ನೀವು ನೋಡದಿದ್ದರೆ ಅಪರೂಪದ ಚಿತ್ರವನ್ನ ಮಿಸ್ ಮಾಡಿಕೊಳ್ತೀರಿ… ಹೀಗಂತ ಆತ್ಮವಿಶ್ವಾಸದಿಂದ ಸಜೆಸ್ಟ್ ಮಾಡುವಂಥಾ ಚಿತ್ರಗಳು ಆಗಾಗ ವಿರಳವಾಗಿ ತೆರೆ ಕಾಣುತ್ತಿರುತ್ತವೆ. ಆ ಸಾಲಿನಲ್ಲಿ ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿರೋ ತ್ರಯಂಬಕಂ ಚಿತ್ರವೂ ಖಂಡಿತ ಸೇರಿಕೊಳ್ಳುತ್ತೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಚಕಿತಗೊಳಿಸುತ್ತಲೇ ಸೆಳೆದುಕೊಳ್ಳುವ ಕಥಾ ಹಂದರ ಹೊಂದಿರುವ ಈ ಚಿತ್ರದ ಒಟ್ಟಂದವೇ ಅಂಥಾದ್ದಿದೆ!
ಈ ಹಿಂದೆ ಆ ಕರಾಳ ರಾತ್ರಿ ಮತ್ತು ಪುಟ 109 ಚಿತ್ರಗಳ ಮೂಲಕ ತಾನು ಭಿನ್ನ ಜಾಡಿನ ನಿರ್ದೇಶಕ ಎಂಬುದನ್ನು ಸಾಬೀತು ಪಡಿಸಿದ್ದವರು ದಯಾಳ್ ಪದ್ಮನಾಭನ್. ಇದೀಗ ಅವರು ತ್ರಯಂಬಕಂ ಚಿತ್ರದ ಮೂಲಕ ಅತ್ಯಂತ ಅಪರೂಪದ ರೋಚಕ ಕಥೆಯ ಮೂಲಕವೇ ಕಮರ್ಷಿಯಲ್ ಆಗಿಯೂ ನೆಲೆಗೊಳ್ಳುವ ಸ್ಪಷ್ಟ ಸೂಚನೆಯನ್ನು ರವಾನಿಸಿದ್ದಾರೆ. ಸಾಮಾನ್ಯ ಆಲೋಚನಾ ಕ್ರಮಕ್ಕೆ ನಿಲುಕದ ಕೆಲ ವಿಚಾರಗಳನ್ನು ಒಟ್ಟುಗೂಡಿಸಿರೋ ದಯಾಳ್ ಅವರು ಥ್ರಿಲ್ಲರ್ ಶೈಲಿಯಲ್ಲಿ, ಅರೆಕ್ಷಣವೂ ಆಚೀಚೆ ಕದಲದಂತೆ ನೋಡಿಸಿಕೊಳ್ಳುವ ಚೇತೋಹಾರಿ ಮಾದರಿಯಾಗಿ ಇಡೀ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ.
Advertisement
Advertisement
ತ್ರಯಂಬಕಂ ಅನ್ನೋದು ಶಿವನ ಮೂರನೇ ಕಣ್ಣು. ಅದಕ್ಕೆ ತಕ್ಕುದಾಗಿಯೇ ಶಿವ ಸಂಬಂಧವಿರುವ ಕಥಾ ಎಳೆಯೇ ಈ ಚಿತ್ರದ ಕೇಂದ್ರಬಿಂದು. ಶಿವನಾಮಸ್ಮರಣೆಯೊಂದಿಗೇ ತೆರೆದುಕೊಳ್ಳುವ ತ್ರಯಂಬಕಂನಲ್ಲಿ ಐದು ಸಾವಿರ ವರ್ಷಗಳ ಹಿಂದೆ ಋಷಿಯೊಬ್ಬರು ಒಂಭತ್ತು ಪಾಶಾಣಗಳನ್ನು ಸೇರಿಸಿ ಆವಿಷ್ಕರಿಸಿದ್ದ ಅಪರೂಪದ ಔಷಧಿಯೇ ಪ್ರಧಾನ ಅಂಶ. ಅದು ಎಂಥಾ ರೋಗಗಳಿಗಾದರೂ ಮದ್ದಾಗಬಲ್ಲ ನವಪಾಶಾಣ. ಇಂಥಾದ್ದೊಂದು ದಿವ್ಯೌಷಧಿ ಈಗಿನ ಆಧುನಿಕ ಯುಗದ ಮನುಷ್ಯರ ಕೈಗೆ ಸಿಕ್ಕರೆ ಏನೇನಾಗಬಹುದೆಂಬುದನ್ನು ಪೂರಕವಾದ ಥ್ರಿಲ್ಲರ್ ಕಥೆಯೊಂದರ ಮೂಲಕ ರೋಚಕವಾಗಿ ಹೇಳಲಾಗಿದೆ.
Advertisement
ರಾಘವೇಂದ್ರ ರಾಜ್ ಕುಮಾರ್ ಇಲ್ಲಿ ತಂದೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನುಪಮಾ ಗೌಡ ಅವರ ಮಗಳಾಗಿ ನಟಿಸಿದ್ದಾರೆ. ಈ ತಂದೆಗೆ ಇಬ್ಬರು ಹೆಣ್ಣುಮಕ್ಕಳು. ಅದರಲ್ಲೊಬ್ಬಳು ಪ್ರಾಚ್ಯವಸ್ತು ಇಲಾಖೆಯಲ್ಲಿ ಕೆಲಸ ಮಾಡುವವರು. ಮತ್ತೋರ್ವ ಮಗಳು ತನ್ನ ಕಣ್ಣೆದುರೇ ಮರಣ ಹೊಂದುವ ದೃಶ್ಯವೊಂದು ತಂದೆಯನ್ನು ಕನಸಿನಂತೆ, ಆಘಾತದಂತೆ ಪ್ರತೀ ಹಂತದಲ್ಲಿಯೂ ಕಾಡುತ್ತಿರುತ್ತೆ. ವಾಸ್ತವವಾಗಿ ಒಬ್ಬಳೇ ಮಗಳು ಕಣ್ಣ ಮುಂದಿದ್ದರೂ ತನಗೆ ಮತ್ತೊಬ್ಬಳು ಮಗಳಿದ್ದಾಳಾ, ಅವಳೆಂದಾದರೂ ತನ್ನ ಕಣ್ಣೆದುರೇ ಮರಣ ಹೊಂದಿದ್ದಾಳಾ ಎಂಬುದು ಒಗಟಿನಂತೆ ಸದಾ ಕಾಡುತ್ತಿರುತ್ತದೆ.
