ಬೆಂಗಳೂರು/ಚಿಕ್ಕಬಳ್ಳಾಪುರ: ಸದಾ ಹೊಸತನ ಹೊಸ ಆವಿಷ್ಕಾರ, ತಂತ್ರಜ್ಞಾನದಿಂದ ಜಾಗತಿಕ ಮಟ್ಟದಲ್ಲೇ ಜನಮನ್ನಣೆ ಗಳಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (International Airport) ಅಂತರ್ಜಾಲದಲ್ಲಿ ಇನ್ನೂ ಮುಂದೆ ಕನ್ನಡ (Kannada) ಭಾಷೆ ಆಯ್ಕೆ ಮಾಡಿಕೊಳ್ಳುವುದನ್ನು ಹೊಸದಾಗಿ ಪರಿಚಯಿಸಿದೆ.
ಅಧಿಕೃತ ಅಂತರ್ಜಾಲದಲ್ಲಿ ಇಷ್ಟು ದಿನ ಇಂಗ್ಲೀಷ್ (English) ಭಾಷೆ ಆಯ್ಕೆಗೆ ಮಾತ್ರ ಅವಕಾಶವಿತ್ತು. ಆದರೆ ಇದೀಗ ಕನ್ನಡ ಭಾಷೆಗೆ ಆದ್ಯತೆ ಹಾಗೂ ಪ್ರಾಮುಖ್ಯತೆ ನೀಡಲಾಗಿದೆ. ಈ ಆಯ್ಕೆಯನ್ನು ಬಳಸುವ ಮೂಲಕ, ಸ್ಥಳೀಯ ಪ್ರಯಾಣಿಕರು ಇನ್ನು ಮುಂದೆ ವಿಮಾನ ನಿಲ್ದಾಣದ ಸೇವೆಗಳನ್ನು ಸುಲಭವಾಗಿ ತಮ್ಮದೇ ಕನ್ನಡ ಭಾಷೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಆದ್ಯತೆ ನೀಡುವ ಪ್ರಯಾಣಿಕರಿಗಾಗಿ ಕನ್ನಡ ಭಾಷೆಯ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.ಇದನ್ನೂ ಓದಿ:25 ಸಾವಿರ ಶಿಕ್ಷಕರ ವಜಾ – ಜಡ್ಜ್ಗಳ ಮನೆಯಲ್ಲಿ ಹಣ ಪತ್ತೆಯಾದ್ರೆ ವರ್ಗಾವಣೆ, ಶಿಕ್ಷಕರ ವಜಾ ಯಾಕೆ? – ಮಮತಾ ಬ್ಯಾನರ್ಜಿ ಪ್ರಶ್ನೆ
ಏನೆಲ್ಲಾ ಮಾಹಿತಿ ಸಿಗಲಿದೆ?
ವಿಮಾನದ ನೈಜಸಮಯದ, ವಿಮಾನಗಳ ಹಾರಾಟದ ಮಾಹಿತಿ, ನಿರ್ಗಮನ, ಆಗಮನ ಮತ್ತು ವಿಳಂಬಗಳ ಬಗ್ಗೆ ತಡೆರಹಿತ ಮಾಹಿತಿ, ಪ್ರಯಾಣಿಕರು ವಿಮಾನಗಳನ್ನು ಕಾಯ್ದಿರಿಸಲು, ಸಾರಿಗೆ ಆಯ್ಕೆ ಮತ್ತು ವಿಮಾನ ನಿಲ್ದಾಣದ ಸೌಲಭ್ಯಗಳನ್ನು ಅನ್ವೇಷಿಸಲು ಅನುವು, ಭದ್ರತಾ ಕಾರ್ಯವಿಧಾನ, ಬ್ಯಾಗೇಜ್ ನಿಯಮಗಳು, ಪ್ರಯಾಣಕ್ಕೆ ಬೇಕಾದ ಅನುಕೂಲತೆಯ ಮಾಹಿತಿಗಳು ಸೇರಿದಂತೆ ಹಲವು ವಿಚಾರಗಳು ಸ್ಥಳೀಯ ಭಾಷೆಯಲ್ಲಿ ದೊರೆಯಲಿವೆ.
ಈಗಾಗಲೇ ವಿಮಾನ ನಿಲ್ದಾಣದಾದ್ಯಂತ ವಿಮಾನ ಮಾಹಿತಿ ಪ್ರದರ್ಶನ ವ್ಯವಸ್ಥೆ, ಸಾರ್ವಜನಿಕ ಪ್ರಕಟಣೆ ವ್ಯವಸ್ಥೆ, ಅಂಗಡಿ ಮತ್ತು ಮಳಿಗೆಗಳ ನಾಮಫಲಕಗಳಿಂದ ಹಿಡಿದು ಸಿಬ್ಬಂದಿಯವರೆಗೆ ಎಲ್ಲೆಡೆ ಕನ್ನಡವನ್ನು ವಿಮಾನ ನಿಲ್ದಾಣ ಅಳವಡಿಸಿಕೊಂಡಿದೆ. ಕರ್ನಾಟಕದ ಸಂಸ್ಕೃತಿ ಮತ್ತು ನೀತಿಗಳನ್ನು ಪ್ರತಿಬಿಂಬಿಸುವಂತೆ ವಿಮಾನ ನಿಲ್ದಾಣವನ್ನು ವಿನ್ಯಾಸಗೊಳಿಸಲಾಗಿದೆ.
ಕನ್ನಡ ಭಾಷೆಯ ಆಯ್ಕೆಯ ಅವಕಾಶದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರಿ ಮಾರಾರ್ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಕೇವಲ ಸಾರಿಗೆ ಕೇಂದ್ರವಾಗಿರದೇ, ಸಾಕಷ್ಟು ಬೆಳೆದಿದೆ. ಇದೀಗ ಸ್ಥಳೀಯ ಭಾಷೆಯಲ್ಲೇ ವಿಮಾನ ನಿಲ್ದಾಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಕನ್ನಡ ಭಾಷಾ ಆಯ್ಕೆಯನ್ನು ಪರಿಚಯಿಸುವ ಮೂಲಕ ನಮ್ಮ ಭಾಷಾ ಪರಂಪರೆಯ ಶ್ರೀಮಂತಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಕೆಂಪೇಗೌಡ ಏರ್ಪೋರ್ಟ್ನ ಅಧಿಕೃತ ವೆಬ್ಸೈಟ್ನಲ್ಲಿ ಕನ್ನಡ ಭಾಷಾ ಆಯ್ಕೆಯ ಪರಿಚಯವು ವಿಮಾನ ನಿಲ್ದಾಣದಲ್ಲಿ ಕನ್ನಡದ ಪರಿಸರವನ್ನು ವೃದ್ಧಿಸಲಿದ್ದು, ಇದು ಕನ್ನಡಿಗರಿಗೆ ಸಂತಸ ಹಾಗೂ ಹೆಮ್ಮೆಯ ವಿಚಾರವಾಗಿದೆ.
ಹೆಚ್ಚಿನ ಮಾಹಿತಿಗಾಗಿ, http://bengaluruairport.com/kn/ ಕನ್ನಡ ವೆಬ್ಸೈಟ್ಗೆ ಭೇಟಿ ನೀಡಿ.ಇದನ್ನೂ ಓದಿ:ರಣ ಬಿಸಿಲಿಗೆ ಕಂಗೆಟ್ಟಿದ್ದ ಬೀದರ್ಗೆ ತಂಪೆರೆದ ಅಕಾಲಿಕ ಮಳೆ