ಬೆಂಗಳೂರು: ಕನ್ನಡ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ರ‍್ಯಾಪರ್ ಆಲ್ ಓಕೆ ಅಲಿಯಾಸ್ ಅಲೋಕ್ ಆರ್ ಬಾಬು ತಮ್ಮದೇ ಹಾಡುಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಜೊತೆಗೆ ಸಂಗೀತ ನಿರ್ಮಾಪಕರಾಗಿದ್ದಾರೆ. ಇದೀಗ ತಮ್ಮ ಗೆಳತಿಯ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಲ್ ಓಕೆ ಅವರ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ತಮ್ಮ ಗೆಳತಿ ನಿಶಾ ನಟರಾಜನ್ ಜೊತೆಗೆ ಆಲ್ ಓಕೆ ಹಸೆಮಣೆ ಏರಿದ್ದಾರೆ. ಆಲ್ ಓಕೆ ಮತ್ತು ನಿಶಾ ಪರಸ್ಪರ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೆ ತಮ್ಮ ಗೆಳತಿಯ ಜೊತೆ ಎಂಗೇಜ್ ಆಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಇದೀಗ ಎರಡೂ ಕುಟುಂಬದವರು ಒಪ್ಪಿ ಇಬ್ಬರಿಗೂ ವಿವಾಹ ಮಾಡಿಸಿದ್ದಾರೆ.
ಇಶಾ, ಕಂಪನಿಯೊಂದಲ್ಲಿ ಕೆಲಸ ಮಾಡುತ್ತಿದ್ದು, ಕನ್ನಡ ಬ್ರಾಹ್ಮಣ ಮತ್ತು ತಮಿಳಿನ ಐಯ್ಯರ್ ಸಂಪ್ರದಾಯದಂತೆ ಮದುವೆ ನಡೆದಿದೆ. ಇವರ ಆರತಕ್ಷತೆಗೆ ಅನೇಕ ಸ್ನೇಹಿತರು, ಸಿನಿಮಾ ರಂಗದವರು ಬಂದು ನವ ಜೋಡಿಗೆ ಶುಭಾಶಯವನ್ನು ಕೋರಿದ್ದಾರೆ. ನಟ ಪ್ರಥಮ್ ಮತ್ತು ಧನಂಜಯ್ ಕೂಡ ಆರತಕ್ಷತೆಗೆ ಹೋಗಿ ವಿಶ್ ಮಾಡಿದ್ದಾರೆ. ಪ್ರಥಮ್ ನವ ದಂಪತಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ವಿಶ್ ಮಾಡಿದ್ದಾರೆ.
ಆಲ್ ಓಕೆ ಯಾಕಿಂಗೇ, ಯಂಗ್ ಎಂಗೋ, ದೇಜಾ ವು, ನಾನ್ ಕನ್ನಡಿಗ ಸೇರಿದಂತೆ ಅನೇಕ ಕನ್ನಡ ರಾಪ್ ಹಾಡುಗಳಿಂದ ಖ್ಯಾತಿ ಪಡೆದುಕೊಂಡಿದ್ದಾರೆ. ಅಲ್ಲದೆ ಕನ್ನಡದ ಮೊದಲ ಹಿಪ್ ಹಾಪ್ ಬ್ಯಾಂಡ್ ಮತ್ತು ಆಲ್ಬಮ್ ಅರ್ಬನ್ ಲಾಡ್ಸ್ ನಲ್ಲಿ ಪ್ರಮುಖ ಗಾಯಕನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. `ಜೋಶ್’ ಸಿನಿಮಾದಲ್ಲಿ ಆಲ್ ಓಕೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಐದು ವಿಭಿನ್ನ ಭಾಷೆಗಳಲ್ಲಿ 25ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಮತ್ತು ಭಾರತದಾದ್ಯಂತ ವೈರಲ್ ಆಗಿರುವ ಅನೇಕ ಸ್ವತಂತ್ರ ಮ್ಯೂಸಿಕ್ ವಿಡಿಯೋಗಳನ್ನು ಸಂಯೋಜಿಸಿ, ನಿರ್ದೇಶಿಸಿ ಜೊತೆಗೆ ನಿರ್ಮಿಸಿದ್ದಾರೆ.