ಬೆಂಗಳೂರು: ಚಾಮರಾಜಪೇಟೆ (Chamarajpet) ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ, ಗಣೇಶ ಗಲಾಟೆ ಬಳಿಕ ಇದೀಗ ಕನ್ನಡ ಸಂಘಟನೆಗಳು ಹಾಗೂ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ಕೋರಿದ್ದಾರೆ.
ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ (Idgah Maidan) ಸರ್ಕಾರದಿಂದಲೇ ಸ್ವಾತಂತ್ರ್ಯೋತ್ಸವದ ದಿನ ತ್ರಿವರ್ಣ ಧ್ವಜಾರೋಹಣ ನೆರವೇರಿಸಿತ್ತು. ಆದರೆ ಗಣೇಶೋತ್ಸವದಂದು ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕೇಳಿ ಹೈಡ್ರಾಮವೇ ನಡೆದಿತ್ತು. ಕೊನೆ ಕ್ಷಣದವರೆಗೂ ಒತ್ತಾಯಿಸಿದ್ದರೂ ಗಣೇಶೋತ್ಸವಕ್ಕೆ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಸಿಕ್ಕಿರಲಿಲ್ಲ. ಇದೀಗ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ (Kannada Rajyotsava) ಪಟ್ಟು ಹಿಡಿಯಲಾಗಿದೆ.
Advertisement
Advertisement
ಕನ್ನಡ ಸಂಘಟನೆಗಳಿಗೆ ಕನ್ನಡ ಬಾವುಟ ಹಾರಿಸಲು ಅವಕಾಶ ಕೊಡಬೇಕು. ಈ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವವನ್ನ ಆಚರಿಸಬೇಕೆಂಬ ಧ್ವನಿ ಎತ್ತಿದ್ದು ನಾವು. ಸರ್ಕಾರ ಕನ್ನಡ ಹೋರಾಟಗಾರರಿಗೆ ಅವಕಾಶ ಕೊಡಬೇಕು. ಇದರಲ್ಲಿಯೂ ರಾಜಕೀಯ ಮಾಡಲು ಹೋಗಬೇಡಿ ಎಂದು ಕನ್ನಡ ಪರ ಹೋರಾಟಗಾರ ಶಿವಕುಮಾರ್ ಕಟುವಾಗಿ ಹೇಳಿದ್ದಾರೆ.
Advertisement
ಧ್ವಜಾರೋಹಣ, ಗಣೇಶೋತ್ಸವ ಮುಗಿದರೂ ಈ ಗಲಾಟೆ ಮಾತ್ರ ತಣ್ಣಗಾಗುವಂತೆ ಕಾಣುತ್ತಿಲ್ಲ. ಗಣೇಶೋತ್ಸವಕ್ಕೆ ಅನುಮತಿ ಸಿಗದೆ ನಿರಾಸೆಗೊಂಡಿರುವ ಹಿಂದೂ ಸಂಘಟನೆಗಳು ಇದೀಗ ಕನ್ನಡ ರಾಜ್ಯೋತ್ಸವ ಆಚರಣೆಗೆ ಪಟ್ಟು ಹಿಡಿದಿವೆ. ಕನ್ನಡ ಸಾಹಿತ್ಯ ಪರಿಷತ್‌ನಿಂದ ನಾಡಧ್ವಜ ಹಾರಿಸುವಂತೆ ಒತ್ತಡ ಹೇರಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮನವಿ ಮಾಡಿದೆ.
Advertisement
ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿದಂತೆ ಕನ್ನಡ ಧ್ವಜ ಹಾರಿಸುವ ಬಗ್ಗೆ ಚರ್ಚಿಸಲು ನಿನ್ನೆ ಸಂಜೆ 6 ಗಂಟೆಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಭೆ ನಡೆಸಿದೆ. ಸಭೆ ಬಳಿಕ ಸಿಎಂ ಬೊಮ್ಮಾಯಿ ಹಾಗೂ ಕಂದಾಯ ಸಚಿವರ ಭೇಟಿ ಮಾಡಿ ರಾಷ್ಟ್ರ ಧ್ವಜ ಹಾರಿದ ರೀತಿಯೇ ನಾಡಧ್ವಜವನ್ನು ಹಾರಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ಬಾರಿಯೂ ಸರ್ಕಾರದ ವತಿಯಿಂದಲೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.