Cinema
‘ನಾನು ಕಾಣೆಯಾಗಿದ್ದೇನೆ’ ಅಂತಾ ಬಂದ್ರು ತಾಜ್ಮಹಲ್ ಚಿತ್ರದ ಸಂಗೀತ ನಿರ್ದೇಶಕ

ಬೆಂಗಳೂರು: ಅಭಿಮನ್ ರಾಯ್ ಗೊತ್ತಿಲ್ಲ? ಪೂಜಾರಿ, ತಾಜ್ ಮಹಲ್ ಸಿನಿಮಾಗಳ ಮೂಲಕ ಸಂಗೀತ ನಿರ್ದೇಶಕರಾಗಿ ಬಂದು ನಂತರ ಸಾಕಷ್ಟು ಸಿನಿಮಾಗಳಿಗೆ ಮ್ಯೂಸಿಕ್ ನೀಡಿದವರು. ಡೀಲ್ ರಾಜ್ ಸಿನಿಮಾದ ಆಡಿಯೋ ಹಿಟ್ ಆದ ನಂತರ ಕಳೆದ ಎರಡು ವರ್ಷಗಳಿಂದ ಅಭಿಮನ್ ಸ್ವಲ್ಪ ತೆರೆಮರೆಯಲ್ಲಿದ್ದಾರಾ ಅನಿಸಿತ್ತು. ಆದರೆ ಅಭಿಮನ್ ಈಗ ಮತ್ತೆ ಎದ್ದು ಬಂದಿದ್ದಾರೆ. ಇವರ ಸಂಗೀತ ನಿರ್ದೇಶನದ ಸರಿಸುಮಾರು 8 ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಜೊತೆಗೆ ಸ್ವತಃ ಅಭಿಮನ್ ಅವರೇ ಒಂದು ಸಿನಿಮಾವನ್ನು ನಿರ್ದೇಶನವನ್ನೂ ಮುಗಿಸಿ ಅದರ ಫಸ್ಟ್ ಲುಕ್ ಹೊರಬಿಟ್ಟಿದ್ದಾರೆ.
ಫೆಬ್ರವರಿ ಹದಿನಾರರ ದರ್ಶನ್ ಹುಟ್ಟುಹಬ್ಬದಂದೇ ಅಭಿಮನ್ ಮಗ ಸೋನು ಹುಟ್ಟುಹಬ್ಬವೂ ಆಗಿತ್ತಂತೆ. ಅವತ್ತಿನ ದಿನ ಅಭಿಮನ್ ‘ನಾನು ಕಾಣೆಯಾಗಿದ್ದೇನೆ’ ಎಂಬ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದ ಫಸ್ಟ್ ಲುಕ್ ಅನಾವರಣಗೊಳಿಸಿದ್ದರು. ಆ ಫಸ್ಟ್ ಲುಕ್ ನೋಡಿದವರಿಗೆಲ್ಲಾ ‘ಈ ಸಿನಿಮಾದಲ್ಲಿ ಏನೋ ಇದೆ’ ಅನ್ನೋ ಭಾವವನ್ನು ಮೂಡಿಸುವಂತಿದೆ.
ಅಂದಹಾಗೆ ಈ ಸಿನಿಮಾದಲ್ಲಿ ಅಭಿಮನ್ ಪುತ್ರ ಸೋನು ಬಹುಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ಈ ಹಿಂದೆ ‘ಸ್ಕೂಲು ಸ್ಕೂಲು’ ಸೇರಿದಂತೆ ಅಭಿಮನ್ ಹಾಡಿ ಕುಣಿದಿದ್ದ ಆಲ್ಬಂ ಸಾಂಗ್ ಗಳು ವೈರಲ್ ಆಗಿದ್ದವು. ಈ ಬಾರಿ ಅಭಿಮನ್ ತಮ್ಮ ಪುತ್ರನನ್ನೇ ಮುಖ್ಯ ಪಾತ್ರದಲ್ಲಿ ನಿಲ್ಲಿಸಿದ್ದಾರೆ. ಈ ಚಿತ್ರವನ್ನು ಡಿಸೋಜ, ಅಶೋಕ್ ಮತ್ತು ಸೋಮಶೇಖರ್ ರಾಮದುರ್ಗ ಸೇರಿ ನಿರ್ಮಿಸಿದ್ದಾರೆ. ಬಹುತೇಕ ಚಿತ್ರೀಕರಣ ಪೂರೈಸಿರುವ ‘ನಾನು ಕಾಣೆಯಾಗಿದ್ದೇನೆ’ ಚಿತ್ರತಂಡ ಸದ್ಯದಲ್ಲೇ ಆಡಿಯೋ ಬಿಡುಗಡೆ ಮಾಡಲಿದೆಯಂತೆ.
https://www.youtube.com/watch?v=pLuyfPTGHM8
