ಬೆಂಗಳೂರು: ಕಿಸ್ ಅಂದರೆ ಮಡಿವಂತಿಕೆಯ ಮಂದಿ ಮುಜುಗರ ಪಟ್ಟುಕೊಳ್ಳಬಹುದೇನೋ. ಆದರೆ ಅದು ಕಾಲಮಾನವನ್ನು ಮೀರಿಕೊಂಡು ಸದಾ ತಾಜಾತನ ಉಳಿಸಿಕೊಳ್ಳೋ ಮಧುರಾನುಭೂತಿ. ಹದಿಹರೆಯದ ಮನಸುಗಳಲ್ಲಿ ಸ್ಫುರಿಸೋ ಮೆಲುವಾದ ಕಂಪನ ಮತ್ತು ಪ್ರೇಮವನ್ನು ಮಾತಿಲ್ಲದೆಯೇ ದಾಟಿಸೋ ವಾಹಕ. ಇಂಥಾ ರೊಮ್ಯಾಂಟಿಕ್ ಕಲ್ಪನೆಗಳಿಗೆ ತಕ್ಕುದಾಗಿಯೇ ಒಂದಿನಿತೂ ವಲ್ಗಾರಿಟಿಯ ಸೋಂಕಿಲ್ಲದೆ ನಿರ್ದೇಶಕ ಎ.ಪಿ ಅರ್ಜುನ್ ಬತ್ತಳಿಕೆಯಿಂದ ಹೊರಬಂದು ಪ್ರೇಕ್ಷಕರ ಮುಂದೆ ನಿಲ್ಲೋ ಸನ್ನಾಹದಲ್ಲಿರೋ ಚಿತ್ರ ಕಿಸ್.
ಎ.ಪಿ ಅರ್ಜುನ್ ಯುವ ತುಮುಲಗಳ ಎರಕ ಹೊಯ್ದಂಥಾ ಪ್ರೀತಿ ತುಂಬಿದ ದೃಶ್ಯ ಕಟ್ಟುವಲ್ಲಿ ಸಿದ್ಧಹಸ್ತರೆನ್ನಿಸಿಕೊಂಡಿರೋ ನಿರ್ದೇಶಕ. ಅಂಬಾರಿಯಿಂದ ಆರಂಭವಾಗಿ ಕಿಸ್ ವರೆಗೂ ಅದು ಅನೂಚಾನವಾಗಿಯೇ ಮುಂದುವರೆದುಕೊಂಡು ಬಂದಿದೆ.
ಕಿಸ್ ಎಂಬ ಹೆಸರೇ ಇದೊಂದು ಯುವ ಆವೇಗದ ಪ್ರೇಮಕಥೆ ಹೊಂದಿರೋ ಸಿನಿಮಾ ಅನ್ನೋದನ್ನು ಜಾಹೀರು ಮಾಡುವಂತಿದೆ. ಹಾಗೆಂದ ಮಾತ್ರಕ್ಕೆ ಇದು ಬರೀ ಯುವ ಜನಾಂಗಕ್ಕೆ ಮಾತ್ರವೇ ಸೀಮಿತವಾದ ಸಿನಿಮಾ ಅಲ್ಲ. ಎಲ್ಲ ವರ್ಗದ, ವಯೋಮಾನದವರೂ ನೋಡಿ ಎಂಜಾಯ್ ಮಾಡುವ ರೀತಿಯಲ್ಲಿ ಅರ್ಜುನ್ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ.
ಕಿಸ್ ಅಂದರೆ ಸದಾ ಫ್ರೆಶ್ ಆಗಿರೋ ಭಾವವೇ ಆದರೂ ಅದಕ್ಕೂ ಒಂದಷ್ಟು ಮುಜುಗರದಂಥಾ ಲೇಪ ಬಳಿಯಲಾಗಿದೆ. ಆದರೆ ಇಲ್ಲಿರೋದು ಸಾವಿರಕ್ಕೊಂದು ಎಂಬಂಥಾ ತಾಜಾ ತಾಜಾ ಲವ್ ಸ್ಟೋರಿ. ಅದು ಎಲ್ಲ ವಯೋಮಾನದವರಲ್ಲಿಯೂ ಆಹ್ಲಾದ ಮೂಡಿಸುವ ರೀತಿಯಲ್ಲಿ ಮೂಡಿ ಬಂದಿದೆಯಂತೆ.
ಈಗಾಗಲೇ ಬಂದಿರೋ ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಇದರ ತಾಜಾತನದ ಅನುಭೂತಿ ಪ್ರೇಕ್ಷಕರಿಗೆಲ್ಲ ಮುಟ್ಟಿದೆ. ಅದುವೇ ಕಾತರವಾಗಿಯೂ ಪಡಿಮೂಡಿಕೊಂಡಿದೆ. ಕಿಸ್ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ.