ಬೆಂಗಳೂರು: 18 ವರ್ಷಗಳ ಹಿಂದೆ ವಿ ರವಿಚಂದ್ರನ್ ಅಭಿನಯಿಸಿದ `ಓ ಪ್ರೇಮವೇ’ ಬಿಡುಗಡೆಗೊಂಡಿತ್ತು. ಅದೇ ಶೀರ್ಷಿಕೆ ಹೊಂದಿರುವ ಹೊಸಾ ಚಿತ್ರವೊಂದು ಬಿಎಂಕೆ ಫಿಲಂಸ್ ಅಡಿಯಲ್ಲಿ ತಯಾರಾಗಿ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಲಂಡನ್ ಫಿಲ್ಮ್ ಅಕಾಡೆಮಿಯಲ್ಲಿ ನಿರ್ದೇಶನ ತರಬೇತಿ ಪಡೆದಿರುವ ಮನೋಜ್ ಅವರ ಚೊಚ್ಚಲ ನಿರ್ದೇಶನದ `ಓ ಪ್ರೇಮವೇ’ ಚಿತ್ರಕ್ಕೆ ಶ್ರೀಮತಿ ಸಿ ಟಿ ಚಂಚಲ ಕುಮಾರ್ ಅವರು ಹಣ ಹೂಡಿದ್ದಾರೆ.
Advertisement
Advertisement
ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರಿಂದ ಸ್ಪೂರ್ತಿಗೊಂಡಿದ್ದ ಮನೋಜ್ ತ್ರಿಕೋನ ಪ್ರೇಮ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಸ್ವತಃ ನಾಯಕನಾಗಿ ಅಭಿನಯಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ನಿಜ ಜೀವನದಲ್ಲಿ ಸಂಭವಿಸಿದ ಘಟನೆಯೊಂದಕ್ಕೆ ಒಂದಿಷ್ಟು ಸಿನಿಮ್ಯಾಟಿಕ್ ಅಂಶಗಳನ್ನು ಸೇರಿಸಿ ಓ ಪ್ರೇಮವೇ ಚಿತ್ರದ ಕಥೆ ರೂಪಿಸಲಾಗಿದೆ.
Advertisement
ಮೊಗ್ಗಿನ ಮನಸು ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮನೋಜ್ ಕುಮಾರ್, ನಿಕ್ಕಿ ಗಲ್ರಾಣಿ ಹಾಗೂ ಅಪೂರ್ವ ಅವರನ್ನು ಒಳಗೊಂಡ `ಓ ಪ್ರೇಮವೇ’ ಸಿನಿಮಾ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ. ಇಬ್ಬರು ನಾಯಕಿಯರ ನಡುವಿನ ಪ್ರೀತಿಯ ಸಂದರ್ಭಗಳು ಇಲ್ಲಿ ಪ್ರಮುಖವಾಗುತ್ತವೆ. ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಪ್ರಶಾಂತ್ ಸಿದ್ದಿ ಹಾಗೂ ವಿಶೇಷ ಪಾತ್ರದಲ್ಲಿ ಹುಚ್ಚ ವೆಂಕಟ್ ಅಭಿನಯಿಸಿದ್ದಾರೆ.
Advertisement
ಎ ಹರ್ಷ, ಮದನ್ ಹರಿಣಿ, ಕಂಬಿರಾಜು, ಶ್ರೀನಿವಾಸ್ ಪ್ರಭು ನೃತ್ಯ ಸಂಯೋಜನೆ, ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜನೆ ಇರುವ ಈ ಚಿತ್ರಕ್ಕೆ ಆನಂದ್ ರಾಜ ವಿಕ್ರಮ್ ಹಾಗೂ ರಾಹುಲ್ ದೇವ್ ಜಂಟಿ ಸಂಗೀತ ನಿರ್ದೇಶಕರುಗಳು.
ಜಯಂತ್ ಕಾಯ್ಕಿಣಿ, ಕವಿರಾಜ್, ಭರ್ಜರಿ ಚೇತನ್ ಗೀತ ಸಾಹಿತ್ಯಕ್ಕೆ ಸೋನು ನಿಗಂ, ಶ್ರೇಯ ಘೋಷಾಲ್, ವಿಜಯ ಪ್ರಕಾಶ್, ಟಿಪ್ಪು ಅವರು ಸುಶ್ರಾವ್ಯಾಗಿ ಹಾಡಿದ್ದಾರೆ. ಈ ಚಿತ್ರದಲ್ಲಿ ಆರು ಹಾಡುಗಳಿದ್ದು ಎರಡು ಹಾಡುಗಳನ್ನು ಸ್ವಿಟ್ಜರ್ ಲ್ಯಾಂಡ್ ಅಲ್ಲಿ ಚಿತ್ರೀಕರಿಸಲಾಗಿದೆ.