ಬೆಂಗಳೂರು: ಸಮಸ್ಯೆಗಳು ಏನೇ ಇದ್ದರೂ ನಗುಮುಖದಿಂದಲೇ ಎದುರುಗೊಂಡರೆ ಎಲ್ಲವೂ ಸುಖಮಯವಾಗಿರುತ್ತದೆ ಅಂತೊಂದು ಮಾತಿದೆ. ಅದರ ಸಾರವನ್ನೇ ಆತ್ಮವಾಗಿಸಿಕೊಂಡು ಭರಪೂರ ನಗುವಿನ ಒಡ್ಡೋಲಗದಲ್ಲಿಯೇ ಗಂಭೀರ ವಿಚಾರವನ್ನ ಹೇಳೋ ವಿಭಿನ್ನ ಬಗೆಯ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ. ಇಲ್ಲಿ ಎಲ್ಲರ ಬದುಕಿಗೂ ಹತ್ತಿರಾದ ಗಂಭೀರ ವಿಚಾರಗಳಿವೆ. ಭಾವನಾತ್ಮಕ ಸನ್ನಿವೇಶಗಳೂ ಇವೆ. ಪ್ರೀತಿ, ಪ್ರೇಮ ಸೇರಿದಂತೆ ಎಲ್ಲವೂ ಇವೆ. ಆದರೆ ಯಾವುದೂ ಗೋಜಲಾಗದಂತೆ ನೋಡುಗರನ್ನೆಲ್ಲ ಜಂಜಾಟ ಮರೆತು ನಗುವಂತೆ ಮಾಡೋ ಸಿನಿಮಾ ಕೆಮಿಸ್ಟ್ರಿ ಆಫ್ ಕರಿಯಪ್ಪ.
ಪೋಸ್ಟರ್‍ಗಳ ಮೂಲಕವೇ ಇದು ಭಿನ್ನ ಜಾಡಿನ ಚಿತ್ರ ಅನ್ನೋ ಸುಳಿವು ಸಿಕ್ಕಿತ್ತು. ಟ್ರೈಲರ್ ಹೊರ ಬಂದಾಗ ಈ ಸಿನಿಮಾ ಪೋಲಿತನ ಹೊದ್ದ ಸಂಭಾಷಣೆಗಳಿಂದಲೇ ಶೃಂಗರಿಸಲ್ಪಟ್ಟಿದೆಯಾ ಎಂಬ ಗುಮಾನಿಯೂ ಕಾಡಿತ್ತು. ಆದರೆ ಈ ಸಿನಿಮಾ ನೋಡಿದ ಪ್ರತಿಯೊಬ್ಬರ ಮುಖದಲ್ಲಿಯೂ ವಿಶಿಷ್ಟವಾದ ಚಿತ್ರವೊಂದನ್ನು ನೋಡಿದ ತೃಪ್ತಿಯ ಮಂದಹಾಸ ಸ್ಪಷ್ಟವಾಗಿಯೇ ಮೂಡಿಕೊಳ್ಳುತ್ತದೆ. ಇದುವೇ ಡಿಎಸ್ ಮಂಜುನಾಥ್ ನಿರ್ಮಾಣ ಮಾಡಿರೋ ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಗೆಲುವಿನ ಮೊದಲ ಹೆಜ್ಜೆ!
Advertisement
Advertisement
ಈ ಸಿನಿಮಾ ಕಥೆ ತೀರಾ ಸಂಕೀರ್ಣವಾದದ್ದೇನೂ ಅಲ್ಲ. ಆದರೆ ಅದನ್ನು ಹೇಳಿರೋ ರೀತಿ, ದೃಶ್ಯ ಕಟ್ಟಿರೋ ಜಾಣ್ಮೆಯೇ ಎಲ್ಲರಿಗೂ ಆಪ್ತವಾಗಿಸುತ್ತದೆ. ಮಧ್ಯಮ ವರ್ಗದ ಅಪ್ಪ ಅಮ್ಮ ಮತ್ತು ಅವರಿಗೊಬ್ಬ ಮಗ ಉತ್ತರ ಕುಮಾರ. ಎದೆಮಟ್ಟ ಬೆಳೆದ ಮಗನಿಗೆ ಊರು ತುಂಬಾ ನೂರಾರು ಹುಡುಗೀರನ್ನ ನೋಡಿದರೂ ಸಂಬಂಧ ಕುದುರಿಕೊಳ್ಳೋದಿಲ್ಲ. ಇದರಿಂದಾಗಿ ಈ ಪುಟ್ಟ ಕುಟುಂಬದ ಯಜಮಾನ ಕರಿಯಪ್ಪನಿಗೆ ಮಹಾ ತಲೆನೋವು ಶುರುವಾಗಿ ಬಿಡುತ್ತದೆ. ಒಂದು ಕಡೆ ಮಗನ ವಯಸ್ಸು ಮದುವೆಯ ಗಡಿ ದಾಟುತ್ತಿದೆ. ಇನ್ನೊಂದು ಕಡೆ ಯಾವ ಸಂಬಂಧವೂ ಕುದುರುತ್ತಿಲ್ಲ ಅನ್ನೋ ಸಂಕಟದಲ್ಲಿ ಕರಿಯಪ್ಪ ಇರುವಾಗಲೇ ಪುತ್ರ ಉತ್ತರ ಕುಮಾರ ಚೆಂದದ ಹುಡುಗಿಯೊಬ್ಬಳಿಗೆ ಕಾಳು ಹಾಕಲಾರಂಭಿಸಿರುತ್ತಾನೆ.
