ಬೆಂಗಳೂರು: ಲವ್ ಗುರು ಅನ್ನೋ ಸಿನಿಮಾದ ಮೂಲಕವೇ ನಿರ್ದೇಶಕರಾದವರು ಪ್ರಶಾಂತ್ ರಾಜ್. ಅದಾದ ನಂತರವೂ ಪ್ರೇಮ ಪ್ರಧಾನವಾದ ಒಂದಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರಶಾಂತ್ ರಾಜ್ ಈಗ ಪ್ರೀತಿಯ ಜೊತೆಗೆ ಒಂದಿಷ್ಟು ಕಮರ್ಷಿಯಲ್ ಎಲಿಮೆಂಟುಗಳನ್ನೂ ಒಳಗೊಂಡ ದಳಪತಿ ಅನ್ನೋ ಸಿನಿಮಾವನ್ನು ತೆರೆಗೆ ತಂದಿದ್ದಾರೆ.
ಈ ಸಿನಿಮಾದ ಮೊದಲ ಭಾಗವನ್ನು ಹೀರೋ ಮತ್ತು ಹೀರೋಯಿನ್ ಮಧ್ಯೆಯ ಲವ್ವಿಗೇ ಮೀಸಲಿಡಲಾಗಿದೆ. ಕ್ಯೂಟ್ ಎನಿಸೋ ಹೀರೋಯಿನ್ ಮೇಲೆ ಹುಡುಗನಿಗೆ ಭಲೇ ಪ್ರೀತಿ. ಪ್ರೀತಿಸುವ ಬಹುತೇಕರು ಮಾಡುವಂತೆ ಇಲ್ಲೂ ಕೂಡಾ ಹೀರೋ ಒಂದಿಷ್ಟು ಸುಳ್ಳು ಹೇಳಿ ಹುಡುಗಿಯನ್ನು ಪಟಾಯಿಸಿಕೊಂಡಿರುತ್ತಾನೆ. ದಿನ ಕಳೆದಂತೆ ಹುಡುಗಿಗೆ ಈತನ ಅಸಲೀಯತ್ತು ಗೊತ್ತಾಗಿಬಿಡುತ್ತದೆ. ಸುಳ್ಳು ಹೇಳಿದರೇನು ಹುಡುಗನಿಗೆ ಒಳ್ಳೇತನವಿದ್ದರೆ ಸಾಕು ಅಂತಾ ಮತ್ತೆ ಆಕೆ ಕೋಪವನ್ನು ತಣ್ಣಗಾಗಿಸಿಕೊಳ್ಳುವ ಹೊತ್ತಿಗೆ ಯಾರೂ ಊಹಿಸಲಾರದ ಟ್ವಿಸ್ಟು ಘಟಿಸುತ್ತದೆ. ಅದೇನು ಅಂತಾ ತಿಳಿದುಕೊಳ್ಳುಬೇಕಾದರೆ ಸಿನಿಮಾವನ್ನೊಮ್ಮೆ ನೋಡಬೇಕು.
ತೀರಾ ಸಾಧಾರಣ ಅನ್ನಿಸುವ ದೃಷ್ಯವನ್ನೂ ವಿಶೇಷವಾಗಿ ಕಟ್ಟಿಕೊಡುವುದು ನಿರ್ದೇಶಕ ಪ್ರಶಾಂತ್ ರಾಜ್ ಪ್ಲಸ್ ಪಾಯಿಂಟು. ಅಲ್ಲಲ್ಲಿ ಹಳಿ ತಪ್ಪಿದಂತೆ ಅನಿಸುವ ಚಿತ್ರಕತೆ ಮತ್ತೆ ಮತ್ತೆ ಬಂದು ಟ್ರ್ಯಾಕಿಗೆ ಬಂದು ಕೂರುತ್ತದೆ. ಪ್ರಶಾಂತ್ ರಾಜ್ ಅವರ ನಿರ್ದೇಶನಕ್ಕೆ ಚರಣ್ ರಾಜ್ ಸಂಗೀತ ಮತ್ತು ಸಂತೋಷ್ ರೈ ಪತಾಜೆ ಕ್ಯಾಮೆರಾ ಕರಾರುವಕ್ಕಾದ ಸಾಥ್ ನೀಡಿವೆ. ಲವ್ಲಿ ಸ್ಟಾರ್ ಪ್ರೇಮ್ ಅವರನ್ನು ಜನ ಮತ್ತೆ ಮತ್ತೆ ಮೋಹಿಸಲು ಇದಕ್ಕಿಂತಾ ಬೇರೆ ಕಾರಣವಿಲ್ಲ ಎನ್ನುವಷ್ಟು ತೆರೆ ಮೇಲೆ ಮುದ್ದಾಗ ಕಾಣಿಸಿದ್ದಾರೆ. ಕೃತಿ ಕರಬಂಧ ಜೋಡಿಯಂತೂ ಪ್ರೇಮ್ ಗೆ ಹೇಳಿ ಮಾಡಿಸಿದಂತಿದೆ.
https://youtu.be/lRiG0g9YFW8