ಉಡುಪಿ: ಏರು ಮದ್ದಳೆಯ ಮಾಂತ್ರಿಕನಿಗೆ ವಯಸ್ಸು 99 ಆದ್ರೂ 19 ರ ಉತ್ಸಾಹ. ಮದ್ದಳೆಯ ನಾದಕ್ಕೆ ಮಂತ್ರಮುಗ್ಧರಾದ್ರು ನಟಿ ಜಯಮಾಲಾ. ವಿದೇಶಕ್ಕೆ ಯಕ್ಷಗಾನ ಕೊಂಡೊಯ್ದ ಗೋಪಾಲರಾಯರಿಗೆ ಮನೆಯಲ್ಲೇ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತ ರ ಒಡನಾಡಿ, ಯಕ್ಷಗಾನವನ್ನು ಪಾಶ್ಚಾತ್ಯ ದೇಶಗಳಿಗೆ ಯಕ್ಷಗಾನವನ್ನು ಕೊಂಡೊಯ್ದ ಹಿರಿಯಡ್ಕ ಗೋಪಾಲರಾಯರಿಗೆ ಈ ಬಾರಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಅನಾರೋಗ್ಯದಿಂದಿರುವ ಗೋಪಾಲರಾಯರು ಬೆಂಗಳೂರಿಗೆ ತೆರಳಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿರಲಿಲ್ಲ. ಹಿರಿಯಡ್ಕದಲ್ಲಿರುವ ತನ್ನ ಮನೆಗೆ ಬಂದು ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸಚಿವೆ ಜಯಮಾಲ ಮುಂದೆ ಕೆಲನಿಮಿಷಗಳ ಕಾಲ ಮದ್ದಳೆ ನುಡಿಸಿ ಮಂತ್ರಮುಗ್ದಗೊಳಿಸಿದರು. ತಾನೇ ಅನ್ವೇಷಿಸಿದ ಏರು ಮದ್ದಳೆಯಿಂದ ನಾದ ಹೊರಹೊಮ್ಮಿಸುತ್ತಿದ್ದಂತೆ, ಜಯಮಾಲಾ ಅಲ್ಲೇ ಕುಳಿತುಬಿಟ್ಟರು.
Advertisement
Advertisement
ಹಿರಿಯ ತಾಳಮದ್ದಳೆ ಕಲಾವಿದ, ಯಕ್ಷಗಾನದ ಇತಿಹಾಸದಲ್ಲಿ ಉಡುಪಿಯ ಹಿರಿಯಡ್ಕ ಗೋಪಾಲ ರಾಯರದ್ದು ದೊಡ್ಡ ಹೆಸರು. ಮೊದಲಬಾರಿಗೆ ಯಕ್ಷಗಾನವನ್ನು ವಿದೇಶಕ್ಕೆ ತೆರಳಿ ಕಲಿಸಿ ಬಂದ ಗೋಪಾಲರಾಯರು ಮೇರು ಕಲಾವಿದ. ಇಳಿವಯಸ್ಸಿನಲ್ಲೂ ಅವರ ಯಕ್ಷ ಉತ್ಸಾಹ ಕಳೆದುಕೊಂಡಿಲ್ಲ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಜಯಮಾಲ ಚಪ್ಪಾಳೆ ಹೊಡೆದು ತಾಳ ಹಾಕುತ್ತಿದ್ದಂತೆ 99 ರ ಹರೆಯದ ಗೋಪಾಲರಾಯರು ನಿರಂತರ ಮದ್ದಳೆ ನುಡಿಸಿ ಅಚ್ಚರಿಗೊಳಿಸಿದರು.
Advertisement
ಅಮೇರಿಕಾದ ರಂಗತಜ್ಞೆ ಮಾರ್ಥಾ ಆಸ್ಟಿನ್ ಸೇರಿದಂತೆ ಹಲವಾರು ಕಲಾವಿದರಿಗೆ ಗೋಪಾಲರಾಯರು ಮಹಾಗುರುಗಳಾಗಿದ್ದಾರೆ. ಸಾವಿರಾರು ಮಂದಿ ಮದ್ದಳೆ ಕಲಿತು ಜೀವನ ರೂಪಿಸಿಕೊಂಡವರಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv