ಕನ್ನಡದ ಸರಿಗಮಪ ಗ್ರ್ಯಾಂಡ್ ಫಿನಾಲೆ ರದ್ದು: ಸಚಿವರ ಸಭೆಯಲ್ಲಿ ನಡೆದಿದ್ದೇನು?

Public TV
1 Min Read
saregamapa

ನಿನ್ನೆ ಯಾದಗಿರಿಯಲ್ಲಿ (Yadagiri) ನಡೆಯಬೇಕಿದ್ದ ಜೀ ಕನ್ನಡ ವಾಹಿನಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ’ (Saregamappa) ಕಾರ್ಯಕ್ರಮ ಶುರುವಾಗುವ ಅರ್ಧ ಗಂಟೆ ಮುಂಚೆಯೇ ರದ್ದಾಗಿದೆ. ಸಂಜೆ 6 ಗಂಟೆಗೆ ಫಿನಾಲೆ ಶೋ ನಡೆಯಬೇಕಿತ್ತು. ಅದಕ್ಕೂ ಅರ್ಧಗಂಟೆ ಮುಂಚೆ ವೇದಿಕೆಗೆ ಬಂದ ವಾಹಿನಿಯ ಪ್ರತಿನಿಧಿ, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮವು ರದ್ದಾದ (Canceled) ಬಗ್ಗೆ ಮಾಹಿತಿ ನೀಡಿದರು. ಸಹಜವಾಗಿಯೇ ಅಭಿಮಾನಿಗಳಿಗೆ ಈ ನಡೆ ನಿರಾಸೆ ಮೂಡಿಸಿತು.

saregamapa 1 1

ಯಾದರಿಗಿ ಜಿಲ್ಲಾ ಮೈದಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಅಂದಾಜು 35 ಸಾವಿರ ಜನರು ನೆರೆದಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, (Dinesh Gundurao) ಕಾರ್ಯಕ್ರಮಕ್ಕೂ ಮುನ್ನ ಜಿಲ್ಲೆಯ ಅಧಿಕಾರಿಗಳ ಜೊತೆ ಕೆಡಿಪಿ ಸಭೆ ಮಾಡುತ್ತಿದ್ದರು. ಅದೇ ವೇಳೆಯಲ್ಲೇ  ಕಾರ್ಯಕ್ರಮ ನಡೆಸದಂತೆ ಗುಪ್ತಚರ ಇಲಾಖೆಯಿಂದ (Intelligence Department) ಮಾಹಿತಿ ಬಂದಿದೆ ಎಂದು ಹೇಳಲಾಗುತ್ತಿದೆ. ಗೃಹ ಸಚಿವರು ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿ, ಕಾರ್ಯಕ್ರಮ ರದ್ದು ಮಾಡುವಂತೆ ಸೂಚಿಸಿದ್ದಾರೆ.

saregamapa 3

ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ತಲೆಬಿಸಿಯಲ್ಲಿರುವ ಪೊಲೀಸ್ ಇಲಾಖೆಯು, ಕಾರ್ಯಕ್ರಮ ನೋಡಲು ಈ ಪ್ರಮಾಣದಲ್ಲಿ ಜನರು ಸೇರಿದ್ದರಿಂದ ಏನಾದರೂ ಸಣ್ಣ ಅವಘಡ ನಡೆದರೂ, ಅನಾಹುತ ತಪ್ಪಿದ್ದಲ್ಲ ಎಂದರಿತು ಕಾರ್ಯಕ್ರಮವನ್ನು ರದ್ದು ಮಾಡುವಂತೆ ಸೂಚಿಸಿದ್ದಾರೆ.

saregamapa 5

ಜಿಲ್ಲಾಡಳಿತಕ್ಕೆ ಇಂಥದ್ದೊಂದ ಸಂದೇಶ ಬಂದ ತಕ್ಷಣವೇ ಜೀ ವಾಹಿನಿಯ ಆಯೋಜಕರಿಗೆ ಮಾಹಿತಿ ನೀಡಿ, ಕಾರ್ಯಕ್ರಮವನ್ನು ರದ್ದು ಮಾಡುವಂತೆ ತಿಳಿಸಿದ್ದಾರೆ. ಅನಿವಾರ್ಯವಾಗಿ ಕಾರ್ಯಕ್ರಮ ರದ್ದು ಮಾಡಿದೆ ವಾಹಿನಿ. ಗುಪ್ತಚರ ಮಾಹಿತಿಯನ್ನು ಬಹಿರಂಗ ಪಡಿಸದೇ ತಾಂತ್ರಿಕ ಕಾರಣವನ್ನು ನೀಡಿ, ಮೈದಾನವನ್ನು ಖಾಲಿ ಮಾಡಿಸಲಾಗಿದೆ.

ಕಾರ್ಯಕ್ರಮ ರದ್ದಾದ ಕುರಿತಂತೆ ನಾನಾ ರೆಕ್ಕೆಪುಕ್ಕಗಳನ್ನೂ ಕಟ್ಟಲಾಗುತ್ತಿದೆ. ರಾಜಕೀಯ ಬಣ್ಣವನ್ನೂ ಬಳೆಯಲಾಗುತ್ತಿದೆ. ರಾಜಕಾರಣಿಗಳ ಸಣ್ಣತನದಿಂದಾಗಿ ಈ ಕಾರ್ಯಕ್ರನ ನಡೆಯಲಿಲ್ಲ ಎಂದು ಚರ್ಚಿಸಲಾಗುತ್ತಿದೆ. ಆದರೆ, ಅದೆಲ್ಲವೂ ಸುಳ್ಳು ಅಂತಿದ್ದಾರೆ ವಾಹಿನಿಯ ಪ್ರತಿನಿಧಿ.

Share This Article