ಬೆಂಗಳೂರು: ಮಂಜುನಾಥ್ ನಿರ್ಮಾಣದ ಕದ್ದುಮುಚ್ಚಿ ಚಿತ್ರ ತೆರೆ ಕಂಡಿದೆ. ಹಂಸಲೇಖಾ ಅವರ ಸಂಗೀತದಲ್ಲಿ ಮೂಡಿ ಬಂದಿರೋ ಹಾಡುಗಳೂ ಸೇರಿದಂತೆ ನಾನಾ ಥರದಲ್ಲಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ಈ ಸಿನಿಮಾ ಯುವ ತಲ್ಲಣಗಳ ಕಥೆಯ ಸುಳಿವನ್ನು ಬಿಟ್ಟುಕೊಟ್ಟಿತ್ತು. ಇದೀಗ ಕದ್ದುಮುಚ್ಚಿ ಒಳಗಿರೋ ಸಿಹಿಯಾದ ಹೂರಣ ಅನಾವರಣಗೊಂಡಿದೆ.
ಒಂದು ಮಾಮೂಲಿ ಜಾಡಿನ ಕಥೆಯನ್ನೂ ಕೂಡಾ ವಿಶಿಷ್ಟವಾದ ಆಲೋಚನೆ ಮತ್ತು ಭಿನ್ನವಾದ ನಿರೂಪಣಾ ಶೈಲಿ ಹೊಸದಾಗಿಸಿ ಬಿಡುತ್ತದೆ. ಅದೇ ರೀತಿ ಪ್ರೀತಿ, ಪ್ರೇಮ ಮತ್ತು ಬದುಕಿನ ಕಥೆ ಹೊಂದಿರೋ ಈ ಚಿತ್ರವೂ ಕೂಡಾ ರೂಪುಗೊಂಡಿದೆ. ಇಡೀ ಸಿನಿಮಾ ಎಲ್ಲರಿಗೂ ಆಪ್ತವಾಗೋದೇ ಈ ಕಾರಣದಿಂದ.
Advertisement
Advertisement
ನಾಯಕ ಅಗರ್ಭ ಶ್ರೀಮಂತಿಕೆಯ ಹಿನ್ನೆಲೆ ಹೊಂದಿರುವಾತ. ಆದರೆ ಸಹಜವಾದ ಪ್ರೀತಿ ಸಿಕ್ಕದೆ ಎಲ್ಲವೂ ಢಾಂಬಿಕ ಎಂಬ ಭಾವನೆ ರೂಢಿಸಿಕೊಳ್ಳೋ ಆತ ದಿಕ್ಕುದೆಸೆ ಇಲ್ಲದಂತೆ ಹೊರಟು ಬಿಡುತ್ತಾನೆ. ಆದರೆ ಬದುಕಿನ ವೈಚಿತ್ರ್ಯಗಳೇ ನಾಯಕನಿಗೆ ಅಪ್ಪಟ ಮಲೆನಾಡು ಸೀಮೆಯ ದಿಕ್ಕು ತೋರುತ್ತದೆ. ಪ್ರೀತಿಯ ತತ್ವಾರದಿಂದ ಬೆಂಗಾಡಿನಂತಾಗಿದ್ದ ಆತನ ಮುಂದೆ ಮಲೆನಾಡ ಚೆಲುವೆಯೊಬ್ಬಳ ಆಗಮನವಾಗುತ್ತದೆ. ಯಥಾ ಪ್ರಕಾರ ಸುತ್ತಾಟ, ರೊಮ್ಯಾನ್ಸುಗಳ ನಡುವೆ ಇನ್ನೇನು ಗಟ್ಟಿ ಮೇಳದತ್ತ ಈ ಜೋಡಿ ಹೊರಟಿದೆ ಅಂದುಕೊಳ್ಳುವ ಹೊತ್ತಿಗೆಲ್ಲ ಭಯಾನಕ ಟ್ವಿಸ್ಟು ಎದುರಾಗುತ್ತೆ.
Advertisement
ಅದರ ಫಲವಾಗಿ ತಾನು ಅಪಾರವಾಗಿ ಪ್ರೀತಿಸಿದ ಹುಡುಗಿಯ ಮದುವೆಗೇ ತಾನೇ ಓಡಾಡೋ ದುಃಸ್ಥಿತಿ ನಾಯಕನಿಗೆ ಬಂದೊದಗುತ್ತೆ. ಹಾಗಾದರೆ ಈ ಪ್ರೀತಿಯಲ್ಲಿ ಬಿರುಕು ಮೂಡಲು ಕಾರಣವೇನು, ಈ ಜೋಡಿ ಮತ್ತೆ ಒಂದಾಗುತ್ತಾ ಅನ್ನೋದನ್ನ ಚಿತ್ರ ಮಂದಿರಗಳಲ್ಲಿಯೇ ನೋಡಿದರೆ ಚೆನ್ನ. ಹಾಗಂತ ಇಷ್ಟಕ್ಕೆ ಮಾತ್ರವೇ ಸಿನಿಮಾ ಸೀಮಿತವಾಗಿಲ್ಲ. ಅದರ ಹರವು ವಿಸ್ತಾರವಾಗಿದೆ. ಹಿರಿ, ಮರಿ ಕಲಾವಿದರೊಂದಿಗೆ ಇಡೀ ಚಿತ್ರವನ್ನ ಮಜವಾಗಿಯೇ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.
Advertisement
ಹಂಸಲೇಖ ಅವರ ಮಾಂತ್ರಿಕ ಸಂಗೀತದ ಶಕ್ತಿಯೊಂದಿಗೆ ಕೆಲ ಕೊರತೆಗಳ ನಡುವೆಯೂ ಕದ್ದುಮುಚ್ಚಿ ಚಿತ್ರ ಇಷ್ಟವಾಗುವಂತಿದೆ.
ರೇಟಿಂಗ್: 3.5/5
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv