Connect with us

Cinema

ಉಡುಂಬಾ: ಆಕ್ಷನ್ ಕಿಕ್ಕಿನೊಂದಿಗೆ ಕಡಲ ಕಿನಾರೆಯಲ್ಲರಳೋ ಪ್ರೇಮಕಥೆ!

Published

on

ಬೆಂಗಳೂರು: ಕರಾವಳಿ ಸೀಮೆಯಲ್ಲಿ ಜರುಗೋ ಕಥೆಯೆಂದಾಕ್ಷಣ ಕನ್ನಡದ ಪ್ರೇಕ್ಷಕರು ಅದರತ್ತ ಕಣ್ಣರಳಿಸಿ ನೋಡುತ್ತಾರೆ. ಆ ಕಾರಣದಿಂದಲೇ ಕಡಲ ಕಿನಾರೆಯ ಕಥೆ ಹೊಂದಿರುವ ಉಡುಂಬಾನತ್ತಲೂ ಕುತೂಹಲವಿತ್ತು. ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಅದನ್ನು ಮತ್ತಷ್ಟು ತೀವ್ರವಾಗಿಸಿಕೊಂಡಿದ್ದ ಈ ಚಿತ್ರವೀಗ ಪ್ರೇಕ್ಷಕರ ಮುಂದೆ ಬಂದಿದೆ. ಪಕ್ಕಾ ಆಕ್ಷನ್ ಕಿಕ್ ನೀಡುತ್ತಲೇ ಕಡಲ ಕಿನಾರೆಯಲ್ಲರಳಿಕೊಳ್ಳೋ ಈ ಪ್ರೇಮ ಕಥೆಗೆ ನೋಡುಗರೆಲ್ಲರೂ ಮನಸೋತಿದ್ದಾರೆ.

ಶಿವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ ಉಡುಂಬಾ. ಅವರು ಒಂದಷ್ಟು ವರ್ಷಗಳ ತಮ್ಮ ಅನುಭವಗಳನ್ನೆಲ್ಲ ಧಾರೆಯೆರೆದು ಈ ಚಿತ್ರವನ್ನು ರೂಪಿಸಿರೋ ರೀತಿ ಪ್ರಧಾನವಾಗಿ ಪ್ರೇಕ್ಷಕರನ್ನು ತಟ್ಟುತ್ತದೆ. ಆಕ್ಷನ್ ಅಂಶಗಳೇ ಪ್ರಧಾನವಾಗಿದ್ದರೂ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ, ಎಲ್ಲರನ್ನೂ ಕಾಡುವ ರೀತಿಯಲ್ಲಿ ದೃಶ್ಯ ಕಟ್ಟಿರೋ ಪರಿ ಎಲ್ಲರನ್ನೂ ಬೆರಗಾಗಿಸುತ್ತದೆ. ಮೀನುಗಾರಿಕೆಯನ್ನೇ ಬದುಕಾಗಿಸಿಕೊಂಡು, ಪ್ರೀತಿಯಲ್ಲೇ ಬಿದ್ದು ತೊಯ್ದಾಡೋ ಸಾಮಾನ್ಯರಲ್ಲಿ ಸಾಮಾನ್ಯ ಹುಡುಗನೊಬ್ಬ ಉಡುಂಬಾವತಾರ ತಾಳಿ ಅಬ್ಬರಿಸೋ ರೀತಿ ಬೆಚ್ಚಿ ಬೀಳಿಸುವಂತೆ ಮೂಡಿ ಬಂದಿದೆ.

ಉಡುಂಬಾ ಚಿತ್ರದ ಕಥೆಯೆಲ್ಲ ಜರುಗೋದು ಕಡಲ ಕಿನಾರೆಯ ಒಂದೂರಿನಲ್ಲಿ. ಇಲ್ಲಿ ಮೀನುಗಾರಿಕೆ ನಡೆಸಿ ಅದನ್ನು ಮಾರಿಯೇ ಬದುಕುವ ಶಿವು ಎಂಬ ಹುಡುಗ ಈ ಕಥೆಯ ಕೇಂದ್ರ ಬಿಂದು. ಆ ಪಾತ್ರದಲ್ಲಿ ಪವನ್ ಶೌರ್ಯ ಮನದುಂಬಿ ನಟಿಸಿದ್ದಾರೆ. ಇಂಥಾ ಹುಡುಗ ಅದೇ ಊರಿನ ಹುಡುಗಿಯೊಂದಿಗೆ ಲವ್ವಲ್ಲಿ ಬೀಳುತ್ತಾನೆ. ಹೀಗೆ ಒಂದಷ್ಟು ಕಾಲ ಪ್ರೇಮದ ಉನ್ಮಾದದಲ್ಲಿ ತೇಲಾಡೋ ಶಿವು ಪಾಲಿಗೆ ಪ್ರೀತಿಯ ಹುಡುಗಿಯೇ ಒಂದು ಶಾಕ್ ಕೊಡುತ್ತಾಳೆ. ಅದೇ ಹುಡುಗಿಯ ಮೇಲೆ ಆ ಊರಿನ ಪರಮ ದುಷ್ಟನ ಮಗನೂ ಕಣ್ಣಿಟ್ಟಿರುತ್ತಾನೆ. ಈ ಹೊಯ್ದಾಟದಲ್ಲಿ ಶಿವು ಒದ್ದಾಡುವಾಗಲೇ ಆ ಊರಲ್ಲೊಂದು ಘಟನೆ ನಡೆಯುತ್ತೆ. ಅದು ತನ್ನನ್ನು ಸುತ್ತಿಕೊಳ್ಳುತ್ತಲೇ ಆತ ಉಡುಂಬಾವತಾರ ತಾಳಿ ಮಾಸ್ ಗೆಟಪ್ಪಿನಲ್ಲಿ ಅಬ್ಬರಿಸುತ್ತಾನೆ.

ಆ ನಂತರದಲ್ಲಿ ಕಥೆ ಮಹಾ ವೇಗದೊಂದಿಗೆ ಮೈನವಿರೇಳಿಸುವಂತೆ ಸಾಗುತ್ತೆ. ಹಾಗಾದರೆ ಆ ಘಟನೆಯೇನು, ಹುಡುಗಿ ಸಾದಾ ಸೀದಾ ಶಿವುಗೆ ನೀಡಿದ ಶಾಕ್ ಎಂಥಾದ್ದೆಂಬ ಪ್ರಶ್ನೆಗಳಿಗಿಲ್ಲಿ ಮಜವಾದ ಉತ್ತರವಿದೆ. ಅದನ್ನು ಥೇಟರಿಗೆ ಹೋಗಿಯೇ ನೋಡಿದರೆ ಒಳ್ಳೆಯದು. ಅಂತೂ ಮೊದಲ ಪ್ರಯತ್ನದಲ್ಲಿಯೇ ನಿರ್ದೇಶಕರಾಗಿ ಶಿವರಾಜ್ ಮನಗೆದ್ದಿದ್ದಾರೆ. ನಾಯಕಿಯಾಗಿ ಚಿರಶ್ರೀ ಅಂಚನ್ ನಟನೆಯೂ ಆ ಪಾತ್ರಕ್ಕೆ ತಕ್ಕುದಾಗಿ ಮುದ್ದಾಗಿದೆ. ಶರತ್ ಲೋಹಿತಾಶ್ವ ಆ ಪಾತ್ರಕ್ಕೆ ತಕ್ಕಂತೆ ಆರ್ಭಟಿಸಿದ್ದಾರೆ. ಕ್ಯಾಮೆರಾ, ಹಿನ್ನೆಲೆ ಸಂಗೀತ, ಹಾಡುಗಳು, ಸಂಕಲನ ಸೇರಿದಂತೆ ಎಲ್ಲವೂ ಉಡುಂಬಾನ ಶಕ್ತಿಯಾಗಿಯೇ ಕಾಣಿಸುತ್ತದೆ. ಇದು ತಾಜಾ ಕಥೆ ಹೊಂದಿರೋ ಚಿತ್ರ. ನೀವು ಯಾವ ವರ್ಗಕ್ಕೆ ಸೇರಿದ ಪ್ರೇಕ್ಷಕರೇ ಆಗಿದ್ದರೂ ಉಡುಂಬಾ ಖಂಡಿತಾ ನಿಮಗಿಷ್ಟವಾಗುತ್ತಾನೆ.

ರೇಟಿಂಗ್ 3/5

Click to comment

Leave a Reply

Your email address will not be published. Required fields are marked *