ಕನ್ನಡಿಗರಿಗೆ ಕೈಗಾರಿಕೆಗಳ ಉದ್ಯೋಗದಲ್ಲಿ ಶೇ.80 ರಷ್ಟು ಪ್ರಾಶಸ್ತ್ಯ, ಭಾಷಾ ಅಭಿವೃದ್ಧಿಗೆ ಶೀಘ್ರ ಕಾನೂನು ಸ್ವರೂಪ: ಬೊಮ್ಮಾಯಿ

Public TV
6 Min Read
kannada sahitya sammelana Haveri 2

ಹಾವೇರಿ : ಸಮಗ್ರ ಭಾಷಾ ಅಭಿವೃದ್ಧಿಗೆ ಕಾನೂನಿನ ಸ್ವರೂಪ ನೀಡಿ, ಕನ್ನಡಿಗರಿಗೆ ಕೈಗಾರಿಕೆಗಳ ಉದ್ಯೋಗದಲ್ಲಿ ಶೇ.80 ರಷ್ಟು(80% jobs quota for Kannadigas) ಪ್ರಾಶಸ್ತ್ಯ ನೀಡಲಾಗುವುದು‌. ಗಡಿ ಭಾಗದ ಹಾಗೂ ಗಡಿ ಆಚೆಗಿನ ಕನ್ನಡಿಗರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಗಡಿ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya Sammelana) ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಕನ್ನಡಿಗರ ಬದುಕು. ಪುರಾತನ, ಶ್ರೇಷ್ಠವಾದುದು. ಇಡೀ ಜಗತ್ತಿನಲ್ಲಿ ಕನ್ನಡದ ಸಂಸ್ಕೃತಿ ಅತ್ಯಂತ ಶ್ರೇಷ್ಠ ಮತ್ತು ಪರಂಪರೆ ಹಾಗೂ ಚರಿತ್ರೆ ಇರುವಂಥದ್ದು. ಕನ್ನಡದ ಸಂಸ್ಕೃತಿಗೆ ದೊಡ್ಡ ಶಕ್ತಿ, ಅರ್ಥ, ಭಾವನೆಗಳನ್ನು ತುಂಬಿ ಹಾಗೂ ಬದುಕನ್ನು ಕೊಟ್ಟಿರುವುದು ಕನ್ನಡದ ಸಾಹಿತ್ಯ ಲೋಕ. ಕನ್ನಡದ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ದೊಡ್ಡದಿದ್ದು ಇದನ್ನು ಗುರುತಿಸಿ ಬೆಳೆಸಿಕೊಂಡು ಹೋಗಬೇಕಾದ್ದು ಈ ಸಮ್ಮೇಳನಗಳ ಉದ್ದೇಶ. ಕನ್ನಡದ ಕಿಚ್ಚನ್ನು ಮತ್ತೊಮ್ಮೆ ಹಚ್ಚಿ, ಕನ್ನಡ ಕಂಪನ್ನು ಎಲ್ಲೆಡೆ ಪಸರಿಸಬೇಕು. ಕನ್ನಡವನ್ನು ಆಳವಾಗಿ ಭಾರತದಲ್ಲಿ ಬಿತ್ತಬೇಕು. ಅದು ಬೆಳೆದು ಹೆಮ್ಮರವಾಗಿ ಬೆಳೆಯಬೇಕು. ಈ ಉದ್ದೇಶಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದರು.

ದೊಡ್ಡ ಸಾಧನೆ
ತಮ್ಮ ಹೆಸರಿನಂತೆಯೇ ಸಾಹಿತ್ಯ, ಸಾಂಸ್ಕೃತಿಕ ರಂಗಗಳಲ್ಲಿ ದೊಡ್ಡ ಸಾಧನೆ ಮಾಡಿರುವ ಪ್ರೊ.ದೊಡ್ಡರಂಗೇಗೌಡರು (Doddarangegowda) ತಮ್ಮ ಹೆಸರಿಗೆ ಅನ್ವರ್ಥವಾಗುವಂತಹ ವ್ಯಕ್ತಿತ್ವ ಹೊಂದಿದ್ದಾರೆ. ಅವರೊಬ್ಬ ಪರಿಪೂರ್ಣ ಸಾಹಿತಿ. ಮಾನವೀಯತೆಯ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಂಡು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಮಾರ್ಮಿಕವಾಗಿ ತಿಳಿಸುವ ಕೆಲಸವನ್ನು ಅವರ ಸಾಹಿತ್ಯ, ಕವಿತೆಗಳಲ್ಲಿ, ಹಾಡುಗಳಲ್ಲಿ ಕಂಡುಬರುತ್ತದೆ. ಸಾಹಿತ್ಯ, ಸಿನಿಮಾ ಮತ್ತು ಇತರ ರಂಗದಲ್ಲಿಯೂ ಖ್ಯಾತಿ ಪಡೆದು ದೊಡ್ಡ ಹೃದಯ ಹೊಂದಿದವರು ಎಂದು ಬಣ್ಣಿಸಿದರು.

