ಬೆಂಗಳೂರು: ಯಾವ ವಿಷಯವನ್ನೇ ಆದರೂ ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ನಮಗೆ ದೊರಕುವ ಸಶಕ್ತ ಮಾಧ್ಯಮವೆಂದರೆ ಅದು ನಮ್ಮ ಮಾತೃಭಾಷೆ. ಸಾಹಿತ್ಯದಿಂದ ವಿಜ್ಞಾನದವರೆಗೆ ಎಲ್ಲ ಬಗೆಯ ತಿಳಿವಳಿಕೆಯೂ ಮಾತೃಭಾಷೆಯಲ್ಲೇ ದೊರೆಯುವಂತಾದರೆ ಅದು ನಿಜಕ್ಕೂ ಅತ್ಯಮೂಲ್ಯವಾದ ಕೊಡುಗೆಯಾಗಬಲ್ಲದು.
ಬೇರೆಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡದಲ್ಲೇ ಒದಗಿಸುವ ತನ್ನ ಪ್ರಯತ್ನಗಳ ಮುಂದುವರಿಕೆಯಾಗಿ ಇಜ್ಞಾನ ಟ್ರಸ್ಟ್ ಜುಲೈ 29ರಂದು ‘ಕನ್ನಡ ನೆಲ-ಜಲ : ನಾಳಿನ ಅರಿವು’ ವಿಚಾರ ಸಂಕಿರಣವನ್ನು ಏರ್ಪಡಿಸಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ವಿಷಯತಜ್ಞರು ಇಂದಿನ ಮಹತ್ವದ ವಿಷಯಗಳಾದ ಪರಿಸರ, ಇಂಧನ ಹಾಗೂ ಆಹಾರ ಕುರಿತು ಕನ್ನಡದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.
Advertisement
ವಿವಿಧ ವಿಷಯಗಳನ್ನು ಕುರಿತ ಶೈಕ್ಷಣಿಕ ಪುಸ್ತಕಗಳನ್ನು ಶಾಲಾ ಗ್ರಂಥಾಲಯಗಳಿಗೆ ನೀಡುವ ಇಜ್ಞಾನ ಟ್ರಸ್ಟ್ ಯೋಜನೆ ‘ಕಲಿಕೆಗೆ ಕೊಡುಗೆ’ಯ ಎರಡನೇ ವರ್ಷದ ಚಟುವಟಿಕೆಗಳನ್ನೂ ಈ ಸಂದರ್ಭದಲ್ಲಿ ಉದ್ಘಾಟಿಸಲಾಗುವುದು. ಕಳೆದ ಬಾರಿ ಈ ಯೋಜನೆಯಡಿ ಕನ್ನಡ ಕಲಿಕೆಗೆ ಸಂಬಂಧಿಸಿದ ಪುಸ್ತಕಗಳನ್ನು 150ಕ್ಕೂ ಹೆಚ್ಚು ಶಾಲೆಗಳಿಗೆ ನೀಡಿಲಾಗಿತ್ತು. ಅದೇ ರೀತಿ ಈ ಬಾರಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ವಿಜ್ಞಾನ – ತಂತ್ರಜ್ಞಾನ ವಿಷಯಗಳಿಗೆ ಸಂಬಂಧಪಟ್ಟ ವಿವಿಧ ಕೃತಿಗಳನ್ನು ಒಂದು ನೂರಕ್ಕೂ ಹೆಚ್ಚು ಮಾಧ್ಯಮಿಕ ಹಾಗೂ ಪ್ರೌಢಶಾಲಾ ಗ್ರಂಥಾಲಯಗಳಿಗೆ ಕೊಡುಗೆಯಾಗಿ ನೀಡಲಾಗುವುದು.
Advertisement
ಈ ಕಾರ್ಯಕ್ರಮವನ್ನು ನವಕರ್ನಾಟಕ ಪ್ರಕಾಶನ, ಭಾರತೀ ಪ್ರಕಾಶನ, ಹೆಮ್ಮರ ಪ್ರಕಾಶನ ಹಾಗೂ ಸಹಬಾಳ್ವೆ ಸಂಸ್ಥೆಗಳ ಸಹಯೋಗದಲ್ಲಿ ಇಜ್ಞಾನ ಟ್ರಸ್ಟ್ ಆಯೋಜಿಸಿದೆ. ನಿವೃತ್ತ ಪ್ರಾಂಶುಪಾಲ, ವಾಣಿಜ್ಯ ಶಾಸ್ತ್ರ ಲೇಖಕರಾಗಿರುವ ಡಾ. ಹೆಚ್. ಆರ್. ಅಪ್ಪಣ್ಣಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರೆ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಪದ್ಮಾ ಶೇಖರ್ ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ.
