ಸಂಸ್ಥಾನಗಳು ವಿಲೀನಗೊಂಡ ಬಳಿಕ ಮೈಸೂರು ರಾಜ್ಯವು 1956ರ ನವೆಂಬರ್ 1ರಂದು ಕರ್ನಾಟಕ ರಾಜ್ಯವಾಗಿ ಉದಯವಾದ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಹೆಸರು ಬಂದ ಮೇಲೆ ತನ್ನದೇ ಆದ ಬಾವುಟದ ಅವಶ್ಯಕತೆ ಇದೆ ಎಂದು ಮನಗಂಡು ಕನ್ನಡದ ಹೋರಾಟಗಾರರಾದ ಎಂ.ರಾಮಮೂರ್ತಿ ಅವರು 1965 ರಲ್ಲಿ ಹಳದಿ ಹಾಗೂ ಕೆಂಪು ಬಣ್ಣ ಬಳಸಿ ಬಾವುಟವನ್ನು ಸಿದ್ಧಪಡಿಸಿದ್ದರು.
ಧ್ವಜದ ಹಳದಿ ಬಣ್ಣವು ಅರಿಶಿಣ ಮತ್ತು ಕೆಂಪು ಬಣ್ಣವು ಕುಂಕುಮದ ಸಂಕೇತವಾಗಿದೆ. ಇವೆರಡು ವಸ್ತುಗಳು ಭಾರತದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ವಿವಿಧ ಕಾರಣಗಳಿಗೆ ಬಳಸುತ್ತಾರೆ. ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತ, ಅರಿಶಿಣ ಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ. ಇವೆರಡು ಮಂಗಳವನ್ನು ಮತ್ತು ಯೋಗಕ್ಷೇಮವನ್ನು ಸೂಚಿಸುತ್ತದೆ.
ಅಷ್ಟೇ ಅಲ್ಲದೇ ಹಳದಿ ಬಣ್ಣವು ಶಾಂತಿ, ಸೌಹಾರ್ದತೆ ಸೂಚಿಸಿದರೆ, ಕೆಂಪು ಬಣ್ಣ ಕ್ರಾಂತಿಯ ಸಂದೇಶ ನೀಡುತ್ತದೆ. ಕನ್ನಡಿಗರೂ ಶಾಂತಿಗೆ ಬದ್ಧ, ಯುದ್ಧಕ್ಕೂ ಸಿದ್ಧ ಎಂಬ ಸಂದೇಶವನ್ನು ಕೂಡ ನೀಡುತ್ತದೆ. ಕರ್ನಾಟಕದ ಬಾವುಟ ಸಿದ್ಧಗೊಂಡಾಗ ಬಾವುಟದ ಮಧ್ಯೆ ಕರ್ನಾಟಕದ ಭೂಪಟ ಮತ್ತು ಅದರ ನಡುವೆ ಏಳು ಕವಲುಗಳುಳ್ಳ ತೆನೆಯ ಚಿತ್ರವಿತ್ತು. ಇದರಿಂದ ಮುದ್ರಿಸಲು ಕಷ್ಟವಾಗುತ್ತಿದ್ದರಿಂದ ಅದನ್ನು ತೆಗೆದು ಕೇವಲ ಹಳದಿ ಮತ್ತು ಕೆಂಪು ಬಣ್ಣವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.
ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದಲ್ಲಿ ಸರ್ವಧರ್ಮದವರು ಆಚರಿಸುತ್ತಾರೆ. ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟದೊಂದಿಗೆ ಅಲಂಕರಿಸಲಾಗಿರುತ್ತವೆ. ಅಷ್ಟೇ ಅಲ್ಲದೇ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ
ಕರ್ನಾಟಕ ಬಾವುಟ ವಿವಾದ:
ಮಾಜಿ ಸಿಎಂ ಸಿದ್ದರಾಮಯ್ಯನವರು ಚುನಾವಣೆಯ ಸಮಯದಲ್ಲಿ ಪ್ರತ್ಯೇಕ ರಾಜ್ಯಧ್ವಜ ರೂಪಿಸುವ ಸಂಬಂಧ 2017ರ ಜುಲೈನಲ್ಲಿ 9 ಮಂದಿಯ ಸಮಿತಿಯನ್ನು ರಚಿಸಿದ್ದರು. ಈ ಸಮಿತಿ ರಚಿಸಿದ ಬೆನ್ನಲ್ಲೇ ರಾಜಕೀಯ ಆರೋಪ, ಪ್ರತ್ಯಾರೋಪ ನಡೆದಿತ್ತು. ಕನ್ನಡ ಸಂಘಟನೆಗಳು ಈಗ ನಾವು ಬಳಸುವ ಧ್ವಜವನ್ನೇ ರಾಜ್ಯಧ್ವಜವನ್ನಾಗಿ ಅಂಗೀಕರಿಸಿ ಎಂದು ಬೇಡಿಕೆಯನ್ನು ಇಟ್ಟಿತ್ತು.
ಕಾನೂನು ಏನು ಹೇಳುತ್ತೆ?
ಪ್ರಸ್ತುತ ಭಾರತದಲ್ಲಿ ಜಮ್ಮು ಕಾಶ್ಮೀರ ಹೊರತುಪಡಿಸಿ ಯಾವುದೇ ರಾಜ್ಯಕ್ಕೆ ಪ್ರತ್ಯೇಕ ಧ್ವಜವಿಲ್ಲ. ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2012ರಲ್ಲಿ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸಂಸ್ಥೆಗಳ ಮೇಲೆ ಕನ್ನಡ ಬಾವುಟ ಹಾರಿಸುವಂತೆ ಬಜೆಟ್ ಮಂಡಿಸುವ ವೇಳೆ ಸುತ್ತೋಲೆ ಹೊರಡಿಸಿದ್ದರು. ಈ ಮಧ್ಯೆ ವಕೀಲ ಪ್ರಕಾಶ್ ಶೆಟ್ಟಿ ಎಂಬುವರು ಕನ್ನಡ ಧ್ವಜವನ್ನು ದುರ್ಬಳಕೆ ಆಗುತ್ತಿರುವ ಬಗ್ಗೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಕನ್ನಡ ನಾಡಿಗೆ ಅಧಿಕೃತವಾದ ಧ್ವಜ ಇಲ್ಲ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿತ್ತು. ಅಷ್ಟೇ ಅಲ್ಲದೇ ಕನ್ನಡ ನಾಡಿಗೆಂದು ಅಧಿಕೃತ ಧ್ವಜ ಇಲ್ಲ. ಖಾಸಗಿಯವರು ಭಾವನಾತ್ಮಕವಾಗಿ ಧ್ವಜವನ್ನು ಹಾರಿಸುತ್ತಿದ್ದಾರೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದರು.
ಕಾನೂನು ಪಂಡಿತರು ಏನು ಹೇಳ್ತಾರೆ?
ರಾಜ್ಯಕ್ಕೆಂದೇ ಪ್ರತ್ಯೇಕ ಧ್ವಜವನ್ನು ರೂಪಿಸುವ ಬಗ್ಗೆ ಸಂವಿಧಾನದಲ್ಲಿ ವಿಶೇಷವಾಗಿ ಉಲ್ಲೇಖವಾಗಿಲ್ಲ. ಆದರೆ ರಾಷ್ಟ್ರಧ್ವಜಕ್ಕಿಂತ ಕಡಿಮೆ ಎತ್ತರದಲ್ಲಿ ರಾಜ್ಯಧ್ವಜ ಹಾರಿಸಬೇಕಾಗುತ್ತದೆ. ರಾಜ್ಯಧ್ವಜ ಕಡಿಮೆ ಎತ್ತರದಲ್ಲಿ ಹಾರಿಸಿದರೆ ರಾಷ್ಟ್ರಧ್ವಜಕ್ಕೆ ಅವಮಾನ ಆಗುವುದಿಲ್ಲ ಎಂದು ಹೇಳಿದ್ದಾರೆ.
ಸಿಎಂ ಎಚ್‍ಡಿಕೆ ಹೇಳಿದ್ದು ಏನು?
ದೇಶದ ಸಂವಿಧಾನದಲ್ಲಿ ಪ್ರತ್ಯೇಕ ರಾಜ್ಯಧ್ವಜ ತಯಾರಿಸಲು ಅವಕಾಶವಿಲ್ಲ. ರಾಷ್ಟ್ರಧ್ವಜವನ್ನು ನಾವು ಬಳಸುತ್ತಿರುವಾಗ ರಾಜ್ಯ ಧ್ವಜದ ಅಗತ್ಯ ಏನಿದೆ? ಸುಮ್ಮನೆ ಸರ್ಕಾರ ಗೊಂದಲ ಸೃಷ್ಟಿಸಲು ಈ ನಡೆ ಕೈಗೊಂಡಿದೆ ಎಂದು ಅಂದು ಕುಮಾರಸ್ವಾಮಿ ಟೀಕಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv