ಧಾರವಾಡ: ಕನ್ನಡ ಮಾಧ್ಯಮದಲ್ಲಿ ಎಸ್‍ಎಸ್‍ಎಲ್‍ಸಿ ವರೆಗೂ ಶಿಕ್ಷಣ ಪಡೆದು ನಂತರ ಎಂಬಿಬಿಎಸ್ ಪದವಿಯಲ್ಲಿ 15 ಚಿನ್ನದ ಪದಕ ಪಡೆಯುವ ಮೂಲಕ ಧಾರವಾಡ ಯುವತಿಯೊಬ್ಬರು ಮಾದರಿಯಾಗಿದ್ದಾರೆ.
ಹೌದು, ಧಾರವಾಡದ ಎಸ್‍ಡಿಎಂ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಎಂಬಿಬಿಎಸ್ ವಿದ್ಯಾರ್ಥಿನಿ ಅರ್ಪಿತಾ ಜೆ ಎಸ್ ಅವರೇ ಎಂಬಿಬಿಎಸ್ ಪದವಿಯಲ್ಲಿ 15 ಚಿನ್ನದ ಪದಕ ಪಡೆದು ಚಿನ್ನದ ಬೆಡಗಿಯಾಗಿ ಹೊರ ಹೊಮ್ಮಿದ್ದಾರೆ.
ಇಂದು ನಗರದ ಹೆಗಡೆ ಕಲಾಕ್ಷೇತ್ರದಲ್ಲಿ ನಡೆದ ಎಸ್‍ಡಿಎಂ ವೈದ್ಯಕೀಯ ಮಹಾವಿದ್ಯಾಲಯದ 9ನೇ ಘಟಿಕೋತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವಿರೇಂದ್ರ ಹೆಗ್ಗಡೆ ಅವರು ಅರ್ಪಿತಾಗೆ ಚಿನ್ನದ ಪದಕ ನೀಡಿ ಗೌರವಿಸಿದರು. ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನವರಾದ ಅರ್ಪಿತಾ ಅವರು ಸರ್ಕಾರಿ ಶಾಲೆ ಶಿಕ್ಷಕರಾದ ಜಯಶೀಲರೆಡ್ಡಿ ಹಾಗೂ ಶಾಂತಕುಮಾರಿ ದಂಪತಿಗಳ ಪುತ್ರಿ. ಎಸ್‍ಎಸ್‍ಎಲ್‍ಸಿ ವರೆಗೂ ಕನ್ನಡದ ಶಾಲೆಯಲ್ಲೇ ವಿದ್ಯಾಭ್ಯಾಸ ನಡೆಸಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಚಿನ್ನದ ಪದಕ ವಿತರಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರು, ಮಾತನಾಡಿ ಅರ್ಪಿತಾ ಅವರ ಸಾಧನೆಗೆ ಶುಭಾಶಯ ಕೋರಿದರು. ಅಲ್ಲದೇ ಅರ್ಪಿತಾ 15 ಚಿನ್ನದ ಪದಕ ಪಡೆದಿದ್ದು, ಅವರಿಗೆ ಮದುವೆ ಸಮಯದಲ್ಲಿ ಚಿನ್ನ ಖರೀದಿ ಮಾಡುವ ಅವಶ್ಯಕತೆವಿಲ್ಲ ಎಂದು ಹಾಸ್ಯ ಚಟಾಕಿ ಹರಿಸಿದರು.
ಕಾರ್ಯಕ್ರಮದ ವೇಳೆ ಚಿನ್ನದ ಪದಕ ಸ್ವೀಕರಿಸಿ ಮಾತನಾಡಿದ ಅರ್ಪಿತಾ ಅವರು, ತಮ್ಮ ಸಾಧನೆಗೆ ತಂದೆ ತಾಯಿಯ ಆಶೀರ್ವಾದ ಕಾರಣ ಎಂದು ತಿಳಿಸಿದ್ದಾರೆ. ಮಗಳ ಸಾಧನೆ ಕಂಡ ಅರ್ಪಿತಾ ತಂದೆ ಜಯಶೀಲರೆಡ್ಡಿ ಅವರು ನಾನು ಮಾಡಿದ ಆಸ್ತಿಯೇ ಮಕ್ಕಳು ಎಂದು ಮಗಳ ಸಾಧನೆಯನ್ನ ಹೊಗಳಿದರು.