ಬೆಂಗಳೂರು: ಗೋಕಾಕ್ ಚಳುವಳಿ ಮತ್ತು ಕನ್ನಡಪ್ರೇಮದ ಕಥಾನಕವೆಂಬ ಸುಳಿವಿನ ಮೂಲಕವೇ ಕನ್ನಡಿಗರ ನಡುವೆ ಕುತೂಹಲದ ಸೆಳೆಮಿಂಚು ಹರಿಸಿದ್ದ ಚಿತ್ರ ಗೀತಾ. ಗೋಲ್ಡನ್ ಸ್ಟಾರ್ ಗಣೇಶ್ ಟ್ರೇಲರ್ ಮೂಲಕ ಕನ್ನಡ ಪರ ಹೋರಾಟಗಾರನಾಗಿ ಅಬ್ಬರಿಸಿದ್ದ ರೀತಿ ಮತ್ತಷ್ಟು ಜನರನ್ನು ಆಕರ್ಷಿಸಿತ್ತು. ಅಷ್ಟಕ್ಕೂ ಗೋಕಾಕ್‍ನಂಥಾ ಐತಿಹಾಸಿಕ ಚಳುವಳಿಯನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿ, ಪ್ರೇಮಕಥಾನಕದೊಂದಿಗೆ ಹೇಳೋದೇ ಮಹಾ ಸವಾಲು. ನಿರ್ದೇಶಕ ವಿಜಯ್ ಕಿರಣ್ ಮೊದಲ ಹೆಜ್ಜೆಯಲ್ಲಿಯೇ ಅದನ್ನು ಸ್ವೀಕರಿಸಿದ್ದಾರೆಂದರೆ, ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡಪರ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆಂದರೆ ಗೀತಾ ಬಗ್ಗೆ ಬೆರಗು ಮೂಡದಿರಲು ಸಾಧ್ಯವೇ? ಈ ಕಾರಣದಿಂದಲೇ ದಶ ದಿಕ್ಕುಗಳಿಂದಲೂ ಕುತೂಹಲಕ್ಕೆ ಕಾರಣವಾಗಿದ್ದ ಗೀತಾ ಇದೀಗ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.
Advertisement
ಗೋಲ್ಡನ್ ಸ್ಟಾರ್ ಗಣೇಶ್ ಇಲ್ಲಿ ಎರಡು ಪಾತ್ರಗಳನ್ನು ಸಂಭಾಳಿಸಿದ್ದಾರೆ. ಅವೆರಡರಲ್ಲಿಯೂ ಕನ್ನಡಿಗರೆಲ್ಲರ ಮನ ಮುಟ್ಟುವಂತೆ ನಟಿಸಿದ್ದಾರೆ. ಆಕಾಶ್ ಮತ್ತು ಶಂಕರನಾಗಿ ಅವರು ನಟಿಸಿದ್ದಾರೆ. ಈ ಆಕಾಶ್ ತಂದೆ ತಾಯಿಯರಿದ್ದರೂ ತೊಳಲಾಟವನ್ನೇ ಹೊದ್ದು ಬದುಕುವ ಹುಡುಗ. ಯಾಕೆಂದರೆ ತಂದೆ ತಾಯಿ ಬೇರೆಯಾಗಿ ಎರಡು ಧ್ರುವಗಳಂತಾಗಿರುತ್ತಾರೆ. ಇಬ್ಬರನ್ನೂ ಬೇರೆ ಬೇರೆಯಾಗಿಯೇ ಕಾಣುತ್ತಾ, ಅಪೂರ್ಣ ಪ್ರೀತಿಯ ಕೊರತೆಯನ್ನು ಮನಸೊಳಗೆ ಸಾಕಿಕೊಂಡೆ ಇರೋ ಆತನ ಪಾಲಿಗೆ ಅಪ್ಪ ಅಮ್ಮ ಹೀಗಾಗಲು ಕಾರಣವೇನೆಂಬುದು ಸದಾ ಕಾಡುವ ಪ್ರಶ್ನೆ. ಕಡೆಗೂ ಅದಕ್ಕೆ ಉತ್ತರ ಹುಡುಕಿದಾಗ ಕನ್ನಡಪ್ರೇಮಿ ಶಂಕರನ ಕಥೆ ತೆರೆದುಕೊಳ್ಳುತ್ತೆ. ಇಡೀ ಕಥೆಗೊಂದು ಹೊಸಾ ಆವೇಗ ಬರುವುದು ಆ ಕ್ಷಣದಿಂದಲೇ.
Advertisement
Advertisement
ಅಲ್ಲಿಂದಾಚೆಗೆ ಗೋಕಾಕ್ ಚಳುವಳಿಯ ಹಿನ್ನೆಲೆಯ ಅಪ್ಪಟ ಕನ್ನಡ ಪ್ರೇಮ ಹೊದ್ದುಕೊಂಡ ಕಥೆ ಬಿಚ್ಚಿಕೊಳ್ಳುತ್ತದೆ. ಅದರ ಜೊತೆ ಜೊತೆಗೇ ಎಂಥವರ ಎದೆಗಾದರೂ ನೇರವಾಗಿ ಸೋಕುವಂಥಾ ಪ್ರೇಮ ಕಥೆಯೂ ಬಿಚ್ಚಿಕೊಳ್ಳುತ್ತದೆ. ಅಷ್ಟಕ್ಕೂ ಈ ಆಕಾಶ್ ಯಾರು? ಆತನಿಗೂ ಶಂಕರನ ಕಥೆಗೂ ಇರೋ ಕನೆಕ್ಷನ್ನುಗಳೇನೆಂಬುದನ್ನು ಕುತೂಹಲ ಕಾಯ್ದಿಟ್ಟುಕೊಂಡೇ ಅನಾವರಣಗೊಳಿಸುವಲ್ಲಿ ನಿರ್ದೇಶಕ ವಿಜಯ್ ನಾಗೇಂದ್ರರ ಜಾಣ್ಮೆಯ ಅನಾವರಣವಾಗುತ್ತದೆ. ಗೋಕಾಕ್‍ನಂಥಾ ಗಂಭೀರ ಚಳುವಳಿ ಮತ್ತು ಪ್ರೀತಿಯನ್ನು ಹದಮುದವಾಗಿ ಬೆರೆಸುತ್ತಲೇ ಮನೋರಂಜನೆಗೂ ಕೂಡಾ ಕೊರತೆಯಾಗದಂತೆ ಮೂಡಿ ಬಂದಿರೋದು ಈ ಚಿತ್ರದ ನಿಜವಾದ ಹೆಚ್ಚುಗಾರಿಕೆ.
Advertisement
ಇಲ್ಲಿ ಗೋಕಾಕ್ ಚಳುವಳಿಯನ್ನು ಮರು ರೂಪಿಸಿದ ರೀತಿಯೇ ಕನ್ನಡದ ಮನಸುಗಳನ್ನೆಲ್ಲ ಥ್ರಿಲ್ ಆಗಿಸುವಂತಿದೆ. ಕಥೆ ಬೇರೆ ಬೇರೆ ದಿಕ್ಕುಗಳಲ್ಲಿ ಹರಡಿಕೊಂಡಿದ್ದರೂ ಯಾವುದೂ ಕೃತಕ ಅನ್ನಿಸದಂತೆ, ಬೇರೆ ಬೇರೆಯೆಂಬ ಭಾವ ಮೂಡಿಸದಂತೆ ಕೂಡಿಸುವಲ್ಲಿಯೂ ಕೂಡಾ ನಿರ್ದೇಶನದ ಕಸುಬುದಾರಿಕೆ ಜಾಹೀರಾಗುತ್ತದೆ. ಇನ್ನುಳಿದಂತೆ ಗಣೇಶ್ ಇಲ್ಲಿ ಬೇರೆಯದ್ದೇ ಲುಕ್ಕಿನಲ್ಲಿ, ಹದಗೊಂಡ ನಟನೆಯ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡುತ್ತಾರೆ. ಮೂವರು ನಾಯಕಿಯರು ಮತ್ತು ಇತರೇ ಪಾತ್ರವರ್ಗವೂ ಕೂಡಾ ಅದಕ್ಕೆ ತಕ್ಕುದಾಗಿಯೇ ಸಾಥ್ ಕೊಟ್ಟಿದ್ದಾರೆ. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಮತ್ತು ಹಾಡುಗಳೆಲ್ಲವೂ ಒಂದಕ್ಕೊಂದು ಪೂರಕವಾಗಿವೆ.
ಈ ಚಿತ್ರದಲ್ಲಿ ಪ್ರಧಾನ ಕುತೂಹಲವಿದ್ದದ್ದೇ ಗೋಕಾಕ್ ಚಳುವಳಿಯ ಮರುಸೃಷ್ಟಿಯ ಬಗ್ಗೆ. ಅದನ್ನು ನಿರ್ಮಾಪಕರಾದ ಸೈಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ಪರಿಣಾಮಕಾರಿಯಾಗಿ, ರಿಚ್ ಆಗಿ ಮೂಡಿ ಬರುವಂತೆ ಮಾಡಿದ್ದಾರೆ. ನಿರ್ದೇಶಕ ವಿಜಯ್ ನಾಗೇಂದ್ರ ಮೊದಲ ಹೆಜ್ಜೆಯಲ್ಲಿಯೇ ಸಂಕೀರ್ಣವಾದ ಕಥೆಯನ್ನು ಆರಿಸಿಕೊಂಡಿದ್ದರೂ ಕೂಡಾ ಎಲ್ಲಿಯೂ ಸಿಕ್ಕಾಗದಂತೆ ಕಲಾತ್ಮಕ ಕೈಚಳಕ ತೋರಿಸಿದ್ದಾರೆ. ಈ ಕಾರಣದಿಂದಲೇ ವಿರಳ ಕಥೆಯ ಮೂಲಕ ಗೀತಾ ಕನ್ನಡತನದ ಗೋಲ್ಡನ್ ಕ್ಷಣಗಳನ್ನು ಸಮರ್ಥವಾಗಿಯೇ ಪ್ರೇಕ್ಷಕರ ಮುಂದಿಟ್ಟಿದ್ದಾಳೆ!
ರೇಟಿಂಗ್: 3.5/4