ಬೆಂಗಳೂರು: ಗಾಂಜಾ ಕಿಕ್ ಸಾಂಗ್ ವಿವಾದದಲ್ಲಿ ನನ್ನದೇನು ತಪ್ಪಿಲ್ಲ. ಚಿತ್ರ ಬಿಡುಗಡೆ ಆಗಿದ್ದರೆ ಹಾಡಿನ ಅರ್ಥ ಗೊತ್ತಾಗುತ್ತಿತ್ತು ಎಂದು ಬಿಗ್ ಬಾಸ್ ವಿಜೇತ ರ್ಯಾಪರ್ ಚಂದನ್ ಶೆಟ್ಟಿ ಹೇಳಿದ್ದಾರೆ.
ಸಿಸಿಬಿ ಪೊಲೀಸ್ ಕಚೇರಿಯಿಂದ ಹೊರ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಚಂದನ್ ಶೆಟ್ಟಿ, ನನ್ನದು ಯಾವುದೇ ತಪ್ಪಿಲ್ಲ. ಅಂತ್ಯ ಚಿತ್ರಕ್ಕಾಗಿ ಮುತ್ತು ಎಂಬವರು ಸಾಹಿತ್ಯ ಬರೆದಿದ್ದು, ಕೇವಲ 5 ಸಾವಿರ ರೂ. ಸಂಭಾವನೆಗಾಗಿ ನಾನು ನನ್ನ ಜವಾಬ್ದಾರಿ ಮರೆತು ಸಂಗೀತ ಸಂಯೋಜನೆ ಮಾಡಿ ಹಾಡಿರುವುದಾಗಿ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿರುವೆ ಎಂದು ತಿಳಿಸಿದರು.
Advertisement
ಅದು ನನ್ನ ಪ್ರಾರಂಭದ ಹಂತವಾಗಿತ್ತು. ಕಡಿಮೆ ಸಂಭಾವನೆ ನೀಡಿದರೂ ಹಾಡಬೇಕಾದ ಪರಿಸ್ಥಿತಿ ಇತ್ತು. ಅಂತ್ಯ ಸಿನಿಮಾ ಡ್ರಗ್ಸ್ ವಿಷಯಾಧಾರಿತ ಸಿನಿಮಾ ಆಗಿದ್ದು, ಚಿತ್ರದ ಮೊದಲ ಭಾಗದಲ್ಲಿ ಡ್ರಗ್ಸ್ ಸೇವನೆ, ಅದರಿಂದ ಸಿಗುವ ಮಜಾದ ಬಗ್ಗೆ ಇದೆ. ಆದರೆ ಎರಡನೇ ಭಾಗದಲ್ಲಿ ಡ್ರಗ್ಸ್‍ನಿಂದಾಗುವ ದುಷ್ಪರಿಣಾಮದ ಕಥೆಯಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಸಿನಿಮಾ ಆಗಿದ್ದರಿಂದ ನಾನು ಹಾಡಲು ಒಪ್ಪಿಕೊಂಡಿದ್ದೆ. ನಿರ್ಮಾಪಕರಿಗೆ ಹಣಕಾಸಿನ ಸಮಸ್ಯೆಯಾಗಿ ಸಿನಿಮಾ ಬಿಡುಗಡೆ ಆಗಲಿಲ್ಲ. ಹೀಗಾಗಿ ಹಾಡಿನ ಉದ್ದೇಶ ಏನು ಅಂತಾ ಅರ್ಥವಾಗಲಿಲ್ಲ ಎಂದು ಸ್ಪಷ್ಟನೆ ನೀಡಿದರು.
Advertisement
Advertisement
ಯುವಕರು ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ಹಿಂದೆ ಹೋಗಬೇಡಿ. ಈ ಪ್ರಕರಣವನ್ನು ಉದಾಹರಣೆಯಾಗಿ ಇಟ್ಟುಕೊಂಡು ಮುಂದೆ ಯಾರೊಬ್ಬರು ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡುವ ಹಾಡುಗಳ ನಿರ್ಮಾಣ ಮಾಡಬಾರದು. ಜೊತೆಗೆ ಸಾಮಾಜಿಕ ಜಾಲತಾಣಕ್ಕೆ ಯಾರು ಅಂತ್ಯ ಸಿನಿಮಾ ಚಿತ್ರದ ಹಾಡನ್ನು ಹಾಕಿರುವಿರಿ ಅದನ್ನು ಡಿಲೀಟ್ ಮಾಡಿ ಎಂದು ಚಂದನ್ ಶೆಟ್ಟಿ ಮನವಿ ಮಾಡಿಕೊಂಡರು.
Advertisement
ಹಾಡು ಬರೆಯುತ್ತೇನೆ: ಪೊಲೀಸರು ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ನಾನು ಬೆಂಬಲ ನೀಡುವ ಉದ್ದೇಶದಿಂದ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಹಾಡು ಬರೆದು, ಸಿಸಿಬಿ ಅಧಿಕಾರಿಗಳಿಂದ ಬಿಡುಗಡೆ ಮಾಡಿಸುತ್ತೇನೆ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ?
ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ರ್ಯಾಪರ್ ಸಿಂಗರ್ ಚಂದನ್ ಶೆಟ್ಟಿಗೆ ಬಂಧನ ಭೀತಿ ಎದುರಾಗಿತ್ತು. ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಅಂತ್ಯ ಸಿನಿಮಾದ ಗಾಂಜಾ ಕಿಕ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವಿಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತರಾದ ಟಿ. ಸುನೀಲ್ ಕುಮಾರ್, ಮಾದಕ ವಸ್ತುಗಳ ಸೇವನೆ ಪ್ರಚೋದನೆಗೆ ಸಂಬಂಧಪಟ್ಟಂತೆ ರ್ಯಾಪರ್ ಚಂದನ್ ಶೆಟ್ಟಿಗೆ ನೋಟಿಸ್ ನೀಡಿದ್ದು, ಅವರು ಮಾದಕ ವಸ್ತುಗಳ ಸೇವನೆಗೆ ಪ್ರಚೋದಿಸುವಂತಹ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv