ಬೆಂಗಳೂರು: ಬದುಕು ಬೇರೆಲ್ಲಿಯೋ ಸೆಳೆದುಕೊಂಡಾಗಲೂ ಅಸಲೀ ಆಸಕ್ತಿಯೊಂದು ಕೈ ಹಿಡಿದು ಜಗ್ಗಿದಂತಾಗುತ್ತದಲ್ಲಾ? ಆ ಸೆಳೆತಕ್ಕೆ ಬಿದ್ದ ಮನಸುಗಳೇ ಹೊಸತೇನನ್ನೋ ಸೃಷ್ಟಿಸಿದ್ದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಸಿನಿಮಾ ಕ್ಷೇತ್ರವೂ ಇದಕ್ಕೆ ಹೊರತೇನಲ್ಲ. ಅಂಥಾದ್ದೇ ಒಂದು ಸೆಳೆತದೊಂದಿಗೆ ತಿಂಗತಿಂಗಳು ಸಂಬಳ ಕೊಡೋ ಕೆಲಸವನ್ನೂ ಬಿಟ್ಟು ಬಂದ ವಸಿಷ್ಠ ಬಂಟನೂರು ಇದೀಗ ಒನ್ ಲವ್ 2 ಸ್ಟೋರಿ ಎಂಬ ವಿಶಿಷ್ಠವಾದೊಂದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ತಿಂಗಳೇ ಈ ಸಿನಿಮಾ ಬಿಡುಗಡೆಯಾಗಲಿದೆ.
ಚೆಂದದ ಹಾಡು ಮತ್ತು ಮೋಹಕ ಟ್ರೈಲರ್ ಮೂಲಕವೇ ಈ ಚಿನಿಮಾ ಈಗ ಪ್ರೇಕ್ಷಕರ ಆಸಕ್ತಿಯನ್ನ ಸೆಳೆದುಕೊಂಡಿದೆ. ಇದು ಹೊಸಬರೇ ಸೇರಿ ಮಾಡಿರೋ ಚಿತ್ರ. ಆದ್ದರಿಂದ ಪ್ರಚಾರದ ವಿಚಾರದಲ್ಲಿ ಆರಂಭಿಕ ಹಿನ್ನಡೆಯಾಗೋದು ಸಹಜವೇ. ಆದರೆ ಟ್ರೈಲರ್ ಹಾಗೂ ಹಾಡುಗಳು ಆ ಕೊರತೆಯನ್ನ ನೀಗಿಸಿವೆ. ಈ ಬೆಳವಣಿಗೆ ಕಂಡು ನಿರ್ದೇಶಕ ವಸಿಷ್ಠ ಸೇರಿದಂತೆ ಇಡೀ ಚಿತ್ರ ತಂಡವೇ ಖುಷಿಗೊಂಡಿದೆ.
ಹೀಗೆ ಮೊದಲ ಚಿತ್ರದ ಮೂಲಕವೇ ಸದ್ದು ಮನಾಡುತ್ತಿರೋ ವಸಿಷ್ಠ ಉತ್ತರಕರ್ನಾಟಕದ ಬಾಗಲಕೋಟೆಯವರು. ಆರಂಭ ಕಾಲದಿಂದಲೂ ಓದು ಮತ್ತು ಬರವಣಿಗೆಯ ಗೀಳು ಹೊಂದಿದ್ದ ಇವರು ನಾಲಕ್ಕನೇ ತರಗತಿಯಲ್ಲಿ ಓದುತ್ತಿರುವಾಗಲೇ ನಾಟಕವೊಂದನ್ನು ನಿರ್ದೇಶನ ಮಾಡಿದ್ದ ಪ್ರತಿಭಾವಂತ. ಆದರೆ ಆಸಕ್ತಿ ಮತ್ತು ಆಸೆ ಆಕಾಂಕ್ಷೆಗಳಿಗೆ ತಕ್ಕುದಾಗಿಯೇ ಬದುಕು ಸಾಗೋದಿಲ್ಲವಲ್ಲಾ? ಅದೇ ರೀತಿ ವಸಿಷ್ಠ ಕೂಡಾ ಆಸಕ್ತಿಗೆ ಸಂಬಂಧವಿಲ್ಲದ ಲೋಕದಲ್ಲಿ ಕಳೆದು ಹೋಗಬೇಕಾಗಿ ಬಂದಿತ್ತು.
