Bengaluru CityCinemaKarnatakaLatestSandalwood

ತಾಯಿಗಾಗಿ ಪವರ್ ಹುಡುಕಿ ಹೊರಟ ರಾಕಿಗೆ ಇವರೆಲ್ಲಾ ಸಾಥ್ ನೀಡಿದ್ರು

– ಇದು ಕೆಜಿಎಫ್ ಟು ಬಾಂಬೆ ಜರ್ನಿ

ಬೆಂಗಳೂರು: ಒಂದು ಸಿನಿಮಾ ಹಿಟ್ ಆಗಬೇಕೆಂದ್ರೆ ಅದಕ್ಕೆ ತೆರೆಯ ಮೇಲೆ ಮತ್ತು ಹಿಂದಿನ ಕೈಗಳ ಪರಿಶ್ರಮ ಇರುತ್ತದೆ. ಅಂತೆಯೇ ಒಂದು ಸಿನಿಮಾ ಜನಮನದಲ್ಲಿ ಅಚ್ಚಳಿಯದಂತೆ ನೆನಪಿನಲ್ಲಿರಲು ಅದು ತನ್ನದೇ ಆದ ವಿಭಿನ್ನತೆಯನ್ನು ಹೊಂದಿರುತ್ತೆ. ಕನ್ನಡದ ಎವರ್ ಗ್ರೀನ್ ಸಿನಿಮಾಗಳಾದ ಬಂಗಾರದ ಮನುಷ್ಯ, ನಾಗರಹಾವು ಚಿತ್ರಗಳನ್ನು ಜನ ಇಂದಿಗೂ ನೋಡುತ್ತ ಕುಳಿತವರು ಅತ್ತಿತ್ತ ಕದಡಲ್ಲ. ಕಾರಣ ಕಥೆಯ ಹಿಡಿತ, ಕಲಾವಿದರ ನಟನೆ, ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲ ಅಂಶಗಳು ಅಲ್ಲಿ ಮುಖ್ಯವಾಗಿರುತ್ತವೆ.

ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ ಎವರ್ ಗ್ರೀನ್ ಸಿನಿಮಾಗಳ ಪಟ್ಟಿಗೆ ಸೇರ್ಪಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಚಿತ್ರ ಬಿಡುಗಡೆ ಮುನ್ನವೇ ಕೆಜಿಎಫ್ ಎಂಬ ಮಿಂಚಿನ ಬೆಳಕು ಕನ್ನಡದ ಗಡಿದಾಟಿ ಎಲ್ಲಡೆ ಪಸರಿಸುತ್ತಿದೆ. ಕೋಲಾರದ ಚಿನ್ನದ ಗಣಿಯಲ್ಲಿ ಆರಂಭವಾಗುವ ಕಥೆ ಅಲ್ಲಿಯೇ ಅಂತ್ಯವಾಗಲಿದೆ. ಈ ಆದಿ ಮತ್ತು ಅಂತ್ಯಗಳ ನಡುವಿನ ಕಥೆಯೇ ಕೆಜಿಎಫ್. ಕೆಜಿಎಫ್ ಸಿನಿಮಾ ಸೆಟ್ಟೇರಿದಾಗ ಯಶ್ ನಟನೆ ಉಳಿದ ಚಿತ್ರಗಳಂತೆ ಇದು ಇರಬಹುದು ಎಂದು ಹಲವರು ಲೆಕ್ಕಾಚಾರ ಹಾಕಿದ್ದುಂಟು. ಈ ಹಿಂದೆ ಯಶ್ ಹೆಚ್ಚಾಗಿ ಲವರ್ ಬಾಯ್ ಪಾತ್ರ ಮತ್ತು ಮಂಡ್ಯದ ಪಡ್ಡೆ ಹುಡುಗನ ಗೆಟಪ್ ನಲ್ಲಿ ಅಭಿಮಾನಿಗಳನ್ನು ಅಕರ್ಷಿಸಿದ್ದುಂಟು. ಮೊಗ್ಗಿನ ಮನಸ್ಸಿನಿಂದ ಅರಂಭವಾದ ಯಶ್ ಪಯಣ ಕೆಜಿಎಫ್ ನಿಲ್ದಾಣದಲ್ಲಿದೆ.

ಮೊಗ್ಗಿನ ಮನಸ್ಸಿನ ಚೆಲುವನಾಗಿ ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಯಶ್, ಇಂದು ರಣ ರಣ ಲುಕ್ ನಲ್ಲಿ ಜನರ ಮುಂದಿದ್ದಾರೆ. ಅಂದಿಗೂ-ಇಂದಿಗೂ ಹಲವು ಏಳು ಬೀಳುಗಳನ್ನು ಕಂಡಿರುವ ಯಶ್ ಹೊಸ ದಾಖಲೆಯ ಬರೆಯುವ ಹುಮ್ಮಸ್ಸಿನಲ್ಲಿರೋದಂತು ಸತ್ಯ. ಚಿತ್ರತಂಡ ಆರಂಭದಿಂದಲೂ ಇದೊಂದು ಭಿನ್ನ ಸಿನಿಮಾ ಅಂತಾನೇ ಹೇಳುತ್ತಾ ಬರುತ್ತಿತ್ತು. ಅಂದು ಚಿತ್ರತಂಡ ಹೇಳಿದ ಮಾತು ಸತ್ಯ ಎಂಬುವುದು ಹಲವರಿಗೆ ಇಂದು ಮನವರಿಕೆ ಆಗಿದ್ದಂತು ನಿಜ. ಈ ಹಿಂದೆ ಬೇರೆ ಭಾಷೆಯ ಸಿನಿಮಾಗಳು ಟ್ರೇಲರ್ ರಿಲೀಸ್ ಮಾಡುವಾಗ ಕನ್ನಡದ ಪತ್ರಕರ್ತರು ಆಯಾ ಸ್ಥಳಕ್ಕೆ ಅಂದ್ರೆ ಚೆನ್ನೈ, ಹೈದರಾಬಾದ್, ಮುಂಬೈ ಹೋಗುತ್ತಿದ್ದರು. ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬೇರೆ ಭಾಷೆಯ ಪತ್ರಕರ್ತರು ಬಂದಿರೋದು ಈ ಚಿತ್ರದ ಮತ್ತೊಂದು ವಿಶೇಷ.

ಮೊದಲ ಗೆಲುವು:
ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ದಿನ ಮೊದಲ ಟೀಸರ್ ಬಿಡುಗಡೆ ಆಗಿತ್ತು. ಒಂದೇ ದಿನ ಅಭಿಮಾನಿಗಳ ಹರ್ಷ ಇಮ್ಮಡಿಗೊಂಡ ದಿನ. ಒಂದು ವರ್ಷದಿಂದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಯಶ್ ಕೆಜಿಎಫ್ ಫಸ್ಟ್ ಲುಕ್ ಬಿಡುಗಡೆ ಆಗಿತ್ತೆ ಹೊರತು ಒಂದೇ ಒಂದು ವಿಡಿಯೋ ಹೊರ ಬಂದಿರಲಿಲ್ಲ. 2018 ಜನವರಿ 8ರಂದು ಯಶ್ ಅವರಿಗೆ ಬರ್ತ್ ಡೇ ಗಿಫ್ಟ್ ರೂಪದಲ್ಲಿ ಕೆಜಿಎಫ್ ಟೀಸರ್ ಬಿಡುಗಡೆ ಆಗಿತ್ತು. ಈ ಟೀಸರ್ ನಲ್ಲಿಯೂ ಚಿತ್ರತಂಡ ತನ್ನ ವಿಶೇಷತೆಯನ್ನು ತೋರಿಸಿತ್ತು. ಸಿನಿಮಾದ ದೃಶ್ಯಗಳ ಜೊತೆಗೆ ಮೇಕಿಂಗ್ ನ ಕೆಲ ತುಣುಕುಗಳನ್ನು ಸೇರಿಸಿ ಟೀಸರ್ ರೂಪದಲ್ಲಿ ಹೊರತರಲಾಗಿತ್ತು. “17 ಸಾವಿರ ವರ್ಷಗಳ ಯುದ್ಧದ ಇತಿಹಾಸ, ಅದರಲ್ಲಿ ಕದನಗಳು ಎಷ್ಟೋ ನಡೆದಿವೆ. ಎಷ್ಟೋ ನೆತ್ತರು ಹರಿದಿದೆ. ಆದ್ರೆ ನಮ್ಮ ನೆನಪಲ್ಲಿ ಉಳಿಯೋದು.. ಇಬ್ಬರೇ. ಭಯ ಹುಟ್ಟಿಸಿದವನು, ಭಯ ಸಾಯಿಸಿದವನು. ಇವನು ಅವೆರಡನ್ನು ಮಾಡಿದ್ದ” ಎಂಬ ಹಿನ್ನೆಲೆ ಧ್ವನಿಯಲ್ಲಿ ಟೀಸರ್ ಮೂಡಿ ಬಂದಿತ್ತು.

ಕನ್ನಡದ ನಟನ ಸಿನಿಮಾದ ಟೀಸರ್ ಬಿಡುಗಡೆಯಾದಾಗ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗುತ್ತದೆ. ಕೆಜಿಎಫ್ ಟೀಸರ್ ಬಿಡುಗಡೆಯಾದಾಗ ತಮಿಳುನಾಡಿನಲ್ಲಿ ತನ್ನ ಮೊದಲ ಹೆಜ್ಜೆಯ ಗುರುತು ಮೂಡಿಸಿತ್ತು. ಆ ಟೀಸರ್ ಕಾಲಿವುಡ್ ಅಣ್ತಾಮ್ಮದಿಂರನ್ನು ಆಕರ್ಷಿಸಿತ್ತು. ತಮಿಳುನಾಡಿನ ಅಭಿಮಾನಿಗಳು ಯಶ್ ಕಟೌಟ್ ಹಾಕಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಅದುವೇ ಕೆಜಿಎಫ್ ಚಿತ್ರದ ಮೊದಲ ಗೆಲುವು.

ಟೀಸರ್ ಬಿಡುಗಡೆ ಬಳಿಕ ಸುಮಾರು 6ರಿಂದ 7 ತಿಂಗಳು ಕೆಜಿಎಫ್ ಸದ್ದಿಲ್ಲದೇ ಯಶಸ್ಸಿನ ಸಿದ್ಧತೆಯಲ್ಲಿ ತೊಡಗಿಕೊಂಡಿತ್ತು. ಈ ಮಧ್ಯೆ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ ಎಂಬ ವಿಷಯ ಹೊರ ಬಂತು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುವಾಗ ಚಿತ್ರ ನವೆಂಬರ್ ತಿಂಗಳಲ್ಲಿ ಹೊರ ತರಲು ಸಿದ್ಧತೆ ನಡೆಸಲಾಗುತ್ತಿದೆ ಅಂತಾ ಹೇಳುವ ಮೂಲಕ ರಾಕಿಂಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಅದ್ರೆ ಪೋಸ್ಟ್ ಪ್ರೊಡೆಕ್ಷನ್ ಕೆಲಸ ತಡವಾದ್ದರಿಂದ ಚಿತ್ರತಂಡ ಅಧಿಕೃತವಾಗಿ ಡಿಸೆಂಬರ್ 21ರಂದು ರಿಲೀಸ್ ಆಗುತ್ತಿದೆ ಎಂದು ಪ್ರಕಟಿಸಿತು.

ರಾಕಿಂಗ್ ಸಾಥ್:
ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದಾಗ ಕೆಜಿಎಫ್ ಗೆ ಸಾಥ್ ನೀಡಿದ್ದು, ತಮಿಳು ನಟ ವಿಶಾಲ್, ಬಾಲಿವುಡ್ ನಟ ಫರ್ಹಾನ್ ಅಖ್ತರ್, ಹೊಂಬಾಳೆ ಫಿಲ್ಮ್ಸ್, ಲಹರಿ ಮ್ಯೂಸಿಕ್ ಸಂಸ್ಥೆ ಮತ್ತು ಎಕ್ಸೆಲ್ ಮೂವೀಸ್ ಸೇರಿದಂತೆ ಎಲ್ಲ ಭಾಷೆಯ ನಿರ್ಮಾಪಕರು ಕೆಜಿಎಫ್ ಖರೀದಿಗೆ ಮುಂದಾದರು. ಹೀಗೆ ಎಲ್ಲ ಭಾಷೆಯಲ್ಲಿ ಬಲಾಡ್ಯ ಸಂಸ್ಥೆಗಳೇ ಕೆಜಿಎಫ್ ಬೆನ್ನಿಗೆ ನಿಂತಿವೆ.

ನವೆಂಬರ್ 11ರಂದು ಬಿಡುಗಡೆಯಾದ ಟ್ರೇಲರ್ ಭೂಗತ ಲೋಕದ ಕರಾಳ ಸತ್ಯವನ್ನು ಕೆಜಿಎಫ್ ತೋರಿಸಲಿದೆ ಎಂಬುವುದನ್ನು ಸಾರಿ ಹೇಳಿತ್ತು. ಓರ್ವ ಕಥಾನಾಯಕನ ಜೀವನದ ಏರುಪೇರುಗಳನ್ನು ತುಂಬಾ ಸ್ಪಷ್ಟವಾಗಿ ಪ್ರಶಾಂತ್ ನೀಲ್ ತೋರಿಸುವ ಪ್ರಯತ್ನ ಟ್ರೇಲರ್ ನಲ್ಲಿ ಕಂಡಿತ್ತು. ಇನ್ನು ಟ್ರೇಲರ್ ಆರಂಭದಲ್ಲಿ ಕೇಳಿಬರುವ ಹಿನ್ನೆಲೆ ಧ್ವನಿ ನೋಡುಗರಲ್ಲಿ ರೋಮ ರೋಮಗಳಲ್ಲಿ ರೋಮಾಂಚನ ಮಾಡುವಲ್ಲಿ ಯಶ್ವಸಿಯಾಗಿತ್ತು.

1951ರಂದು ಕೋಲಾರದಲ್ಲಿ ಆರಂಭವಾಗುವ ಚಿತ್ರಕಥೆ, ಮುಂಬೈನತ್ತ ಸಾಗಿ ಬರುತ್ತದೆ. ಮುಂಬೈ ಭೂಗತ ಲೋಕದ ಬಾದ್ ಶಾ ಆಗುವ ರಾಕಿ ಕೆಜಿಎಫ್‍ಗೆ ಹೇಗೆ ಬರುತ್ತಾನೆ. ಮುಂಬೈನಲ್ಲಿ ಡಾನ್ ನಾಗಿ ಬೆಳೆಯುವ ರಾಕಿ ಕೋಲಾರದ ಕೆಜಿಎಫ್ ಗೆ ಹೇಗೆ ಬರುತ್ತಾನೆ. ಆತನ ಮೂಲ ಕಥೆ ಏನೆಂಬುದನ್ನು ನೀವು ಸಿನಿಮಾದಲ್ಲಿ ಕಾಣಬಹುದು. ಆದ್ರೆ ಟ್ರೇಲರ್ ನಲ್ಲಿ ಎಲ್ಲವನ್ನು ತಿಳಿಸಿರುವ ನಿರ್ದೇಶಕ ಕಥೆಯ ಮೂಲವನ್ನು ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ.

ಪಂಚ ಭಾಷೆಗಳಲ್ಲಿ ತಯಾರಾಗಿರುವ ಕೆಜಿಎಫ್ ಚಿತ್ರದ ಶೂಟಿಂಗ್ ಮೈಸೂರು, ಕೋಲಾರ, ಮುಂಬೈ, ಚೆನ್ನೈ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ನಡೆಸಲಾಗಿದೆ. ಈ ಚಿತ್ರದ ವಿತರಣಾ ಹಕ್ಕನ್ನು ಅನಿಲ್ ತಡಾನಿ, ರಿತೇಶ್ ಸಿದ್ವಾನಿ, ಫರ್ಹಾನ್ ಅಕ್ತರ್ ತೆಗೆದುಕೊಂಡಿದ್ದು ದೇಶಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಬಾಹುಬಲಿ ಎಂಬ ಕಾನ್ಸೆಪ್ಟ್ ಮಾಡಿ, ಎಲ್ಲಾ ಭಾಷೆಗೂ ಇದು ಅನ್ವಯವಾಗುತ್ತೆ ಅಂತ ಹೇಳಿಕೊಟ್ಟ ರಾಜಮೌಳಿ ಅವರ ಹಾದಿಯನ್ನ ನಾವು ಅನುಕರಿಸುತ್ತಿದ್ದೇವೆ. ಕೆಜಿಎಫ್ ಸಿನಿಮಾ ಕೂಡ ಯೂನಿವರ್ಸಲ್ ಕಾನ್ಸೆಪ್ಟ್. ಆದ್ದರಿಂದ ಎಲ್ಲಾ ಭಾಷೆಯಲ್ಲಿ ಬಿಡುಗಡೆ ಮಾಡೋದಕ್ಕೆ ಜಗತ್ತಿನಾದ್ಯಂತ ತೆರೆಗೆ ತರೋದಕ್ಕೆ ಪ್ಲ್ಯಾನ್ ಮಾಡಿದ್ದೇವೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.

