Connect with us

Bengaluru City

ಘೀಳಿಡಲು ಸಜ್ಜಾದ ಸಲಗ ಗೆಲ್ಲುವ ಸೂಚನೆ!

Published

on

ಬೆಂಗಳೂರು: ದುನಿಯಾ ವಿಜಯ್ ಅಭಿನಯಿಸಿ ನಿರ್ದೇಶನವನ್ನೂ ಮಾಡುತ್ತಿರೋ ಚಿತ್ರ ಸಲಗ. ಬಂಡಿಮಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯೋ ಮೂಲಕ ಈ ಸಿನಿಮಾಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಸಲಗ ಎಂಬುದೇ ಪಕ್ಕಾ ಮಾಸ್ ಟೈಟಲ್. ದುನಿಯಾ ವಿಜಯ್ ಮೊದಲ ಹೆಜ್ಜೆಯಲ್ಲಿ ನಿರ್ದೇಶಕರಾಗಿ ಈ ಚಿತ್ರವನ್ನ ಹೇಗೆ ಸಂಭಾಳಿಸಲಿದ್ದಾರೆ, ಇದರ ಕಥೆ ಎಂಥಾದ್ದೆಂಬುದೂ ಸೇರಿದಂತೆ ಪ್ರೇಕ್ಷಕರಲ್ಲಿರೋ ಕುತೂಹಲ ಒಂದೆರಡಲ್ಲ. ಸಲಗ ಪ್ರೇಕ್ಷಕರ ನಡುವೆ ಈ ಪಾಟಿ ಘೀಳಿಟ್ಟು ಸದ್ದು ಮಾಡುತ್ತಿರೋದಕ್ಕೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರೋದು ಕೆ.ಪಿ ಶ್ರೀಕಾಂತ್ ಅನ್ನೋದೂ ಕೂಡಾ ಕಾರಣ!

ಕೆಪಿ ಶ್ರೀಕಾಂತ್ ಹಿಟ್ ಸಿನಿಮಾ ನಿರ್ಮಾಪಕರೆಂದೇ ಖ್ಯಾತರಾಗಿರುವವರು. ಸಿನಿಮಾವನ್ನು ವ್ಯವಹಾರದಾಚೆಗೆ ಪ್ರೀತಿಸುವ ಅವರು ಕಥೆಗೆ ಎಲ್ಲ ಕೋನದಿಂದಲೂ ಕಸುವಿದೆ ಅಂತ ಗೊತ್ತಾಗದೆ ಯಾವ ಚಿತ್ರವನ್ನೂ ನಿರ್ಮಾಣ ಮಾಡಲು ಮುಂದಾಗುವವರಲ್ಲ. ಹೆಚ್ಚೂಕಮ್ಮಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಚಿತ್ರರಂಗದ ಭಾಗವಾಗಿರುವ ಶ್ರೀಕಾಂತ್ ಬತ್ತಳಿಕೆಯಲ್ಲಿ ಈ ಮಾತಿಗೆ ಪೂರಕವಾದ ವಿಚಾರಗಳೇ ಇವೆ. ಇಂಥಾ ಶ್ರೀಕಾಂತ್ ಮತ್ತು ದುನಿಯಾ ವಿಜಯ್ ಸಲಗದ ಮೂಲಕ ಭಾರೀ ಯಶಸ್ಸೊಂದನ್ನು ತಮ್ಮದಾಗಿಸಿಕೊಳ್ಳಲಿದ್ದಾರೆಂಬ ಸೂಚನೆಗಳೇ ಎಲ್ಲ ದಿಕ್ಕಿನಿಂದಲೂ ಕಾಣಿಸುತ್ತಿವೆ.

ಸಲಗ ಆರಂಭದಲ್ಲಿಯೇ ಎಂಥಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಅನ್ನೋದಕ್ಕೆ ಚಿತ್ರರಂಗದ ಗಣ್ಯರ ಪ್ರತಿಕ್ರಿಯೆಗಳಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಯುವ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರೋ ವಿಜಯ್ ಸೇರಿದಂತೆ ಇಡೀ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ತರುಣ್ ಸುಧೀರ್ ಕೂಡಾ ತಮ್ಮ ಬಹುಕಾಲದ ಗೆಳೆಯನ ಈ ಸಾಹಸಕ್ಕೆ ಶುಭ ಕೋರಿದ್ದಾರೆ. ಕಾರ್ತಿಕ್ ಗೌಡ, ರಿಯಲ್ ಸ್ಟಾರ್ ಉಪೇಂದ್ರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಸಲಗಕ್ಕೆ ಶುಭ ಕೋರಿದ್ದಾರೆ.

ಇದು ಸಲಗ ಚಿತ್ರದ ಬಗ್ಗೆ ತಾನೇ ತಾನಾಗಿ ಹುಟ್ಟಿಕೊಂಡಿರೋ ಪಾಸಿಟಿವ್ ವಾತಾವರಣ. ದುನಿಯಾ ವಿಜಯ್ ಅವರೇನು ಏಕಾಏಕಿ ನಿರ್ದೇಶಕರಾಗಿ ಅವತರಿಸಿಲ್ಲ. ನಿರ್ದೇಶನಕ್ಕೆ ಬೇಕಾಗುವಂಥಾ ಎಲ್ಲ ಪಟ್ಟುಗಳನ್ನೂ ಕರಗತ ಮಾಡಿಕೊಂಡು ಎಲ್ಲದರಲ್ಲಿಯೂ ಪಕ್ಕಾ ಅನ್ನಿಸಿದ ನಂತರವಷ್ಟೇ ಅಖಾಡಕ್ಕಿಳಿದಿದ್ದಾರೆ. ವಿಜಯ್ ಅವರ ಇಂಥಾ ಶ್ರದ್ಧೆಯ ಯಾನಕ್ಕೆ ನಿರ್ಮಾಪಕ ಕೆ ಪಿ ಶ್ರೀಕಾಂತ್ ಕೂಡಾ ಸಾಥ್ ನೀಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲೆನ್ನಬಹುದಾದ ಕಮಾಲ್ ನಡೆಯೋ ಲಕ್ಷಣಗಳೇ ಎಲ್ಲೆಡೆ ದಟ್ಟೈಸಿದೆ.

Click to comment

Leave a Reply

Your email address will not be published. Required fields are marked *

www.publictv.in