kannada sahitya sammelana Haveri 2

ಕನ್ನಡದ ತೇರು
ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿರುವ ಡಾ.ಹೆಚ್.ಎಸ್.ವೆಂಕಟೇಶಮೂರ್ತಿಯವರೂ ಕೂಡ ಸಂವೇದನಾಶೀಲ ಕಾವ್ಯದ ಕರ್ತೃವಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ತೇರನ್ನು ಎಳೆದು ಹಾವೇರಿಗೆ ಕೊಟ್ಟು, ಹಾವೇರಿಯಿಂದ ದೊಡ್ಡರಂಗೇಗೌಡರು ರಾಜ್ಯದಲ್ಲಿ ಈ ತೇರನ್ನು ಕೊಂಡೊಯ್ಯಲಿದ್ದಾರೆ ಎಂದು ಹೇಳಿದರು.

ಕನ್ನಡವನ್ನು ಕಟ್ಟಲು ಆತ್ಮಸಂಕಲ್ಪ
ಒಂದು ಭಾಷೆ , ಸಂಸ್ಕೃತಿ ಬೆಳೆಯಬೇಕಾದರೆ ನಡೆದು ಬಂದ ದಾರಿಯನ್ನು ಸಿಂಹಾವಲೋಕನ ಮಾಡಬೇಕು. ಇದರಲ್ಲಿ ನಮ್ಮ ಪಾತ್ರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಮುಂದಿನ ಭವಿಷ್ಯವನ್ನು ನಿರ್ಮಿಸಲಬೇಕು. ಕನ್ನಡದ ಪರಂಪರೆ ಅತ್ಯಂತ ಶ್ರೀಮಂತ ಪರಂಪರೆ. ಹಾಗೂ ಕನ್ನಡ ಭಾಷೆ ಎಂದಿಗೂ ಬಡವಾಗಿಲ್ಲ. ಶತ ಶತ ಮಾನಗಳವರೆಗೆ, ಸೂರ್ಯ ಚಂದ್ರರು ಇರುವವರೆಗೂ ಕನ್ನಡ ಶ್ರೀಮಂತವಾಗಿ ಬೆಳೆಯುತ್ತಲೇ ಸಾಗುತ್ತದೆ. ಕನ್ನಡಕ್ಕೆ ಆಪತ್ತು ತರುವ ಯಾವುದೇ ಶಕ್ತಿ ಹುಟ್ಟಿಲ್ಲ. ಹುಟ್ಟುವುದೂ ಇಲ್ಲ. ಆದ್ದರಿಂದ ಆತ್ಮವಿಶ್ವಾದಿಂದ, ಆತ್ಮಸಂಕಲ್ಪದಿಂದ ಕನ್ನಡವನ್ನು ಕಟ್ಟಿ ಬೆಳೆಸೋಣ. ಬೆಳವಣಿಗೆಯಲ್ಲಿ ನಮ್ಮದೂ ಕೊಡುಗೆ ಇರಲಿ ಎಂಬ ಭಾವನೆಯಿಂದ ಸಮ್ಮೇಳನವನ್ನು ಪ್ರಾರಂಭ ಮಾಡಬೇಕಿದೆ. ಆದಿ ಕವಿ ರನ್ನ ಪಂಪರಿಂದ ಹಿಡಿದು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದವರು ಕನ್ನಡಿಗರು. ದೇಶದ ಯಾವುದೇ ರಾಜ್ಯದಲ್ಲಿ ಎಂಟು ಜನ ಜ್ಞಾನಪೀಠ ಪ್ರಶ್ತಸ್ತಿ ಪಡೆದ ಉದಾಹರಣೆ ಇಲ್ಲ. ಇದು ಕನ್ನಡದ ಸಾಹಿತ್ಯದ ಆತ್ಮಶಕ್ತಿಯನ್ನು ತೋರಿಸುತ್ತದೆ. ಎರಡು ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ಕನ್ನಡಕ್ಕೆ ಲಭ್ಯವಾಗಿದೆ ಎಂದರು.

kannada sahitya sammelana Haveri 1

ವಿಭಿನ್ನತೆಯಲ್ಲಿ ಏಕತೆ
ಕನ್ನಡದ ಶ್ರೀಮಂತ ಲೋಕಕ್ಕೆ ಅಂತ:ಸತ್ವ ಮತ್ತು ಆಧ್ಯಾತ್ಮಿಕ ಬದುಕಿನ ದಾರಿಯನ್ನು ಹಾಗೂ ಕನ್ನಡದವನ್ನೂ ಶ್ರೀಮಂತ ಮಾಡಿರುವುದು ವಚನ ಮತ್ತು ದಾಸ ಸಾಹಿತ್ಯ ಪ್ರಕಾರಗಳು. ಇವೆರಡೂ ಕನ್ನಡದ ಅಂತಃಸತ್ವ ಗಟ್ಟಿಗೊಳಿಸಿವೆ. ಇವೆಲ್ಲವನ್ನೂ ನಮ್ಮ ದಿನನಿತ್ಯದ ಬದುಕಿನಲ್ಲ ಅನುಭವಿಸುತ್ತಿದ್ದೇವೆ. ಕನ್ನಡಿಗರ ಭಾಷೆ ವಿಭಿನ್ನತೆಯಲ್ಲಿ ಏಕತೆ ಇದೆ. ನಡುನಾಡ ಕನ್ನಡ, ಗಡಿನಾಡು ಕನ್ನಡ, ತ್ತರ, ದಕ್ಷಿಣ ಕರ್ನಾಟಕ, ಕರಾವಳಿ, ಕಲ್ಯಾಣ ಕರ್ನಾಟಕದ ಕನ್ನಡ ಎಲ್ಲದರಲ್ಲಿಯೂ ಭಾಷೆಯ ಸೊಗಡು ಅಲ್ಲಿನ ಬದುಕಿನ ಜೊತೆಗೆ ಹಾಸುಹೊಕ್ಕಾಗಿ ಬೆಳೆಯುತ್ತಿದೆ. ಕನ್ನಡದ ವಿಭಿನ್ನ ಆಯಾಮಗಳೂ ಮೂಲ ಕನ್ನಡದ ಜೊತೆಗೆ ಬೆಳೆಯುತ್ತಿರುವುದು ಹೆಮ್ಮೆಯ ವಿಚಾರ. ಕನ್ನಡ ಭಾಷೆಗೆ ದೊಡ್ಡ ಪರಂಪರೆಯಿದೆ. ಕನ್ನಡದ ಹೃದಯಗಳು ಒಂದಾಗಲು ಅವಕಾಶ ದೊರೆತಿದ್ದು ಕರ್ನಾಟಕ ಏಕೀಕರಣದ ಹೋರಾಟದ ಮೂಲಕ ಕರ್ನಾಟಕ ರಾಜ್ಯ ಸ್ಥಾಪನೆಯಾದಾಗ ನಮ್ಮದೇ ನಾಡು, ರಾಜ್ಯ ದೊರಕಿಸಿಕೊಳ್ಳಲು ಸಾಧ್ಯವಾಯಿತು. ಕರ್ನಾಟಕ ಏಕೀಕರಣ ಚಳುವಳಿಗೆ ಹಳೆಯ ಮೈಸೂರು ಭಾಗದ ಜನರೂ ಕೈಜೋಡಿಸಿದ ಪರಿಣಾಮವಾಗಿ ಕನ್ನಡ ಭಾಷಿಕರೆಲ್ಲ ಒಂದು ಆಡಳಿತದ ತೆಕ್ಕೆಗೆ ಒಳಪಡಲು ಸಾಧ್ಯವಾಯಿತು ಎಂದು ತಿಳಿಸಿದರು.

ಏಕೀಕರಣ ಹೋರಾಟ
ಉತ್ತರ ಕರ್ನಾಟಕ ಎಲ್ಲಾ ಮುಖಂಡರು ಹೋರಾಟ ಮಾಡಿದಾಗ, ಕುವೆಂಪು ಮತ್ತೆಲ್ಲರೂ ಸೇರಿ ಕನ್ನಡವನ್ನು ಒಂದು ಮಾಡಿದ್ದಾರೆ. ಹಾವೇರಿಯ ಸಿದ್ದಪ್ಪ ಹೊಸಮನಿ, ಅಂಗಾರಪ್ಪ ದೊಡ್ಡಮೇಟಿ, ಗುದ್ಲೆಪ್ಪ ಹಳ್ಲಿಕೇರಿ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಇವರೆಲ್ಲರೂ ಏಕೀಕರಣ ಹೋರಾಟದ ಮುಂಚೂಣಿಯಲ್ಲಿದ್ದವರು. ಇವರೆಲ್ಲರ ಹೋರಾಟದ ಪರಿಣಾಮವಾಗಿ ಇಂದು ಕನ್ನಡ ಭಾಷೆ, ಕನ್ನಡ ಒಂದಾಗಿದೆ. ಈ ಹೋರಾಟ ಸ್ವತಂತ್ರ ಹೋರಾಟದಿಂದ ಬಂದದ್ದು. ಹಾವೇರಿಯ ಮೈಲಾರ ಮಹದೇವಪ್ಪನವರ ಹೋರಾಟ, ತ್ಯಾಗ, ಬಲಿದಾನ ಎಂದೂ ಮರೆಯಲು ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿ ಕನ್ನಡಿಗರ ಭಾವನೆಯನ್ನು ಒಗ್ಗೂಡಿಸಿದ್ದಾರೆ. ಎಲ್ಲಾ ಭಾವನೆಗಳಲ್ಲೂ ನಮ್ಮ ಒಡಲಾಳದಲ್ಲಿ ಇರಿಸಿಕೊಂಡು ಮುಂದುವರೆಯುತ್ತಿದ್ದೇವೆ ಎಂದರು.

ನೀರಾವರಿ ದಶಕ
ಕನ್ನಡ ನಾಡು ಸಂಪದ್ಭರಿತವಾಗಿದೆ. 10 ಕೃಷಿ ವಲಯಗಳು ನಮ್ಮ ನಾಡಿನಲ್ಲಿವೆ, ವರ್ಷದ ಎಲ್ಲಾ ದಿನಗಳಲ್ಲಿಯೂ ಈ ನಾಡಿನಲ್ಲಿ ಒಂದಲ್ಲ ಒಂದು ಬೆಳೆ, ಫಸಲು ಸದಾ ಹಸಿರು ಉಕ್ಕಿಸುತ್ತಿರುತ್ತದೆ. ದುಡಿಯುವ ವರ್ಗ , ರೈತರು, ಕೂಲಿಕಾರರು ಈ ನಾಡನ್ನು ಕಟ್ಟಿದ್ದಾರೆ. ಕಳೆದ ಐದು ವರ್ಷಗಳಲ್ಲಿ 1.5 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ಒಂದು ದಶಕ ನೀರಾವರಿ ದಶಕವಾಗಿರುತ್ತದೆ. ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವ ಬದ್ಧತೆ ನಮ್ಮದಾಗಿದೆ. ಆಹಾರ ಉತ್ಪಾದನೆ ನಮ್ಮ ಸ್ವಾಭಿಮಾನದ ಸಂಪತ್ತು. ದುಡಿಯುವ ವರ್ಗ ರಾಜ್ಯವನ್ನು ಕಟ್ಟುತ್ತಿದೆ. ನಾಡು ಕಟ್ಟುವ ರೈತರಿಗೆ, ಕೂಲಿಕಾರ್ಮಿಕರಿಗೆ, ಕುಶಲಕರ್ಮಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

. ಇದನ್ನೂ ಓದಿ: BREAKING- ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಪತ್ರ ಬರೆದಿಟ್ಟು, ದುಬೈಗೆ ಹಾರಿದ ರಾಕಿಭಾಯ್

ದಾರಿದೀಪವಾಗಿರುವ ದಾರ್ಶನಿಕರ ವಚನಗಳು :
ಹಾವೇರಿ ಜಿಲ್ಲೆಯ ದಾರ್ಶನಿಕರಾದ ಸರ್ವಜ್ಞನ ವಚನಗಳು ಇಂದಿಗೂ ದಾರಿದೀಪವಾಗಿದೆ. ಕನಕದಾಸರು, ಸಂತಶಿ ಶುನಾಳ ಶರೀಫರು ಧರ್ಮದ ಚೌಕಟ್ಟನ್ನು ಮೀರಿ ಬದುಕಿಗೆ ಅಧ್ಯಾತ್ಮವನ್ನು ತಂದಿರುವ ಸಂತ. ಪಂಚಾಕ್ಷರಿ ಗವಾಯಿಗಳು, ಹಾನಗಲ್ ಕುಮಾರಸ್ವಾಮಿ, ಗಳಗನಾಥರು, ವಿ.ಕೃ.ಗೋಕಾರರು ಕರ್ನಾಟಕಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಪಾಟೀಲ ಪುಟ್ಟಪ್ಪನವರು, ಚಂದ್ರಶೇಖರ ಪಾಟೀಲರ ಕೊಡುಗೆ ಅಪಾರ ಎಂದು ನೆನಪು ಮಾಡಿಕೊಂಡರು.

ಕನ್ನಡಿಗರ ಕೈಗಳಿಗೆ ಕೆಲಸ ನೀಡುವ ಉದ್ಯೋಗ ನೀತಿ
ಕನ್ನಡ ಭಾಷೆಗೆ ಹತ್ತು ಎಲ್ಲ ಕ್ಷೇತ್ರಗಳಲ್ಲಿ ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂಬ ಆಶಯದಿಂದ ಸಮಗ್ರವಾದ ಕಾನೂನನ್ನು ರೂಪಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆದೇಶದಂತೆ ಈಗಲೇ ರಾಜ್ಯದ ಕಾನೂನು ಆಯೋಗವು ಕರಡು ಸಿದ್ಧಪಡಿಸಿದೆ. ಇನ್ನಷ್ಟು ವಿಸ್ತೃತ ಮತ್ತು ವ್ಯಾಪಕ ಚರ್ಚೆಗಳಾದ ಕೂಡಲೇ ಈ ಕಾನೂನು ಜಾರಿಗೊಳ್ಳುತ್ತದೆ. ಕೈಗಾರಿಕೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಪ್ರಾಶಸ್ತ್ಯ ದೊರೆತು ಎಲ್ಲ ಕನ್ನಡಿಗರ ಕೈಗಳಿಗೆ ಕೆಲಸ ನೀಡುವ ಉದ್ಯೋಗ ನೀತಿಯ ತೀರ್ಮಾನವನ್ನು ರಾಜ್ಯದ ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗುವುದು ಎಂದರು.

ಗಡಿಭಾಗದ ಹಾಗೂ ಗಡಿಯಾಚೆಗಿನ ಕ‌ನ್ನಡಿಗರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ವಿಶೇಷ ಅನುದಾನ‌ ನೀಡಲಾಗುವುದು. ಮೂಲಭೂತಸೌಕರ್ಯ ಸೇರಿದಂತೆ ಗಡಿಭಾಗಗಳ ಸಂಪೂರ್ಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿಭಾಗದ ಕನ್ನಡಿಗರ ಸಮಸ್ಯೆಗಳನ್ನು ನಿವಾರಿಸುವಂತಹ, ಶಾಲೆಗಳನ್ನು ಉಳಿಸುವಂತಹ ಕೆಲಸವನ್ನು ಮಾಡಲಾಗುತ್ತದೆ ಹೇಳಿದರು.

ಕನ್ನಡಿಗರ ಬದುಕನ್ನು ಕಟ್ಟಿಕೊಡುವಂತಹ ವೇದಿಕೆ :
ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಗುವ ನಿರ್ಣಯ ಹಾಗೂ ನಿಲುವುಗಳನ್ನು ಸರ್ಕಾರ ಚಾಚೂ ತಪ್ಪದೇ ಪಾಲಿಸುತ್ತದೆ. ಕನ್ನಡ ಸಾಹಿತ್ಯ ಮತ್ತು ಭಾಷೆಯ ಭವಿಷ್ಯವನ್ನು ಬರೆಯುವಂತಹ , ಕನ್ನಡಿಗರ ಬದುಕನ್ನು ಕಟ್ಟಿಕೊಡುವಂತಹ ವೇದಿಕೆಯಾಗಲಿ. ನವಕರ್ನಾಟಕ ನಿರ್ಮಾಣಕ್ಕೆ ಸಾಹಿತ್ಯ ಸಮ್ಮೇಳನ ಕೊಡುಗೆಯನ್ನು ನೀಡಲಿ. ತಾವೊಬ್ಬ ಕನ್ನಡದ ನಿಯತ್ತಿನ ಸೇವಕ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೆಮ್ಮೆಯಿಂದ ತಿಳಿಸಿದರು.

ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನೀಲ್‌ ಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್‌, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಅರುಣ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಸಲೀಂ ಅಹ್ಮದ್, ಆರ್.ಶಂಕರ್, ಪ್ರದೀಪ ಶೆಟ್ಟರ್, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ವಾಕರಸಾಸಂ ಉಪಾಧ್ಯಕ್ಷ ಬಸವರಾಜ ಕೆಲಗಾರ, ಮಾಜಿ ಸಚಿವರಾದ ಬಸವರಾಜ ಶಿವಣ್ಣವರ, ಮನೋಹರ ತಹಸೀಲ್ದಾರ್‌, ರುದ್ರಪ್ಪ ಲಮಾಣಿ ಮತ್ತಿತರರು ವೇದಿಕೆಯಲ್ಲಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ,ಶಾಸಕ ನೆಹರು ಓಲೇಕಾರ ಸ್ವಾಗತಿಸಿದರು, ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಆಶಯ ಮಾತುಗಳನ್ನಾಡಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *