾಠಿ ಶಾಲೆಗಳು ಸಂಪೂರ್ಣ ಬಂದ್ ಆಗುವ ಹಂತಕ್ಕೆ ತಲುಪಿವೆ. ಈ ಮೂಲಕ ಕನ್ನಡಕ್ಕೆ ಹೆಚ್ಚಿನ ಒಲವು ತೋರಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದ್ದು, ಕನ್ನಡದ ಏಕೈಕ ಭುವನೇಶ್ವರಿ ದೇವಿಯ ಸನ್ನಿಧಿಯಿರುವ ಈ ಜಿಲ್ಲೆಯಲ್ಲಿ ಕನ್ನಡ ಮರವಾಗಿ ಬೆಳೆದಿರುವುದು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದೆ.