Connect with us

Bengaluru City

ನಿಧಿ ನಿಗೂಢದ ನಡುವೆ ನಿಗಿನಿಗಿಸೋ ನಾರಾಯಣ!

Published

on

Share this

ನಿರೀಕ್ಷೆ ನಿಜವಾಗಿದೆ. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ದಾಖಲೆ ಬರೆಯುವಂತೆ ಮೂಡಿ ಬಂದಿದೆ ಎಂಬ ನಂಬಿಕೆ ಪ್ರತೀ ಪ್ರೇಕ್ಷಕರಲ್ಲಿಯೂ ಇತ್ತು. ಅಭಿಮಾನದಾಚೆಗೂ ಎಲ್ಲ ವರ್ಗದ ಪ್ರೇಕ್ಷಕರು ಈ ಸಿನಿಮಾವನ್ನು ವರ್ಷಾಂತ್ಯದ ಮಹಾ ಹಬ್ಬವೆಂಬಂತೆಯೇ ಪರಿಭಾವಿಸಿ ಕಾತರಗೊಂಡಿದ್ದರು. ಅದೆಲ್ಲವನ್ನೂ ನೂರಕ್ಕೆ ನೂರರಷ್ಟು ನಿಜಗೊಳಿಸುವಂತೆ ಈ ಚಿತ್ರವೀಗ ತೆರೆಕಂಡಿದೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯರ ಕನಸುಗಾರಿಕೆ, ನಿರ್ದೇಶಕ ಸಚಿನ್ ರವಿ ಸೇರಿದಂತೆ ಇಡೀ ತಂಡದ ಕ್ರಿಯೇಟಿವಿಟಿ ಮತ್ತು ರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲ ಕಲಾವಿದರ ಸಮರ್ಪಣಾ ಮನೋಭಾವದಿಂದಾಗಿ ಶ್ರೀಮನ್ನಾರಾಯಣ ಕಳೆಗಟ್ಟಿಕೊಂಡೇ ಪ್ರೇಕ್ಷಕರನ್ನು ಎದುರುಗೊಂಡಿದ್ದಾನೆ.

ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಶ್ರೀಮನ್ನಾರಾಯಣನ ಅವತಾರದಷ್ಟೇ ಅದರ ಸೂತ್ರಧಾರಿ ಸಚಿನ್ ರವಿಯವರ ಕಸುಬುದಾರಿಕೆ ಮತ್ತು ಧೈರ್ಯವೂ ಗಮನ ಸೆಳೆಯುತ್ತದೆ. ಇದು ಸಚಿನ್ ಪಾಲಿಗೆ ಮೊದಲ ಚಿತ್ರ. ಆದರೆ ಇಲ್ಲಿ ಅತ್ಯಂತ ಸಂಕೀರ್ಣವಾದ ಕಥೆಯನ್ನೇ ಅವರು ಕೈಗೆತ್ತಿಕೊಂಡಿದ್ದಾರೆ. ಇಲ್ಲಿ ಅಗಾಧ ಪ್ರಮಾಣದ ಪಾತ್ರ ವರ್ಗವಿದೆ. ಕಥೆಯೆಂಬುದು ಸುಳಿವೇ ಸಿಗದಂತೆ ಮತ್ಯಾವುದೋ ದಿಕ್ಕಿನತ್ತ ಕೈ ಚಾಚಿಕೊಳ್ಳುತ್ತದೆ. ಒಂದರೊಳಗೊಂದು ಹೊಸೆದುಕೊಂಡೇ ಒಂದೇ ಸಲಕ್ಕೆ ಹಲವಾರು ದಿಕ್ಕುಗಳತ್ತ ಚಿಮ್ಮುವ ಕಥೆ ಕೊಂಚ ಸೂತ್ರ ತಪ್ಪಿದರೆ ದಿಕ್ಕಾಪಾಲಾಗಿ ಬಿಡುವ ಅಪಾಯವಿತ್ತು. ಆದರೆ ಎಲ್ಲಿಯೂ ಅದು ಸೂತ್ರ ತಪ್ಪದಂತೆ ಜಾಣ್ಮೆಯಿಂದಲೇ ನೋಡಿಕೊಂಡು ಸಚಿನ್ ಕಸುಬುದಾರಿಕೆ ಪ್ರದರ್ಶಿಸಿದ್ದಾರೆ.

ಶ್ರೀಮನ್ನಾರಾಯಣನ ಕಥೆಯ ಮೂಲಸ್ಥಾನ ಅಮರಾವತಿ ಎಂಬ ಊರು. ವಿಶಿಷ್ಟವಾದ ಚಹರೆಗಳನ್ನು ಹೊಂದಿರೋ ಆ ಊರನ್ನು ದರೋಡೆಯನ್ನೇ ಕಸುಬಾಗಿಸಿಕೊಂಡಿರುವ ಮಂದಿ ಆಳುತ್ತಿರುತ್ತಾರೆ. ಧನದಾಹದಿಂದ ಮನುಷ್ಯತ್ವವನ್ನೇ ಮರೆತಂತಿರೋ ಆ ಗ್ಯಾಂಗು ಎಂಥಾ ಭೀಕರ ಕಸುಬಿಗೂ ಹೇಸದಿರುವಂಥಾದ್ದು. ಅಂಥಾದ್ದರ ನಡುವೆ ನಾಟಕ ತಂಡವೊಂದು ಭಾರೀ ನಿಧಿಯನ್ನು ನಿಗೂಢ ಸ್ಥಳದಲ್ಲಿ ಅವುಸಿಡುತ್ತದೆ. ಅದನ್ನು ಪಡೆಯೋ ದಾಹದಿಂದ ಆ ನಾಟಕ ತಂಡದ ಒಂದಷ್ಟು ಮಂದಿಯನ್ನು ದರೋಡೆ ಗ್ಯಾಂಗು ಕೊಂದು ಕೆಡವೋದಲ್ಲದೇ ಇಡೀ ಕುಟುಂಬವನ್ನೇ ನಾಶ ಮಾಡೋ ಪಣ ತೊಡುತ್ತದೆ. ಅಂಥಾ ಊರಿಗೆ ಪೊಲೀಸ್ ಅವತಾರದ ಶ್ರೀಮನ್ನಾರಾಯಣನ ಎಂಟ್ರಿಯಾಗುತ್ತದೆ.

ಆ ರಕ್ಕಸ ಗ್ಯಾಂಗನ್ನು ಮಟ್ಟಹಾಕಿ ಹೇಗೆ ಆ ನಿಧಿಯನ್ನು ಪೊಲೀಸ್ ಅಧಿಕಾರಿ ಕಾಪಾಡಿಕೊಳ್ಳುತ್ತಾನೆಂಬುದು ಪ್ರಧಾನ ಕುತೂಹಲ. ಅದಕ್ಕೆ ರೋಚಕ ಉತ್ತರಗಳೇ ಈ ಚಿತ್ರದಲ್ಲಿವೆ. ರಕ್ಷಿತ್ ಶೆಟ್ಟಿ ಈ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದರೆ, ಶಾನ್ವಿ ಶ್ರೀವಾತ್ಸವ ಅದಕ್ಕೆ ಪ್ರತಿಸ್ಪರ್ಧೆ ಒಡ್ಡುವಂತೆ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಅಶ್ವಿನ್ ಹಾಸನ್, ಗೋಪಾಲ ದೇಶಪಾಂಡೆ, ಮಧುಸೂಧನ್ ರಾವ್, ಗೌತಮ್ ಸೇರಿದಂತೆ ಪ್ರತೀ ಕಲಾವಿದರೂ ಗಮನಾರ್ಹವಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಮತ್ತು ಚರಣ್ ರಾಜ್ ಸಂಗೀತ ಮನಮುಟ್ಟುವಂತಿದೆ. ಕರಮ್ ಚಾವ್ಲಾರ ಛಾಯಾಗ್ರಹಣ ಇದರ ಪ್ಲಸ್ ಪಾಯಿಂಟುಗಳಲ್ಲೊಂದಾಗಿ ಗುರುತಿಸುವಂತಿದೆ.

Click to comment

Leave a Reply

Your email address will not be published. Required fields are marked *

Advertisement