ChikkamagaluruDistrictsKarnatakaLatest

ಕಾಫಿನಾಡ ವಿವಾದಿತ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್

ಚಿಕ್ಕಮಗಳೂರು: ಕಾಫಿನಾಡಿನ ಶೃಂಗೇರಿಯಲ್ಲಿ ವಾದ-ವಿವಾದ, ಆರೋಪ-ಪ್ರತ್ಯಾರೋಪಗಳ ಮಧ್ಯೆ ನಡೆಯುತ್ತಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್ ಬಿದ್ದಿದ್ದು, ಎರಡನೇ ದಿನದ ಕಾರ್ಯಕ್ರಮವನ್ನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮುಂದೂಡಿದೆ. ಪೊಲೀಸರ ಅನುಮತಿ ಇಲ್ಲದ ಕಾರಣ ಕಾರ್ಯಕ್ರಮವನ್ನ ಮುಂದೂಡಲು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ.

ಸಮ್ಮೇಳನ ಅಧ್ಯಕ್ಷರ ವಿರುದ್ಧ ತೀವ್ರವಾದ ವಿರೋಧದ ಮಧ್ಯೆಯೂ ಶುಕ್ರವಾರ ಸಮ್ಮೇಳನ ಆರಂಭಗೊಂಡಿತ್ತು. ಮೆರವಣಿಗೆಗೆ ಪೊಲೀಸರ ಅನುಮತಿ ನೀಡದ ಕಾರಣ ಅಧ್ಯಕ್ಷರ ಮೆರವಣಿಗೆ ಇಲ್ಲದೆ ನೇರವಾಗಿ ವೇದಿಕೆ ಕಾರ್ಯಕ್ರಮದ ಮೂಲಕ ಸಮ್ಮೇಳನ ಆರಂಭವಾಗಿತ್ತು. ಆದರೆ ಸಮ್ಮೇಳನದ ಅಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಡೆ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ, ನಕ್ಸಲ್ ವಿರೋಧಿ ಹೋರಾಟ ಸಮಿತಿ ಮತ್ತು ಶ್ರೀರಾಮಸೇನೆ ಸೇರಿದಂತೆ ಕೆಲವರು ಅಧ್ಯಕ್ಷರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದರು.

ಕಳೆದೊಂದು ತಿಂಗಳಿಂದಲೂ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ್ದ ಸಂಘಟನೆಗಳು ಕೂಡ ಸಮ್ಮೇಳನದ ಮುಂಭಾಗ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಅನುಮತಿ ಇಲ್ಲದ ಕಾರಣ ಮಧ್ಯಾಹ್ನದ ಕಾರ್ಯಕ್ರಮವನ್ನ ಮೊಟಕುಗೊಳಿಸುವಂತೆ ಪೊಲೀಸರು ಸಾಹಿತ್ಯ ಪರಿಷತ್‍ಗೆ ಸೂಚಿಸಿದರು. ಆದರೆ ಕಸಾಪ ಕಾರ್ಯಕ್ರಮ ನಿಲ್ಲಿಸಲು ಮೀನಾಮೇಶ ಎಣಿಸಿತ್ತು.

ಅಷ್ಟೇ ಅಲ್ಲದೇ ಕಸಾಪ ಅನುಮತಿ ಇಲ್ಲದೆ ಧ್ವನಿವರ್ಧಕ ಬಳಸಿತ್ತು. ನಾಳಿನ ಕಾರ್ಯಕ್ರಮಕ್ಕೂ ಪೊಲೀಸರು ಅನುಮತಿ ನೀಡದ ಹಿನ್ನೆಲೆ ಕಸಾಪ ಇಂದು ಸಮ್ಮೇಳನದ ಎರಡನೇ ದಿನ ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನ ಮುಂದೂಡಿದೆ. ಮುಂದಿನ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ.

Leave a Reply

Your email address will not be published.

Back to top button