‘ಪ್ರೊಡಕ್ಷನ್ ನಂ.1’ ಚಿತ್ರಕ್ಕೆ ಮುಹೂರ್ತ

Public TV
1 Min Read
Production No 1 1

ಬೆಂಗಳೂರು: ಈ ಹಿಂದೆ ನವರಸ ನಾಯಕ ಜಗ್ಗೇಶ್ ಅಭಿನಯದ ‘ಅಳಿಯ ಅಲ್ಲ ಮಗಳಗಂಡ’, ‘ಸೋಮ’ದಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ವೈ.ಯೇಸುದಾಸ್ ಬಹಳ ದಿನಗಳ ನಂತರ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಪ್ರೊಡಕ್ಷನ್ ನಂ.1 ಎಂದು ಚಿತ್ರ ಸೆಟ್ಟೇರಿದೆ. ರಾಜೇಂದ್ರ ಅಭಿನಯದ ಕಳ್ಳಪೊಲೀಸ್, ಶೋಭರಾಜ್ ಅಭಿನಯದ ಭಗವಾನ್ ದಾದಾ, ಕೆ.ಶಿವರಾಂ ಅಭಿನಯದ ಸುಭಾಷ್, ಹೀಗೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ ವೈ.ಯೇಸುದಾಸ್ ಅವರೀಗ ಲವ್, ಥ್ರಿಲ್ಲರ್, ಆ್ಯಕ್ಷನ್ ಹೊಂದಿರುವ ಚಿತ್ರವೊಂದಕ್ಕೆ ಕೈಹಾಕಿದ್ದಾರೆ. ಕಳೆದ ವಾರ ನೆಲಮಂಗಲದ ಉದ್ಭವ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು. ನೆಲಮಂಗಲದ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಯಾಮರಾ ಚಾಲನೆ ಮಾಡಿದರು. ಹಿರಿಯ ನಟ ಬಿರಾದಾರ್ ಕ್ಲಾಪ್ ಮಾಡಿದರು.

Production No 1 2

ಶ್ರೀ ವಿಕ್ಟರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮುತ್ತುರಾಜ್ ಛಾಯಾಗ್ರಹಣ, ರವಿನಂದನ್ ಜೈನ್ ಸಂಗೀತ, ಸೂರ್ಯಕಾಂತ್ ಸಂಕಲನ, ಸೂರ್ಯಪ್ರಕಾಶ್ ಸಾಹಸ, ಸಿದ್ಧರಾಜ್ ನರಗುಂದ ಮತ್ತು ಆ್ಯಂಟೋನಿ ಸಾಹಿತ್ಯವಿದೆ. ವಿನಯ್, ಆರತಿ, ಶೋಭರಾಜ್, ಡಾ. ಶ್ರೀನಿವಾಸಮೂರ್ತಿ ಆಯ್ಕೆಯಾಗಿದ್ದು ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ. ಪ್ರೇಮಿಗಳಿಗೆ ಅವರ ಪೋಷಕರೇ ಯಾವ ರೀತಿ ನಡೆಸಿಕೊಳ್ಳುತ್ತಾರೆ ಹಾಗೂ ವಿಲನ್ ಕೂಡಾ ಸೇರಿಕೊಂಡಾಗ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ? ಕೊನೆಯಲ್ಲಿ ಇವರ ಪ್ರೀತಿಗೆ ಗೆಲುವು ಸಿಗುತ್ತಾ, ಇಲ್ಲವಾ ಎನ್ನುವ ಕಥೆ ಹೊಂದಿರುವ ಈ ಚಿತ್ರಕ್ಕೆ ದಾಂಡೇಲಿ, ಧಾರವಾಡ, ಸಾಗರ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Production No 1 5

Share This Article
Leave a Comment

Leave a Reply

Your email address will not be published. Required fields are marked *