ಬೆಂಗಳೂರು: ಈ ಹಿಂದೆ ಸಡಗರ, ಡೀಲ್ ರಾಜ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ರಾಜ್ ಗೋಪಿ ಈಗ ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಪಯಣಿಗರು ಎಂಬ ವಿಭಿನ್ನ ಶೀರ್ಷಿಕೆ ಹೊಂದಿರುವ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಬಿಗ್‍ಬಾಸ್ ಹಾಗೂ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಟ್ರೈಲರ್ ಅನಾವರಣಗೊಳಿಸಿದರು. ಜೀವನದಲ್ಲಿ ಸುಖ-ದುಃಖಗಳನ್ನೆಲ್ಲ ಅನುಭವಿಸಿ ನೆಮ್ಮದಿ ಪಡೆಯಲು ಗೋವಾ ಟ್ರಿಪ್ ಹೊರಡುವ ನಾಲ್ವರು ಗೆಳೆಯರ ಕಥೆ ಇದಾಗಿದೆ. ನಲವತ್ತು ದಾಟಿದ ಈ ಸ್ನೇಹಿತರು ಮನೆಯಲ್ಲಿ ಹೆಂಡತಿಯರ ವಿರೋಧದ ನಡುವೆಯೂ ಗೋವಾ ಪಯಾಣ ಆರಂಭಿಸುತ್ತಾರೆ. ನಂತರ ಈ ನಾಲ್ವರ ಜರ್ನಿಯಲ್ಲಿ ಏನೆಲ್ಲಾ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ ಎಂಬುದೇ ಪಯಣಿಗರ ಚಿತ್ರದ ಕಥೆ. ಕೆಂಪಿರುವೆ ಖ್ಯಾತಿಯ ಲಕ್ಷ್ಮಣ್, ಶಿವಶಂಕರ್ ಅಶ್ವಿನ್ ಹಾಸನ್, ರಾಘವೇಂದ್ರ ಹಾಗೂ ಇತರರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Advertisement
ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ರಾಜ್‍ಗೋಪಿ ಅವರವರ ಜೀವನದಲ್ಲಿ ಪ್ರತಿಯೊಬ್ಬರು ಪಯಣಿಗರೇ. ಆ ಪಯಣ ಮುಗಿಯುವವರೆಗೆ ನಾವು ಸಂತೋಷವಾಗಿದ್ದು ಇತರರನ್ನು ಸಂತೋಷವಾಗಿಡಿ ಅನ್ನೋದೆ ಈ ಚಿತ್ರದ ಕಥೆ. ಈ ಚಿತ್ರದಲ್ಲಿ ಲವ್ ಜರ್ನಿ, ಕಾಮಿಡಿ ಜರ್ನಿ ಎರಡೂ ಇದೆ. ಸಂಸಾರದ ನೊಗವನ್ನು ಹೊತ್ತ ಈ ನಾಲ್ವರು ಗೋವಾ ಪ್ರಯಾಣಕ್ಕೆ ಅಲ್ಲಿ ಏನೋ ಒಂದು ಎಡವಟ್ಟಿನಲ್ಲಿ ಸಿಕ್ಕಿಹಾಕಿಕೊಂಡು ಮತ್ತೆ ಅದರಿಂದ ಹೇಗೆ ಹೊರಬರುತ್ತಾರೆ. ಪ್ರತಿಯೊಬ್ಬರ ಜೀವನಕ್ಕೆ ಬೆಲೆ ಕೊಡಬೇಕು, ಕುಟುಂಬಕ್ಕೆ ಬೆಲೆ ಕೊಡಬೇಕು. ಮನೆಯವರಿಗೆ ಒಂದಷ್ಟು ಕಾಲವನ್ನು ಮೀಸಲಿಡಿ ಎಂದು ಈ ಚಿತ್ರದ ಮೂಲಕ ಸಂದೇಶ ಹೇಳಹೊರಟಿದ್ದೇವೆ ಎಂದು ಹೇಳಿದರು. ವಿನು ಮನಸ್ಸು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. 60-70 ಭಾಗದಷ್ಟು ಚಿತ್ರದ ಕಥೆ ಕಾರಿನಲ್ಲೇ ನಡೆಯುತ್ತದೆ.