Advertisement
ಆದರೆ ತನಗೆ ಇನ್ನೊಬ್ಬಳು ಮಗಳಿದ್ದಳೆಂಬ ಸತ್ಯವೂ ಆತನಿಗೆ ತಿಳಿಯುತ್ತದೆ. ಪ್ರಾಚ್ಯವಸ್ತು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಆ ಮಗಳೊಂದಿಗೆ ನಂದಿಬೆಟ್ಟಕ್ಕೆ ತೆರಳಿದ್ದು, ಅಲ್ಲಿ ನಡೆದ ಚಿತ್ರವಿಚಿತ್ರ ಘಟನಾವಳಿಗಳು ಮತ್ತು ಮಗಳ ಭೀಕರ ಸಾವಿನ ಅಸ್ಪಷ್ಟ ಚಿತ್ರಗಳು ತಂದೆಯ ಕಣ್ಮುಂದೆ ಕದಲುತ್ತಿರುತ್ತವೆ. ಒಂದರೆಕ್ಷಣವೂ ಗ್ಯಾಪು ಕೊಡದಂತೆ ಈ ಸಿಕ್ಕಿನಲ್ಲಿಯೇ ಥ್ರಿಲ್ಲಿಂಗ್ ಆಗಿ ನೋಡಿಸಿಕೊಂಡು ಹೋಗೋ ಈ ಚಿತ್ರ ಮತ್ತಷ್ಟು ಓಘ ಪಡೆದುಕೊಳ್ಳೋದು ಸೆಕೆಂಡ್ ಹಾಫ್ ನಂತರ. ಇದು ಭ್ರಮೆಯಾ ವಾಸ್ತವವಾ ಅಂತ ಗೊಂದಲಕ್ಕೆ ಬಿದ್ದ ತಂದೆಯ ಮುಂದೆ ತನಗೆ ಮತ್ತೊಬ್ಬಳು ಮಗಳಿದ್ದದ್ದು ಹೌದೆಂಬ ಸತ್ಯದರ್ಶನ ವಾಗುತ್ತೆ. ಇಷ್ಟಾಗುವ ಹೊತ್ತಿಗೆಲ್ಲ ಫಸ್ಟ್ ಹಾಫ್ ಮುಗಿದು ಹೋಗಿರುತ್ತದೆ.
ಹೀಗೆ ಮತ್ಯಾವುದೋ ಬೇರೆ ಲೋಕದಂಥಾ ಚಿತ್ರಾವಳಿಗಳು ತನ್ನನ್ಯಾಕೆ ಕಾಡುತ್ತವೆ ಎಂಬ ಗೊಂದಲದ ಮಡುವಲ್ಲಿದ್ದಾಗಲೇ ಮತ್ತೊಂದು ದಿಕ್ಕಿನ ರೋಚಕ ಪಯಣ ಶುರುವಾಗುತ್ತೆ. ತನ್ನೊಳಗಿನ ಈ ಎಲ್ಲ ಗೊಂದಲಗಳನ್ನೂ ಕೂಡಾ ಆತ ತನ್ನ ಎರಡನೇ ಮಗಳ ಮುಂದೆ ಪ್ರಾಮಾಣಿಕವಾಗಿ ಬಿಚ್ಚಿಡುತ್ತಾ ಹಗುರಾಗಲು ಪ್ರಯತ್ನಿಸುತ್ತಾನೆ. ಇದೆಲ್ಲದರ ಹಿಂದೆ ಏನೋ ಒಂದು ಸತ್ಯವಿದೆ ಎಂದರಿತ ಎರಡನೇ ಮಗಳು ತನ್ನ ತಂದೆಯ ಮನೋವ್ಯಾಕುಲವನ್ನೆಲ್ಲ ತನ್ನ ಡಿಟೆಕ್ಟಿವ್ ಗೆಳೆಯನ ಬಳಿ ಹೇಳಿಕೊಳ್ಳುತ್ತಾಳೆ. ಆ ಬಳಿಕ ಡಿಟೆಕ್ಟಿವ್ ಗೆಳೆಯ ಮತ್ತು ಎರಡನೇ ಮಗಳು ಸೇರಿಕೊಂಡು ಒಟ್ಟಾರೆ ರಹಸ್ಯವನ್ನು ಬೇಧಿಸುತ್ತಾರಾ? ಆ ತಂದೆಯ ಕನಸಲ್ಲಿ ಭ್ರಮೆಯಂತೆ ಬರುತ್ತಿದ್ದ ವಿಚಾರಗಳೆಲ್ಲ ನಿಜವಾ, ಆಕೆ ಹಾಗೆ ಭೀಕರವಾಗಿ ಸಾಯೋದಕ್ಕೆ ಕಾರಣವೇನು? ಅದಕ್ಕೂ ನವಪಾಶಾಣವೆಂಬ ಐದು ಸಾವಿರ ವರ್ಷಗಳ ಹಿಂದಿನ ನವಪಾಶಾಣ ಔಷಧಿಗೂ ಏನು ಸಂಬಂಧ? ಇಂಥಾ ಪ್ರಶ್ನೆಗಳೇ ನಿಮಗೆ ರೋಚಕವಾಗಿ ಕಾಣಿಸುತ್ತದೆಯಲ್ಲಾ… ಥೇಟರು ಹೊಕ್ಕರೆ ಅದಕ್ಕಿಂತಲೂ ರೋಚಕವಾದ ಉತ್ತರಗಳು ಈ ಚಿತ್ರದಲ್ಲಿ ನಿಮ್ಮನ್ನೆಲ್ಲ ಮುತ್ತಿಕೊಳ್ಳುತ್ತವೆ.
