ಕನ್ನಡದಲ್ಲಿ ಸತ್ಯಕಥೆಗಳನ್ನಾಧರಿಸಿದ ಸಿನಿಮಾಗಳು ಆಗಾಗ ತೆರೆ ಕಾಣುತ್ತಿರುತ್ತವೆ. ಇದೀಗ ಅದೇ ಸಾಲಿನಲ್ಲಿ ಸೇರ್ಪಡೆಯಾಗಿರುವ ಚಿತ್ರ ಎಟಿಎಂ (ಅಟೆಂಪ್ಟ್ ಟು ಮರ್ಡರ್). 5 ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದಂಥ ಬೆಂಗಳೂರಿನ ಎಟಿಎಂವೊಂದರಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಇದಾಗಿದ್ದು, ಕಳೆದ ವಾರ ರಾಜ್ಯಾದ್ಯಂತ ತೆರೆಗೆ ಬಂದಿತ್ತು. ನೈಜ ಘಟನೆ ಆಧರಿಸಿ ಅಚ್ಚುಕಟ್ಟಾಗಿ ಸಿನಿಮಾ ಮಾಡಿರುವ ಕಾರಣಕ್ಕೆ ವಿಮರ್ಶಕರು ಮಾತ್ರವಲ್ಲದೆ ಪ್ರೇಕ್ಷಕರೂ ಎಟಿಎಂಗೆ ಫುಲ್ ಮಾರ್ಕ್ ನೀಡಿದ್ದಾರೆ. ಇದರ ಪ್ರತಿಫಲವೆಂಬಂತೆ ಎಟಿಎಂ ಬಿಡುಗಡೆಯಾದ ಸ್ಥಳಗಳಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಈ ಚಿತ್ರಕ್ಕೆ ಅಮರ್ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ, ಎಸ್.ವಿ. ನಾರಾಯಣ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಅಮರ್ ಮಾಡಿಕೊಂಡಿದ್ದ ಈ ಕಥೆ ಕೇಳಿದಾಗ ಅದರಲ್ಲಿನ ವಿಶೇಷ ಅಂಶವನ್ನು ಗ್ರಹಿಸಿ, ಆ ಕಥೆಯಲ್ಲಿ ಏನೋ ಹೊಸತನವಿರುವುದನ್ನು ಕಂಡುಕೊಂಡು ಸಹೋದರ ಕೃಷ್ಣಮೂರ್ತಿ ಅವರ ಜೊತೆ ಚರ್ಚಿಸಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಟಿಎಂ ಚಿತ್ರದಲ್ಲಿ ಪ್ರಮುಖವಾಗಿ ಐದು ಜನ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೂ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳೂ ಅದರದೇ ಆದ ಪ್ರಾಮುಖ್ಯತೆ ಹೊಂದಿವೆ. ಚಿತ್ರದಲ್ಲಿರುವ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಂಟೆಂಟ್ ಪ್ರೇಕ್ಷಕರನ್ನು ಹಿಡಿದು ಕೂರಿಸುವಂತಿದೆ.
Advertisement
ನಿರ್ದೇಶಕ ಅಮರ್ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದು, ಇದೇ ಮೊದಲ ಬಾರಿಗೆ ಕಮರ್ಷಿಯಲ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇನ್ನು ಈ ಚಿತ್ರದ ನಾಯಕನಟ ವಿನಯ್ ಒಬ್ಬ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಹೇಮಲತಾ ಅವರು ಒಬ್ಬ ಜರ್ನಲಿಸ್ಟ್ ಪಾತ್ರವನ್ನು ನಿರ್ವಹಿಸಿದ್ದಾರೆ.