ಮೈ ಡಿಯರ್ ನರ್ತನಾ,
ನೆನಪಿದೆಯಾ ನಿನಗೆ.. ಅದೆಷ್ಟು ಡಿಫರೆಂಟ್ ಆಗಿ ಪ್ರಪೋಸ್ ಮಾಡಿದ್ದೆ. ಈ ಥರಾನೂ ಪ್ರಪೋಸ್ ಮಾಡ್ಬಹುದು ಅಂತಾ ನನಗೆ ಗೊತ್ತಾಗಿದ್ದೇ ನಿನ್ನಿಂದ..!
ಆಗ ನೀನಿನ್ನೂ ನಮ್ಮ ಏರಿಯಾಗೇ ಹೊಸಬಳು. ಆ ಮನೆಗೆ ಬಂದು ಇನ್ನೂ ಹದಿನೈದು ದಿನ ಆಗಿತ್ತೇನೋ. ಯಾರನ್ನೂ, ಯಾವುದನ್ನೂ ಗಮನಿಸದ ನಾನು, ನನಗೇ ಗೊತ್ತಾಗದ ಹಾಗೆ ಟೆರೇಸ್ ಮೇಲೆ ಬರ್ತಿದ್ದ ನಿನ್ನನ್ನ ಕದ್ದು ಮುಚ್ಚಿ ನೋಡೋಕೆ ಶುರು ಮಾಡಿದ್ದೆ.
ನನ್ನ ಈ ಕಳ್ಳಾಟ ಆರಂಭವಾಗಿ ತಿಂಗಳುಗಳೇ ಕಳೆದಿದ್ವು. ಒಂದಿನ ನೀನು ಮೈಮರೆತು ಟೆರೇಸ್ ಮೇಲೆ ಗಾಳಿಪಟ ಹಾರಿಸ್ತಿದ್ದೆ. ನಾನೂ ಅಷ್ಟೇ ಮೈಮರೆತು ನಿನ್ನ ನೋಡ್ತಿದ್ದೆ. ನೋಡ್ತಾ ನೋಡ್ತಾ ಹಾಗೆಯೇ ಮುಂದೆ ಬಂದ್ಬಿಟ್ಟೆ. ಗಾಳಿಪಟ ಮೇಲೆ ಮೇಲೇರುತ್ತಾ ಆಗಸವ ಚುಂಬಿಸಲು ಧಾವಂತದಲ್ಲಿತ್ತೇನೋ.. ಅಷ್ಟರಲ್ಲಾಗಲೇ ನನ್ನ ಹೃದಯ ಪಟದ ಸೂತ್ರ ನಿನ್ನ ಕೈ ಸೇರಿಬಿಟ್ಟಿತ್ತು..! ನನಗೆ ಇಹದ ಪರಿವೆಯೇ ಇರಲಿಲ್ಲ. ಆದರೆ, ನಾನು ನಿನ್ನನ್ನೇ ದಿಟ್ಟಿಸ್ತಿರೋದು ಗೊತ್ತಾಗಿ ದುರುಗುಟ್ಟಿ ನೋಡ್ದೆ ನೀನು. ನನ್ನ ತುಟಿಯಂಚಲ್ಲಿ ನಿನ್ನ ನೋಡಿದ ಸಂಭ್ರಮದ ನಗು. ಆದ್ರೆ ನೋಡಿದ್ರೂ ನೋಡದವಳ ಹಾಗೆ, ಬಟ್ಟೆ ಸರಿ ಮಾಡ್ಕೊಳ್ತಾ ಅಲ್ಲೇ ಹರಡಿದ್ದ ಮಲ್ಲಿಗೆಯ ಗಿಡದ ಮರೆಗೆ ಸರಿದೆ ನೀನು. ಇದನ್ನೂ ಓದಿ: ಮುಗುಳ್ನಗೆಯ ಗಿಫ್ಟ್ ಹಿಡ್ಕೊಂಡು ಮತ್ತೆ ಮತ್ತೆ ಸಿಗ್ತಾಳೆ ಆ ಅಪರಿಚಿತೆ..!
ಸ್ವಲ್ಪ ಹೊತ್ತಾದ ಮೇಲೆ, ʻನರ್ತನಾ ಸಂಜೆ ಆಯ್ತು ಬಾ ಅನ್ನೋ ಕೂಗು ನಿನ್ನ ಮನೆಯಿಂದ ಕೇಳಿಸ್ತು. ಎಂಥಾ ಬ್ಯೂಟಿಫುಲ್ ಹೆಸರು ಅಂದ್ಕೊಳ್ತಾ ಇದ್ದಂತೆ., ಹಾ .. ಮಮ್ಮಿ ಅನ್ನೋ ನಿನ್ನ ಸುಮಧುರ ದನಿ ಕೇಳ್ತು. ಆದ್ರೆ ಟೆರೇಸ್ನಿಂದ ಇಳಿದು ಮನೆ ಒಳಗೆ ಹೋಗ್ಬೇಕಾದ್ರೆ ತಿರುಗಿ ಮೂರ್ನಾಲ್ಕು ಸಲ ನೋಡಿದ್ಯಲ್ಲ.. ಆ ನಿನ್ನ ಕಣ್ಣ ನೋಟ ಮಾತ್ರ ಯಾವತ್ತೂ ಮರೆಯೋಕಾಗಲ್ಲ ನರ್ತನಾ!
ಅಮ್ಮ ಕರೆದ ತಕ್ಷಣ ನೀನು ಹೋರಟೆ.. ಆಗ ನಿನ್ನ ಕೈಗಳಿಂದ ತಪ್ಪಿದ ಗಾಳಿಪಟ ಬಂದು ಇಳಿದಿದ್ದು.. ನನ್ನ ಎದೆಯಂಗಳಕ್ಕೆ. ಅದರ ಮೇಲೆ ಬರೆದಿದ್ದ ನಿನ್ನ ಕವಿತೆಯ ಸಾಲುಗಳು.. ಪ್ರೇಮ ಸಂದೇಶ ಹೊತ್ತು ಬಂದು ತಲುಪಿತ್ತು.. ಕವಿತೆಯ ಸಾಲುಗಳಲ್ಲಿದ್ದ ʻಅಪರಿಚಿತ ನೋಟಗಾರʼ ಅನ್ನೋ ಪದ ಓದಿದ ಮೇಲೆ ನನಗೆ ಅನ್ನೋದು ಖಾತ್ರಿಯೂ ಆಗಿತ್ತು..!
ಮಾತಿಲ್ಲದೇ ಕತೆ ಇಲ್ಲದೇ ಆ ಟೆರೇಸಲ್ಲಿ ನೀನು, ಈ ಟೆರೇಸಲ್ಲಿ ನಾನು. ಸುಮ್ನೇ ನೋಟದ ಸೇತುವೆಯಲ್ಲೇ ಹತ್ರ ಆಗಿದ್ದು ..! ಇಷ್ಟಾದ್ರೂ ಮರುದಿನ ಬೆಳಗ್ಗೆ ಹಾಲು ತರೋಕೆ ಹೋದಾಗ ಎದುರಿಗೆ ಸಿಕ್ಕಾಗ ಹಾಯ್ ಅಂತ ಮಾತಾಡ್ಸಿದ್ರೂ, ಮಾತಾಡದೇ ಹೋಗಿದ್ದು.. ಅವಾಗ ನಾನಂದ್ಕೊಂಡಿದ್ದೆ ಇವಳಿಗೆ ಎಷ್ಟು ಕೊಬ್ಬು ಅಂತ..
ನಾನು ಹಾಲು ತಗೊಂಡು ವಾಪಸ್ ಬರಬೇಕಾದ್ರೆ ರಸ್ತೆಯಲ್ಲಿ ಏನೋ ಕಳೆದ್ಕೊಂಡವಳ ಹಾಗೆ ಹುಡುಕ್ತಿದ್ದೆ.. ಗಾಳಿಪಟನಾ ಅಂತ ನಾನ್ ಕೇಳ್ದೆ… ʻಹೌದು ನಿಮ್ಮ ಕೈಗೆ ಸಿಕ್ಕಿದೆ ಅಂತ ಗೊತ್ತು.. ಆ ಸಾಲುಗಳು ನಿಮಗೆ ಬರೆದಿದ್ದು.. ಅದನ್ನ ಜೋಪಾನವಾಗಿ ಇಟ್ಟಿದಿರಲ್ಲ.. ಹಾಗೇ ನನ್ನನ್ನು ಜೋಪಾನವಾಗಿ ನೋಡ್ಕೋತಿರಾ?ʼ ಅಂತ ಕಣ್ಣನ್ನೇ ನೋಡಿದ್ದೆ ನೀನು. ಕೊನೆಗೆ ನನ್ನ ಕಿರುನಗೆಯ ಉತ್ತರದ ಅರ್ಥ ತಿಳಿದು ನಾಚಿ.. ಒಳಗೆ ಹೋಗಿದ್ದೆ. ಇದನ್ನೂ ಓದಿ: ಪ್ರೀತಿಯೊಂದು ಹೂವಿನ ಹಾಗೇ… ಬಾಡೋ ಮಾತಿಲ್ಲ!
ಈಗ ಅದೆಷ್ಟು ಆಪ್ತಳಾಗಿದ್ದಿಯಾ ಅಂದ್ರೆ ಪ್ರತಿಕ್ಷಣವೂ ʻನನ್ನೆದೆಯ ಗೂಡಿನಲ್ಲಿ.. ನೀನೇ.. ನಿನ್ನದೇ ನರ್ತನ!!ʼ
ನಿನ್ನವನು,
ಗೋಪಿ

