ಮಂಡ್ಯ: ಜಿಲ್ಲೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಎರಡು ದಿನಗಳ ಕಾಲ ಜಿಲ್ಲೆಯ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮಂಡ್ಯ (Mandya) ಜಿಲ್ಲೆಯಲ್ಲಿ ಡಿ.20 ರಿಂದ ಡಿ.22ರವರೆಗೆ ಮೂರು ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಡಿ.20 ಹಾಗೂ 21 ರಂದು ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ, ಆದೇಶಿಸಿದ್ದಾರೆ.ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ – ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಶೀಲನೆಗೆ ಮುಂದಾದ ಇಲಾಖೆ
ಜಿಲ್ಲಾಧಿಕಾರಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಗಣ್ಯರು, ನೋಂದಾಯಿತ ಪ್ರತಿನಿಧಿಗಳು ಮಂಡ್ಯಕ್ಕೆ ಬರಲಿದ್ದಾರೆ. ಅವರಿಗೆ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಕನ್ನಡದ ಐಕ್ಯತೆಯ ಸಂಕೇತವಾಗಿರುವ ನಮ್ಮ ಸಾಹಿತ್ಯ-ಸಂಸ್ಕೃತಿ-ಪರಂಪರೆಯನ್ನು ಬಿಂಬಿಸುವ ಹಾಗೂ ನಾಡು-ನುಡಿಯ ಬಗೆಗಿನ ಅಭಿಮಾನವನ್ನು ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಉಪಾನ್ಯಾಸಕರು ಭಾಗವಹಿಸುವ ಮೂಲಕ ಸಾಹಿತ್ಯಾಭಿರುಚಿ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ನಾಡು ನುಡಿ ಬಗ್ಗೆ ವಿವಿಧ ಗೋಷ್ಠಿಗಳು ಇರುವುದರಿಂದ ಜ್ಞಾನಾರ್ಜನ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಡಿ.20 ಮತ್ತು 21 ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಎರಡು ದಿನಗಳ ರಜೆ ಘೋಷಿಸಲಾಗಿದೆ. ಹಾಗಾಗಿ ಜಿಲ್ಲೆಯ ಸಮಸ್ತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು. ಸದರಿ ರಜೆ ಅವಧಿಯನ್ನು ಸರ್ಕಾರಿ ರಜಾ ದಿನದಂದು ಸರಿದೂಗಿಸಿ ಪಾಠ-ಪ್ರವಚನ ನಡೆಸಬೇಕೆಂದು ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ಶೀಘ್ರವೇ ಮಲ್ಲಾಬಾದ್ ಏತ ನೀರಾವರಿ ಯೋಜನೆ ಟೆಂಡರ್ ಕೈಗೆತ್ತಿಕೊಳ್ಳುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್