ಅನುಪಮಾ ಗೌಡ ಎರಡು ಪಾತ್ರಗಳಲ್ಲಿಯೂ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸಿದ್ದಾರೆ. ಈ ಮೂಲಕ ತಾನು ಯಾವ ಪಾತ್ರಕ್ಕಾದರೂ ನ್ಯಾಯ ಒದಗಿಸಬಲ್ಲ ಪ್ರತಿಭಾವಂತ ನಟಿ ಎಂಬುದನ್ನು ಸಾಬೀತುಗೊಳಿಸಿದ್ದಾರೆ. ಗೆಳೆಯ ಮತ್ತು ಡಿಟೆಕ್ಟಿವ್ ಪಾತ್ರ ಮಾಡಿರುವ ರಾಕ್ ಸ್ಟಾರ್ ರೋಹಿತ್ ಕೂಡಾ ಅಂಥಾದ್ದೇ ನಟನೆ ನೀಡಿದ್ದಾರೆ. ವಿಲನ್ ಆಗಿ ನಿರ್ದೇಶಕರೂ ಆಗಿರೋ ಶಿವಮಣಿ ಪಾತ್ರ ಗಮನ ಸೆಳೆಯುವಂತಿದೆ. ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ಉಳಿಕೆ ತಾರಾಗಣವೂ ಅದ್ಭುತವಾಗಿಯೇ ಎಫರ್ಟ್ ಹಾಕಿದೆ. ಬಿ ರಾಕೇಶ್ ಛಾಯಾಗ್ರಹಣ, ನವೀನ್ ಕೃಷ್ಣ ಅವರ ಸಂಭಾಷಣೆಯಂತೂ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬುವಂತಿದೆ.
ನಿಖರವಾಗಿ ಹೇಳಬೇಕೆಂದರೆ ಈ ಮೂಲಕ ದಯಾಳ್ ಪದ್ಮನಾಭನ್ ನಿರ್ದೇಶಕನಾಗಿ ಹೊಸ ಹೆಜ್ಜೆ ಗುರುತು ಮೂಡಿಸಿದ್ದಾರೆ. ಒಂದು ಸೂಕ್ಷ್ಮವಾದ ಕಥೆಗೆ ಥ್ರಿಲ್ಲರ್ ಅಂಶಗಳನ್ನು ಬೆರೆಸಿ ನೋಡುಗರಿಗೆ ಹೊಸ ಅನುಭವ ನೀಡುವಲ್ಲಿ ಅವರು ಗೆದ್ದಿದ್ದಾರೆ. ಈ ಮೂಲಕವೇ ಫ್ಯೂಚರ್ ಎಂಟರ್‍ಟೈನರ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರೋ ನಿರ್ಮಾಪಕರುಗಳ ಶ್ರಮವೂ ಸಾರ್ಥಕವಾಗಿದೆ. ಇದು ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂಥಾ, ಎಲ್ಲ ವರ್ಗದ ಪ್ರೇಕ್ಷಕರೂ ಮಿಸ್ ಮಾಡದೇ ನೋಡುವಂಥಾ ಒಳ್ಳೆ ಚಿತ್ರ.
ರೇಟಿಂಗ್: 4/5