Advertisement
ಹೀಗೆ ಪ್ರೀತಿಸಿ ಮದುವೆಯಾಗೋ ಉತ್ತರ ಕುಮಾರನಿಗೆ ಮೊದಲ ರಾತ್ರಿಯ ದಿನವೇ ಮರ್ಮಾಘಾತ ಮಾಡೋ ಅಂಶ ಯಾವುದು, ಒಂದು ಏಜಿನಲ್ಲಿ ಹೆಣ್ಣುಮಕ್ಕಳು ಆತುರದಿಂದ ವರ್ತಿಸೋದರಿಂದಾಗಿ ಏನೇನೆಲ್ಲ ಸಂಭವಿಸುತ್ತದೆ ಅನ್ನೋ ಕುತೂಹಲ ತಣಿಸಿಕೊಳ್ಳಲು ನೇರವಾಗಿ ಚಿತ್ರ ಮಂದಿರಕ್ಕೆ ತೆರಳಿ. ಅಲ್ಲಿ ಕರಿಯಪ್ಪನ ಕೆಮಿಸ್ಟ್ರಿ ನಿಮ್ಮನ್ನು ಭರಪೂರವಾಗಿ ನಗಿಸುತ್ತಲೇ ಭಾವುಕರನ್ನಾಗಿಸುತ್ತದೆ. ಮತ್ತೆ ನಗುವಿನ ಕಡಲಿಗೆ ತಳ್ಳಿ ಖುಷಿಗೊಳಿಸುತ್ತದೆ. ಈ ಸಿನಿಮಾದ ಅಸಲೀ ಯಶಸ್ಸಿನ ಗುಟ್ಟಿರೋದೇ ಅಲ್ಲಿ.
Advertisement
ನಿರ್ದೇಶಕ ಕುಮಾರ್ ಪ್ರತೀ ಹಂತದಲ್ಲಿಯೂ ಸೂಕ್ಷ್ಮವಾಗಿಯೇ ಕಾರ್ಯ ನಿರ್ವಹಿಸಿದ್ದಾರೆ. ಅದರಿಂದಲೇ ಅವರು ಗೆದ್ದಿದ್ದಾರೆ. ನಾಯಕ ಚಂದನ್ ಮತ್ತು ನಾಯಕಿ ಸಂಜನಾ ಆನಂದ್ ಕೂಡಾ ಚೆಂದಗೆ ನಟಿಸಿದ್ದಾರೆ. ಕರಿಯಪ್ಪನ ಪಾತ್ರಕ್ಕೆ ಜೀವ ತುಂಬಿರೋ ತಬಲಾ ನಾಣಿ ಇಲ್ಲಿ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲ ಪಾತ್ರವರ್ಗವೂ ಆಪ್ತವಾಗಿದೆ. ಬದುಕಿನ ಕಥೆಯನ್ನು ಹಾಸ್ಯದ ಮೂಲಕವೇ ಹೇಳೋ ಕೆಮಿಸ್ಟ್ರಿ ಆಫ್ ಕರಿಯಪ್ಪ ಎಲ್ಲರಿಗೂ ಇಷ್ಟವಾಗೋ ಚಿತ್ರ ಅನ್ನೋದರಲ್ಲಿ ಸಂದೇಹವಿಲ್ಲ.
ರೇಟಿಂಗ್- 4/5
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv