ಬೆಂಗಳೂರು: ಶೀರ್ಷಿಕೆಯಿಂದಲೇ ಗಮನ ಸೆಳೆದು ಕುತೂಹಲ ಹುಟ್ಟು ಹಾಕೋ ಟ್ರೆಂಡ್ ಒಂದು ಶುರುವಾಗಿದೆಯಲ್ಲಾ? ಆ ಸಾಲಿಗೆ ಬೇಷರತ್ತಾಗಿ ಸೇರ್ಪಡೆಗೊಳ್ಳೋ ಚಿತ್ರ ರುದ್ರಾಕ್ಷಿಪುರ. ಈಶ್ವರ ಪೋಲಂಕಿ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಶಿಲ್ಪಿಯಾಗಿರೋ ನಾಗರಾಜ್ ಮುರುಡೇಶ್ವರ ನಿರ್ಮಾಣ ಮಾಡಿದ್ದಾರೆ. ಇನ್ನೇನು ಬಿಡುಗಡೆಗೆ ಸಜ್ಜುಗೊಂಡಿರೋ ಈ ಚಿತ್ರ ಕುತೂಹಲ ಕೆರಳಿಸಿರೋದು ತನ್ನೊಳಗೆ ಬಚ್ಚಿಟ್ಟುಕೊಂಡಿರೋ ನಿಗೂಢಗಳಿಂದಲೇ!
ನಿರ್ದೇಶಕ ಈಶ್ವರ ಪೋಲಂಕಿ ಇದೊಂದು ಥ್ರಿಲ್ಲರ್ ಕಥೆ ಹೊಂದಿರೋ ಚಿತ್ರ ಎಂಬುದರ ಹೊರತಾಗಿ ಮತ್ತೆಲ್ಲವನ್ನೂ ನಿಗೂಢವಾಗಿಯೇ ಇಟ್ಟಿದ್ದಾರೆ. ಆದರೆ ಈ ಚಿತ್ರಕ್ಕೆ ರುದ್ರಾಕ್ಷಿಪುರ ಅಂತ ಹೆಸರಿಡಲು ಕಾರಣವೇನು? ಅಸಲೀ ಕಥೆಯೇನೆಂಬ ಕುತೂಹಲ ಮಾತ್ರ ಪ್ರೇಕ್ಷಕರನ್ನು ಕಾಡುತ್ತಲೇ ಇದೆ. ಅದು ಬಹುಶಃ ಮುಂದಿನ ತಿಂಗಳ ಹೊತ್ತಿಗೆಲ್ಲ ತಣಿಯಲಿದೆ.
ಈಶ್ವರ್ ಅಪ್ಪಟ ಕನ್ನಡ ಪ್ರೇಮಿ ಹುಡುಗ. ತನ್ನ ಮೂಲವಿರೋದು ಆಂಧ್ರಪ್ರದೇಶದಲ್ಲಿಯೇ ಆದರೂ ಕನ್ನಡವನ್ನೇ ಉಸಿರೆಂದುಕೊಂಡಿರುವವರು ಈಶ್ವರ್. ಬಹುಶಃ ಓದಿನ ಆಧಾರದಲ್ಲಿಯೇ ಕೆಲಸ ಅರಸಿದ್ದರೆ ಅವರೀಗ ಸಿಎ ಆಗಿ ಕೈ ತುಂಬಾ ಸಂಬಳ ಸಿಗುವ ಕೆಲಸ ಪಡೆದು ನೆಮ್ಮದಿಯಾಗಿರುತ್ತಿದ್ದರು. ಆದರೆ ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ಬಂದು ರುದ್ರಾಕ್ಷಿಪುರ ಚಿತ್ರದ ಮೂಲಕ ಅದನ್ನು ನನಸು ಮಾಡಿಕೊಂಡಿದ್ದಾರೆ.
ಇದು ಪಕ್ಕಾ ಥ್ರಿಲ್ಲರ್ ಕಥಾನಕ. ಪ್ರೇಕ್ಷಕರನ್ನು ಕ್ಷಣ ಕ್ಷಣವೂ ಕಾತರಗೊಳ್ಳುವಂತೆ ಮಾಡಿ ಭರ್ಜರಿ ಮನರಂಜನೆ ನೀಡಬೇಕೆಂಬ ಉದ್ದೇಶವಿಟ್ಟುಕೊಂಡೇ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಈ ಚಿತ್ರದಲ್ಲಿ ದಾವಣಗೆರೆ ಅರ್ಜುನ್ ಸಹಾನ್ ನಾಯಕನಾಗಿ ನಟಿಸಿದ್ದಾರೆ. ರೂಪಿಕಾ ನಾಯಕಿ. ಈಗ ಚಿತ್ರದ ಬಗ್ಗೆ ವ್ಯಾಪಕ ಕುತೂಹಲ ಕೆರಳಿಕೊಂಡಿದೆಯಲ್ಲಾ? ಚಿತ್ರ ನೋಡಿದ ಪ್ರತಿಯೊಬ್ಬರಿಗೂ ತಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನದ್ದನ್ನು ಪಡೆದುಕೊಂಡ ತೃಪ್ತಿಯನ್ನು ಖಂಡಿತಾ ಈ ಚಿತ್ರ ನೀಡುತ್ತದೆ ಎಂಬುದು ನಿರ್ದೇಶಕರ ಭರವಸೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv