ಡಿಯರ್ ಯಶು… ನಿನಗೊತ್ತಾ ಮೊನ್ನೆ ಕಬ್ಬನ್ ಪಾರ್ಕ್ (Cubbon Park) ಫ್ಲವರ್ ಶೋದಲ್ಲಿ.. (Flower Show) ಅದನ್ನೆಲ್ಲ ಪ್ರೇಮಲೋಕ ಅಂತ ನಾನು ಹೇಳಿದ್ದು ಯಾಕೆ ಅಂತ..? ಇನ್ನೊಂದು ದಿನ ಹೇಳ್ತೀನಿ ಅಂದಿದ್ದೆ ಅಲ್ವಾ.. ಈಗ ಹೇಳ್ತೀನಿ ಕೇಳು..! ಪ್ರೀತಿ ಅನ್ನೋದೇ ಒಂದು ಪುಷ್ಪ ಯಶು..! ಅದಕ್ಕೆ ನಾವು ಪ್ರೀತಿಸೋರಿಗೆ (Lovers) ಹೂವು ಕೊಟ್ಟು ಪ್ರಪೋಸ್ ಮಾಡೋದು… ದೇವರಿಗೂ ಅಷ್ಟೇ ನಮ್ಮ ಪ್ರೀತಿ.. ಭಕ್ತಿಯನ್ನ ಹೂವಿನಿಂದಲೇ ಅಲ್ವಾ ಅರ್ಪಿಸೋದು..!
ಈ ಹೂವುಗಳನ್ನು (Flowers) ಮುಟ್ಟಿದಾಗ ಕೈಗಳಿಗಂಟುವ ಸುಗಂಧ.. ಪ್ರೇಮದಲ್ಲಿ ಅದ್ದಿದ ಹೃದಯಕ್ಕಂಟುವ ಗಂಧ ಎರಡೂ ಒಂದೇ ..! ಈ ಹೂಗಳನ್ನ ಹೊಸಕಿದ ಕೈಗೂ ಆ ಗಂಧ ಅಂಟಿಕೊಳ್ಳತ್ತೆ.. ಹಾಗೇ ಈ ಪ್ರೇಮವನ್ನು ಎಷ್ಟೋ ಕುತಂತ್ರದಿಂದ ಹೊಸಗಿ ಹಾಕಿದ್ರೂ ಅವರ ಕೈಗೂ ಪ್ರೇಮದ ಸಣ್ಣ ಪರಿಮಳ ಸೋಕುತ್ತದೆ..! ಇದು ಪ್ರೀತಿ ಮತ್ತು ಹೂವಿನ ಶಕ್ತಿ.. ಅರ್ಥಾತ್ ಪ್ರೇಮ ಅಂದ್ರೆ ಹೂವೇ.. ಆ ಪ್ರೇಮದ ಅಮಲಿನ ಲೋಕ ಈ ಪಾರ್ಕ್ ಯಶು! ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ನಾವಿಬ್ರೂ ಆ ಪಾರ್ಕ್‌ನ ಸುತ್ತೆಲ್ಲ ಸುತ್ತಿದಾಗ ನನಗನ್ನಿಸಿದ್ದೇ ನಿನಗೂ ಅನ್ನಿಸಬೇಕು ಅಂತ ಏನಿಲ್ಲ… ನಿನಗೆ ಬರೀ ಹೂ ಅಷ್ಟೇ ಅನ್ನಿಸ್ತೋ ಏನೋ.. ನನಗಂತೂ ಆ ಪುಷ್ಪಲೋಕದಲ್ಲಿ ಎಲ್ಲೆಂದರಲ್ಲಿ ನಿನ್ನ ಕಣ್ಗಳೇ ಕಾಣಿಸಿದ್ದು..! ಅಲ್ಲಿ ಯಾವ ಹೂಗಳೂ ನಿನ್ನನ್ನು ಮೀರಿಸುವಂತಿರಲಿಲ್ಲ..! ಯಾವ ಹೂವುಗೂ ನಿನ್ನ ಗಂಧ ಇರಲಿಲ್ಲ..! ಅಲ್ಲೆಲ್ಲ ನೀ ನಡೆದಾಡುವಾಗ, ಗಂದರ್ವ ಲೋಕದಿಂದ ಅಪ್ಸರೆ ಈ ಪುಷ್ಪಗಳಿಗೆ ಮನಸೋತು ಕೆಲಹೊತ್ತು ಕಳೆಯಲು ಬಂದಂತೆ ಕಾಣಿಸುತ್ತಿತ್ತು. ಇದನ್ನೂ ಓದಿ: ಅವತ್ತು ನೆಟ್ಟ ಪಾರಿಜಾತ ಗಿಡ ಹೂ ಬಿಟ್ಟಿದೆ ಗೋಪಾಲ…!
ಯಶು ಅದೆಷ್ಟು ಚೆಂದ ನಗ್ತಿಯಾ.. ಅದೆಷ್ಟು ಮುದ್ದಾದ ಕೋಪದಲ್ಲಿ ಅರಳ್ತಿಯ… ಆ ಕೋಪ ಕಿರುನಗೆಗೂ ಮೂಡುವ ಕೆನ್ನೆಯ ಗುಳಿಯಲ್ಲಿ ತುಂಬಿ ತುಳುಕುವ ಅದೆಂತಹ ಪ್ರೇಮ ಮಕಂದರ..!! ಒಂದೊಂದು ಮುತ್ತಿಗೂ ʻಪ್ರೇಮದ ಹೆಜ್ಜೇನು ಗೂಡಿಗೆʼ ತುಟಿ ಇಟ್ಟಂತೆ..! ಪ್ರೇಮವೆಂದರೆ ಎಷ್ಟು ಸುಂದರವಾದ ಸುಮ.. ಘಮದ.. ಸಮಾಗಮ..! ಈ ತೋಟ ಸೃಷ್ಟಿಸಿಟ್ಟವರು ಯಾರು…? ಕೊನೆಗೂ ನನಗೆ ಸಿಕ್ಕ ಉತ್ತರ ನಿನ್ನೊಂದು ಕಿರುನಗೆ..!
ಹೌದು ನಿನ್ನೊಂದು ಕಿರುನಗೆಗೆ ಅದೆಷ್ಟು ಶಕ್ತಿ..! ಬದುಕನ್ನೇ ಕಟ್ಟಿ ಬಿಡುವಷ್ಟು.. ಕನಸಿನ ತೇರಲ್ಲಿ ತೇಲಿ ಬಿಡುವಷ್ಟು.. ಅದೆಷ್ಟು ಸಿಹಿ… ಜೇನಿಗೂ ಸೆಡ್ಡು ಹೊಡೆಯುವಷ್ಟು..! ನನ್ನ ಬದುಕನ್ನೇ ಅರ್ಪಿಸಿ ಬಿಡುವಷ್ಟು.. ಅನಂದದಲ್ಲಿ ತೇಲುವಷ್ಟು! ಅದೆಂತಹ ಶಕ್ತಿ ತುಂಬಿ ನಗ್ತಿಯಾ ಹೇಳೇ..? ಆಗಾಗ ನಿನ್ನ ಮೂಗ್ಬೊಟ್ಟಿಗೆ ತಾಕುವ ಆ ಬೆಳಕಿಗೆ ʻಪಳ್ʼ ಎಂದು ಹೊಳೆಯುವ ಮಿಂಚಿನಂತೆ.. ಶುಭ್ರವಾದ ನಗು..! ಆ ನಗುವಿನ ಪ್ರೇಮದ ಹೂವಿಗೆ ಬಾಡುವ ಶಾಪ ಬಾರದೇ ಇರಲಿ…!
ಪ್ರೇಮ ಹಾಗೆಲ್ಲ ಬಾಡಲ್ಲ.. ಹೃದಯ ಚೂರಾದ್ರೂ… ವಿಫಲ ಆದ್ರೂ… ಅದು ತನ್ನ ಕಿರುನಗೆಯನ್ನ ಮುಂದುವರಿಸುತ್ತಲೇ ಇರುತ್ತದೆ. ನೆನಪಾಗಿ ಆದ್ರೂನು..! ನನ್ನ ಬದುಕಲ್ಲಿ ನೀನು ನನಸಾಗಿನೇ ಇರ್ತಿಯ ಬಿಡು..! ಈ ಜನ್ಮಕ್ಕೆ ಸಾಕಾಗುವಷ್ಟು ಖುಷಿಯ ಸರಕು ನನ್ನ ಪಾಲಿಗೆ ಯಾವ್ದಾದ್ರೂ ಇದಿಯಾ ಅಂದ್ರೆ ಅದು ನಿನ್ನ ಕಿರುನಗು..! ಹೂಗಳಲ್ಲೇ ಅರಳಿ ನಿಂತ ಕಾಮನಬಿಲ್ಲು ಕಟ್ಟುವ ಶಕ್ತಿ ಪ್ರಪಂಚದ ಮತ್ಯಾವ ಶಕ್ತಿಗೂ ಇಲ್ಲ. ಹಾಗೊಂದು ವೇಳೆ ಇದ್ರೆ ಅದು ನಿನ್ನ ಮೂಗ್ಬೊಟ್ಟಿನ ಮಿಂಚಿಗೆ..!
ಹೇಗೆ ಹೂಗಳು ತುಂಬಿದ ಗಿಡ.. ಗಾರ್ಡನ್ ಸುಂದರವೋ.. ಹಾಗೇ ನಗು ತುಂಬಿದ ನಿನ್ನ ಆ ಪುಟ್ಟ ಮುಖ… ಕೂಡ..! ಅದನ್ನ ಅಲಂಕರಿಸಿದ ನನ್ನ ಹೃದಯ ಕೂಡ ಒಂದು ಸುಂದರ ಹೂದೋಟ ಅಂತ ನನಗೆ ಆಗಾಗ ಹೆಮ್ಮೆ ಆಗುತ್ತೆ ಯಶು..! ಎಷ್ಟು ಕೋಟಿ ಕೊಟ್ರು ಈ ಖುಷಿ ನಮಗೆ ಎಲ್ಲಿ ಸಿಗುತ್ತೆ ಹೇಳು… ಎದೆಯಲ್ಲಿ ತುಂಬಿದ ನಿನ್ನಿಂದ ನನ್ನ ಬದುಕು ಒಂಥರಾ ಪ್ರೇಮಲೋಕನೆ…!! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?