ಅವರು ಜೀವನ ನಿರ್ವಹಣೆಗಾಗಿ ಸೇಲ್ಸ್ ಮ್ಯಾನೇಜರ್ ಕೆಲಸ ಮಾಡಲಾರಂಭಿಸಿದ್ದರು. ಆದರೆ ಆ ಕೆಲಸವೂ ಒಂದು ವರ್ಷದ ಹೊತ್ತಿಗೆಲ್ಲ ಬೋರು ಹೊಡೆಸಲಾರಂಭಿಸಿತ್ತು. ಆ ಘಳಿಗೆಯಲ್ಲಿಯೇ ಸಿನಿಮಾ ಮೇಲಿನ ವ್ಯಾಮೋಹ ಅತಿಯಾಗಿ ಕಡೆಗೂ ಆದರೆ ಸಿನಿಮಾ ನಿರ್ದೇಶಕನಾಗಬೇಕೆಂಬ ಛಲದೊಂದಿಗೇ ಕೆಲಸವನ್ನ ಬಿಟ್ಟು ಹೊರ ಬಂದಿದ್ದರು. ಹಾಗೆ ಬಂದವರಿಗೆ ಒಂದೇ ಆಲೋಚನೆಯ ಒಂದಷ್ಟು ಗೆಳೆಯರ ಜೊತೆ ಸಿಕ್ಕಿತ್ತು. ಆ ತಂಡದ ನಡುವೆ ಎಲ್ಲ ದಿಕ್ಕಿನಲ್ಲಿಯೂ ಚರ್ಚಿಸುತ್ತಲೇ ಈ ಚಿತ್ರದ ಕಥೆಯನ್ನೂ ರೆಡಿ ಮಾಡಿಕೊಂಡು ತಿದ್ದಿ ತೀಡಿದ ನಂತರವಷ್ಟೇ ಚಿತ್ರೀಕರಣ ಶುರು ಮಾಡಲಾಗಿತ್ತು.
ಇದೊಂಥರಾ ಹೊಸಾ ಬಾಟಲಿಯಲ್ಲಿ ಹಳೇ ಎಣ್ಣೆ ಕೊಟ್ಟಂಥಾ ಕಥೆ ಅನ್ನೋದು ವಸಿಷ್ಠ ಅವರ ಅಭಿಪ್ರಾಯ. ಕಥೆಯನ್ನಿಲ್ಲಿ ಭಿನ್ನವಾದ ರೀತಿಯಲ್ಲಿ ಹೇಳಲಾಗಿದೆಯಂತೆ. ಸ್ಕ್ರೀನ್ ಪ್ಲೇ ಕಂಡ ಪ್ರತಿಯೊಬ್ಬರೂ ಬೆರಗಾಗುವಂತಿದೆಯಂತೆ. ಇದುವೇ ಈ ಸಿನಿಮಾದ ಅಸಲೀ ವಿಶೇಷತೆ. ಗಾಢವಾದ ಪ್ರೀತಿ, ಭರ್ಜರಿ ಮನೋರಂಜನೆ, ಮೈ ನವಿರೇಳಿಸೋ ಸಾಹಸ ಸನ್ನಿವೇಶಗಳನ್ನು ಈ ಚಿತ್ರ ಒಳಗೊಂಡಿದೆ.
ಖುದ್ದು ವಸಿಷ್ಠ ಅವರೇ ಮೂರು ಹಾಡುಗಳನ್ನು ಬರೆದಿದ್ದಾರೆ. ಅದೆಲ್ಲವೂ ಕೇಳಿದವರನ್ನು ಸೆಳೆದುಕೊಂಡಿವೆ. ಎಲ್ಲಾ ಹಾಡುಗಳೂ ಒಂಥರಾ ಹ್ಯಾಂಗೋವರ್ ಸೃಷ್ಟಿ ಮಾಡಿ ಬಿಟ್ಟಿವೆ. ಅಂದಹಾಗೆ ಈ ಚಿತ್ರದಲ್ಲಿ ಗಾಂಧಿನಗರದ ಒಂದಷ್ಟು ಕಥೆಗಳೂ ಇದ್ದಾವಂತೆ. ಒಟ್ಟಾರೆಯಾಗಿ ಹೊಸಬರು ಮಾಡಿದ ಚಿತ್ರವೆಂಬ ಸುಳಿವೇ ಕಾಣಿಸದಂತೆ ಈ ಸಿನಿಮಾವನ್ನು ರೂಪಿಸಿರೋ ಖುಷಿ, ದೊಡ್ಡ ಮಟ್ಟದ ಗೆಲುವಿನ ನಿರೀಕ್ಷೆಯಲ್ಲಿ ವಸಿಷ್ಠ ಅವರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv