ಬೆಂಗಳೂರು: ಕೊಲ್ಲ ಪ್ರವೀಣ್ ನಿರ್ಮಾಣದ ಮಿಸ್ಸಿಂಗ್ ಬಾಯ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರೀಕರಣ ಆರಂಭವಾದ ಕ್ಷಣದಿಂದಲೂ ಈ ಸಿನಿಮಾ ಒಂದಲ್ಲಾ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿತ್ತು. ಕೊಂಚ ತಡವಾದರೂ ಕೂಡಾ ಇದರೆಡೆಗಿನ ಕುತೂಹಲ ಮಾತ್ರ ಸಡಿಲವಾಗಿರಲಿಲ್ಲ. ಅದಕ್ಕೆ ಕಾರಣವಾಗಿರೋದು ಇದಕ್ಕೆ ಆರಿಸಿಕೊಂಡಿರೋ ಮನಮಿಡಿಯುವ ಸತ್ಯಕಥೆ!
ನಿರ್ದೇಶಕ ರಘುರಾಮ್ ತಮ್ಮ ಕೂಸೆಂದುಕೊಂಡು ಶ್ರದ್ಧೆಯಿಂದ ನಿರ್ದೇಶನ ಮಾಡಿರೋ ಚಿತ್ರ ಮಿಸ್ಸಿಂಗ್ ಬಾಯ್. ಈಗ ಬಿಡುಗಡೆಯಾಗಿರೋ ಟ್ರೈಲರ್ ಆ ಶ್ರದ್ಧೆ ಮತ್ತು ಇಡೀ ಚಿತ್ರದ ಆದ್ರ್ರತೆ ಎಂಥಾದ್ದೆಂಬುದಕ್ಕೆ ಸಾಕ್ಷಿಯಂತಿದೆ. ಬುದ್ಧಿ ಬಲಿಯುವ ಮುನ್ನವೇ ಕೈ ಬಿಡಿಸಿಕೊಂಡು ಎಲ್ಲಿಯೋ ಕಳೆದು ಹೋದ ಮಗ. ಆತ ಬಂದೇ ಬರುತ್ತಾನೆಂಬ ನಂಬಿಕೆಯನ್ನೇ ಉಸಿರಾಗಿಸಿಕೊಂಡ ಹೆತ್ತವರು. ಆದರೆ ಈ ಜೀವಗಳನ್ನು ಬೆಸೆಯೋ ದಾರಿ ಮಾತ್ರ ಕಲ್ಪಿಸಿಕೊಳ್ಳಲೂ ಕಷ್ಟವಾಗುವಷ್ಟು ದೂರ.
Advertisement
Advertisement
ಇಂಥಾದ್ದೊಂದು ಸ್ಥಿಯಲ್ಲಿರುವವರ ಕರುಳ ಮರ್ಮರ ಎಂಥಾದ್ದಿರುತ್ತದೆಂಬುದನ್ನು ಈ ಟ್ರೈಲರ್ ಪರಿಣಾಮಕಾರಿಯಾಗಿಯೇ ಅನಾವರಣಗೊಳಿಸಿದೆ. ಈ ಮೂಲಕ ಮಿಸ್ಸಿಂಗ್ ಬಾಯ್ ಚಿತ್ರದ ಒಟ್ಟಾರೆ ಆಂತರ್ಯ ಎಂಥಾದ್ದೆಂಬುದರ ಝಲಕ್ ಅನ್ನು ರಘುರಾಮ್ ನೀಡಿದ್ದಾರೆ. ಈ ಟ್ರೈಲರ್ ಮೂಲಕವೇ ಮಿಸ್ಸಿಂಗ್ ಬಾಯ್ ಪ್ರತೀ ಪ್ರೇಕ್ಷಕರಿಗೂ ಮತ್ತಷ್ಟು ಆಪ್ತವಾಗೋದು ಗ್ಯಾರಂಟಿ.
Advertisement
ಈ ಟ್ರೈಲರ್ ಮೂಲಕವೇ ರಘುರಾಮ್ ತಮ್ಮ ಇಷ್ಟು ವರ್ಷಗಳ ಶ್ರಮವನ್ನ ಸಾರ್ಥಕವಾಗಿಸಿಕೊಂಡಿದ್ದಾರೆ. ಯಾಕೆಂದರೆ ಇದನ್ನು ನೋಡಿದ ಯಾರೇ ಆದರೂ ಒಂದರೆ ಕ್ಷಣ ಭಾವುಕರಾಗದಿರಲು ಸಾಧ್ಯವೇ ಇಲ್ಲ. ಅದೆಷ್ಟೋ ವರ್ಷಗಳ ಹಿಂದೆ ಹೆತ್ತವರ ಕೈ ಬಿಡಿಸಿಕೊಂಡು ಕಾಣೆಯಾದ ಎಳೇ ಹುಡುಗನ ಬೆರಳ ಮೊನೆ ಎದೆಗೇ ತಾಕಿದಂಥಾ ತಲ್ಲಣದಿಂದ ಕಂಪಿಸದಿರಲೂ ಸಾಧ್ಯವಿಲ್ಲ. ಒಂದು ಟ್ರೈಲರ್ ಪರಿಣಾಮಕಾರಿಯಾಗಲು ಇದಕ್ಕಿಂತಲೂ ಬೇರೇನೂ ಬೇಕಿಲ್ಲ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv