ನನ್ನ ಪತಿ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ: ಗುರುಪ್ರಸಾದ್‌ ಪತ್ನಿ ನೀಡಿದ ದೂರಿನಲ್ಲಿ ಏನಿದೆ?

Public TV
2 Min Read
Kannada filmmaker Guruprasad dies by suicide in Bengaluru There is no doubt in my husbands death udr case registered wife sumithra

ಬೆಂಗಳೂರು: ನನ್ನ ಪತಿ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ, ಸಾಲದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಅವರು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ ಎಂದು ನಿರ್ದೇಶಕ ಗುರುಪ್ರಸಾದ್‌ (Guruprasad) ಅವರ ಎರಡನೇ ಪತ್ನಿ ಸುಮಿತ್ರಾ (Sumithra) ದೂರು ನೀಡಿದ್ದಾರೆ.

ಸುಮಿತ್ರಾ (Sumithra) ನೀಡಿದ ದೂರಿನ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ  ಅಸಹಜ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾಲ್ಕು ಅನುಮಾನಗಳಿಗೆ ಕಾರಣವಾದ ಗುರುಪ್ರಸಾದ್ ಸಾವು!

 

ದೂರಿನಲ್ಲಿ ಏನಿದೆ?
2020 ರಲ್ಲಿ ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅವರನ್ನು ನಾನು ವಿವಾಹವಾದೆ. ನಮಗೆ ಮೂರೂವರೆ ವರ್ಷದ ಹೆಣ್ಣು ಮಗುವಿದೆ. ಈ ಹಿಂದೆ ಗುರುಪ್ರಸಾದ್‌ಗೆ ಆರತಿ ಜೊತೆ ಮದುವೆಯಾಗಿ ನಂತರ ಡಿವೋರ್ಸ್‌ ಆಗಿತ್ತು. ಮದುವೆಯಾದ ನಂತರ 4 ವರ್ಷಗಳ ಕಾಲ ಕನಕಪುರ ರಸ್ತೆಯಲ್ಲಿ ಎನ್.ಎ.ಪಿ.ಎ ವ್ಯಾಲಿ, ರಾಜರಾಜೇಶ್ವರಿ ನಗರದ ಈಸಿ ಡಿವೈನ್ ಬ್ಲಾಕ್ ಹಾಗೂ ಬಸವೇಶ್ವರನಗರದ ಬಾಲಾಜಿ ರೆಸಿಡೆನ್ಸಿಯಲ್ಲಿ ಜೀವನ ಸಾಗಿಸುತ್ತಿದ್ದೆವು. ನಂತರ ನಾನು ನನ್ನ ಯಜಮಾನರು 6 ತಿಂಗಳಿನಿಂದ ಮನೆ ಖಾಲಿ ಮಾಡಿಕೊಂಡು ಹುಸ್ಕೂರು ರಸ್ತೆಯಲ್ಲಿರುವ ನ್ಯೂ ಹೆವನ್ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ವಾಸವಾಗಿದ್ದೆವು.

ನನಗೆ ಆರೋಗ್ಯ ಸರಿಯಿಲ್ಲದ ಕಾರಣ ನಮ್ಮ ಯಜಮಾನರು ನನ್ನನ್ನು ತಾಯಿಯ ಮನೆಯಲ್ಲಿ ಇರಲು ಹೇಳಿ ಕಳುಹಿಸಿಕೊಟ್ಟರು. ಲೋಕಸಭಾ ಚುನಾವಣಾ ಸಮಯದಲ್ಲಿ ಕೊನೆಯ ಬಾರಿ ನಾವಿಬ್ಬರು ಭೇಟಿಯಾಗಿದ್ದೆವು. ಗುರುಪ್ರಸಾದ್‌ ಚಲನಚಿತ್ರ ಕೆಲಸದಲ್ಲಿ ಬ್ಯುಸಿಯಾಗಿದ್ದ ಕಾರಣ ನಾನು ದೂರವಾಣಿ ಮೂಲಕ ಸಂಪರ್ಕದಲ್ಲಿದ್ದೆ. ಅಕ್ಟೋಬರ್‌ 25 ರಂದು ನಾನು ಕೊನೆಯಾದಾಗಿ ಫೋನ್‌ ಮಾಡಿದ್ದೆ. ಆದರೆ ಅವರು ರಿಸೀವ್‌ ಮಾಡಿರಲಿಲ್ಲ. ಪತಿ ಬ್ಯುಸಿ ಇರಬಹುದು ಎಂದು ಸುಮ್ಮನಾಗಿದ್ದೆ. ಇದನ್ನೂ ಓದಿ: ವರ್ಷದಲ್ಲಿ ಮೂರು ಮನೆಯನ್ನು ಬದಲಿಸಿದ್ದ ಗುರುಪ್ರಸಾದ್‌

 

ನವೆಂಬರ್‌ 3 ರಂದು ಬೆಳಗ್ಗೆ 11 ಗಂಟೆಯ ವೇಳೆಗೆ ಅಪಾರ್ಟ್‌ಮೆಂಟ್ ನಿವಾಸಿ ಜಯರಾಮ್ ಎಂಬುವರು ದೂರವಾಣಿ ಮೂಲಕ ನೀವು ವಾಸವಿದ್ದ ಮನೆಯಿಂದ ಏನೋ ಒಂದು ರೀತಿಯ ವಾಸನೆ ಬರುತ್ತಿದೆ. ಮನೆಯ ಬಾಗಿಲು ಬಳಿ ಹೋಗಿ ಬಾಗಿಲು ತಟ್ಟಿದರೂ ಯಾರು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿಸಿದರು.

ನಾನು ಗಾಬರಿಯಿಂದ ಕುಟುಂಬದವರ ಜೊತೆ ಅಪಾರ್ಟ್‌ಮೆಂಟ್‌ಗೆ ಆಗಮಿಸಿದೆ. ಅಕ್ಕಪಕ್ಕದವರ ಸಹಾಯದಿಂದ ಹಾಗೂ ಪೊಲೀಸರ ನೆರವಿನೊಂದಿಗೆ ಬಾಗಿಲನ್ನು ಒಡೆದು ನೋಡಿದಾಗ ಪತಿ ಗುರುಪ್ರಸಾದ್‌ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ನೋಡಿದೆ. ಪತಿಯ ಶರೀರ ಊದಿಕೊಂಡಿತ್ತು. ಇದನ್ನೂ ಓದಿ: ಗುರುಪ್ರಸಾದ್ ಮಗುವಿಗೆ ಸಹಾಯ ಮಾಡುತ್ತೇನೆ: ನಟ ಜಗ್ಗೇಶ್

ನಮ್ಮ ಯಜಮಾನರು ಸಿನಿಮಾ ವಿಚಾರದಲ್ಲಿ ಸಾಲ ಮಾಡಿಕೊಂಡ ವಿಚಾರ ನನಗೆ ತಿಳಿದಿದೆ. ಸಾಲವನ್ನು ಹೇಗಾದರೂ ತೀರಿಸೋಣ ಎಂದು ನಾನು ಧೈರ್ಯ ಹೇಳಿದ್ದೆ. ಆದರೆ ಪತಿ ಸಾಲ ಬಾಧೆಯಿಂದ ಖಿನ್ನತೆಗೆ ಜಾರಿ ಜೀವನದಲ್ಲಿ ಜಿಗುಪ್ಸೆಗೊಂಡು 3-4 ದಿನಗಳ ಹಿಂದೆ ಮನೆಯ ಬಾಗಿಲನ್ನು ಒಳಗಡೆಯಿಂದ ಲಾಕ್ ಮಾಡಿಕೊಂಡು ನೂಲಿನ ಹಗ್ಗದಿಂದ ಮಹಡಿಯ ಕಬ್ಬಿಣದ ಕೊಕ್ಕೆಗೆ ಕುಣಿಕೆ ಮಾಡಿ ಕತ್ತನ್ನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಗಂಡನ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ತಾನು ಸ್ಥಳಕ್ಕೆ ಬಂದು ಮುಂದಿನ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.

 

Share This Article