ನಿರ್ದೇಶಕ ಪ್ರಶಾಂತ್ ನೀಲ್ ಮನದಾಳದ ಮಾತು:
ತಾಯಿ ಮತ್ತು ಒಂದು ಮಗುವಿನ ಬಾಂಧವ್ಯವನ್ನ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಟ್ರೇಲರ್ ಮತ್ತು ಟೀಸರ್ ನೋಡಿದವರು 70ರ ದಶಕದ ಅಂತಾನೇ ತಿಳಿದಿರ್ತಾರೆ. ಆದ್ರೆ ತಾಯಿ ಮತ್ತು ಮಗನ ಸೆಂಟೆಮೆಂಟ್ ನಮ್ಮ ಚಿತ್ರದ ಮೂಲ ಕಥೆ. 1970ರ ದಶಕವನ್ನ ಚಿತ್ರಕ್ಕಾಗಿ ಪುನರ್ ನಿರ್ಮಾಣ ಮಾಡಬೇಕಿತ್ತು. ಹಾಗಾಗಿ ಅಂದಿನ ಉಡುಪು, ಮಾತಿನ ಶೈಲಿ, ಜೀವನ ಕ್ರಮ, ಸ್ಥಳ ಆಯ್ಕೆಯ ಬಗ್ಗೆ ರಿಸರ್ಚ್ ಮಾಡಲು ನಮ್ಮ ತಂಡ ಎರಡು ವರ್ಷ ಕೆಲಸ ಮಾಡಿದೆ. ಚಿತ್ರದ ಪ್ರತಿಯೊಂದು ಅಂಶವನ್ನು ಪ್ರಾಯೋಗಿಕವಾಗಿ ಪ್ರಯತ್ನಿಸಲಾಯಿತು. ಫೋಟೋ ಶೂಟ್, ಸ್ಕೆಚ್ ಮಾಡಿ ಎಲ್ಲವನ್ನು 1970ರ ಕಾಲದಂತೆ ನಿರ್ಮಿಸಿಲು ಮಾಡಲು ಚಿತ್ರತಂಡ ಸಾಕಷ್ಟು ಪ್ರಯತ್ನ ಮಾಡಿದೆ ಎಂದು ಚಿತ್ರದ ಅನುಭವವನ್ನು ಪ್ರಶಾಂತ್ ನೀಲ್ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದರು.

ಟ್ರೇಲರ್ ಸಾಕಷ್ಟು ಸದ್ದು ಮಾಡುತ್ತಿರುವಾಗಲೇ ಚಿತ್ರತಂಡ ಐದು ಭಾಷೆಗಳಲ್ಲಿಯೂ ‘ಸಲಾಂ ರಾಕಿ ಭಾಯ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿತು. ಒಬ್ಬ ಸಾಮಾನ್ಯ ಹುಡುಗ ಮುಂಬೈ ಭೂಗತ ಲೋಕದ ಅಧಿಪತಿಯಾದ ಕಥೆಯನ್ನು ಹೇಳಿತ್ತು. 70ರ ದಶಕದಲ್ಲಿ ಮುಂಬೈ ಅಧಿಪತಿಯಾಗುವ ರಾಕಿಯ ತಾಕತ್ತನ್ನು ಸಲಾಮ್ ರಾಕಿ ಭಾಯ್ ಹಾಡಿನ ಪದಗಳು ವರ್ಣನೆ ಮಾಡಿದ್ದವು. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆದ ಮರುದಿನವೇ ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆ ಆಯ್ತು. ಮತ್ತೊಂದು ಟ್ರೇಲರ್ ರಿವೀಲ್ ಬಿಡುಗಡೆಯಾದ ಕಥೆಯ ಮತ್ತೊಂದು ಶೇಡ್ ಇದರಲ್ಲಿ ತೋರಿಸಲಾಗಿದೆ.

ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಸಾಮಥ್ರ್ಯವುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಕಲಾವಿದರ ಪಾತ್ರವನ್ನು ಇಲ್ಲಿ ಪರಿಚಯಿಸಲಾಗಿತ್ತು.

ಹೀಗೆ ಚಿತ್ರ ದಿನದಿಂದ ದಿನಕ್ಕೆ ಹೊಸ ಹೊಸ ಕುತೂಹಲವನ್ನು ಅಭಿಮಾನಿಗಳಲ್ಲಿ ಹುಟ್ಟಿಸುತ್ತಿದ್ದು, ಭಾನುವಾರ ಸೆಂಟಿಮೆಂಟ್ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ. ಯಶ್ ‘ರಾಕಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀನಿಧಿ ರಾಕಿಂಗ್ ಸ್ಟಾರ್ ಗೆ ಜೊತೆಯಾಗಿದ್ದಾರೆ. ರವಿಶಂಕರ್ ಸೋದರ ಅಯ್ಯಪ್ಪ ಖಳನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಅನಂತ್ ನಾಗ್ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರತಂಡ ಹೊಂದಿದೆ. ವಿಶೇಷ ಪಾತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ಬಾಲಿವುಡ್ ಗೋಲ್ಡ್ ಚೆಲುವೆ ಮೌನಿ ರಾಯ್ ನಟಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button