Advertisement
ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಗಣ್ಯರು
ಜಲ ಮತ್ತು ಅರಣ್ಯ – ಎಚ್. ಎನ್. ಎ. ಪ್ರಸಾದ್, ಪರಿಸರ ಸಂರಕ್ಷಣಾವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರು
ಇಂಧನ – ವೈ. ಬಿ. ರಾಮಕೃಷ್ಣ, ಅಧ್ಯಕ್ಷರು, ರಾಷ್ಟ್ರೀಯ ಜೈವಿಕ ಇಂಧನ ಕೋಶ, ನವದೆಹಲಿ
ಆಹಾರ – ಡಾ. ನಾ. ಸೋಮೇಶ್ವರ, ವೈದ್ಯರು ಹಾಗೂ ಖ್ಯಾತ ಲೇಖಕರು
Advertisement
ಇಜ್ಞಾನ ಟ್ರಸ್ಟ್ ಕುರಿತು
ಇಜ್ಞಾನ ಟ್ರಸ್ಟ್ ಒಂದು ನೋಂದಾಯಿತ ಸ್ವಯಂಸೇವಾ ಸಂಸ್ಥೆಯಾಗಿದ್ದು ವಿಜ್ಞಾನ, ತಂತ್ರಜ್ಞಾನ, ಕನ್ನಡ ಹಾಗೂ ಸಂಸ್ಕೃತಿ ಕುರಿತ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಸಂಸ್ಥೆಯನ್ನು ಆಗಸ್ಟ್ 3, 2016ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ನೋಂದಾಯಿಸಲಾಯಿತು. ಸಾಮಾನ್ಯ ಜನರ ನಡುವೆ ವಿಜ್ಞಾನ-ತಂತ್ರಜ್ಞಾನಗಳನ್ನು ಜನಪ್ರಿಯಗೊಳಿಸುವುದು ಹಾಗೂ ಕನ್ನಡ ಭಾಷೆ – ಸಂಸ್ಕೃತಿಯ ಬೆಳವಣಿಗೆಗಾಗಿ ಶ್ರಮಿಸುವುದು ಇಜ್ಞಾನ ಟ್ರಸ್ಟ್ ನ ಧ್ಯೇಯ.
ಕನ್ನಡದ ಪ್ರಮುಖ ವಿಜ್ಞಾನ-ತಂತ್ರಜ್ಞಾನ ಜಾಲತಾಣವಾದ ಇಜ್ಞಾನ ಡಾಟ್ ಕಾಮ್ ಅನ್ನು ಟಿ. ಜಿ. ಶ್ರೀನಿಧಿಯವರ ಸಂಪಾದಕತ್ವದಲ್ಲಿ ಇಜ್ಞಾನ ಟ್ರಸ್ಟ್ ನಿರ್ವಹಿಸುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನೊಡನೆ ಕಳೆದ ವರ್ಷ (2017) ‘ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ’ವನ್ನು – ಪುಸ್ತಕ ಹಾಗೂ ಆನ್‍ಲೈನ್ ಎರಡೂ ರೂಪಗಳಲ್ಲಿ – ಪ್ರಕಟಿಸಿದ್ದು ಇಜ್ಞಾನ ಟ್ರಸ್ಟ್ ನ ಮಹತ್ವದ ಸಾಧನೆಗಳಲ್ಲೊಂದು. ವಿದ್ಯಾರ್ಥಿಗಳಿಗೆ ‘ಮಾಹಿತಿ ತಂತ್ರಜ್ಞಾನ ಹಾಗೂ ಕನ್ನಡ’ ಕುರಿತ ಕಾರ್ಯಾಗಾರಗಳನ್ನು ಆಯೋಜಿಸುವಲ್ಲೂ ಇಜ್ಞಾನ ಟ್ರಸ್ಟ್ ಸಕ್ರಿಯವಾಗಿದೆ. ಸುರಾನಾ ಕಾಲೇಜಿನ ಸಹಯೋಗದಲ್ಲಿ ಇದೇ ವಿಷಯ ಕುರಿತ ‘ನುಡಿಯ ನಾಳೆಗಳು’ ಎಂಬ ಪುಸ್ತಕವನ್ನೂ ಹೊರತರಲಾಗಿದೆ.