– ಆನಂದ್ ವಿ
‘ಆ’ಸಿನಿಮಾದಲ್ಲಿದ್ದ ಬಹುತೇಕರಿಗೆ ಅನುಭವವೇ ಇರಲಿಲ್ಲ. ಕ್ಯಾಮೆರಾ, ಅಭಿನಯವೂ ಗೊತ್ತಿರಲಿಲ್ಲ. ಆ ಸಿನಿಮಾ ಗೆದ್ದೇ ಗೆಲ್ಲುತ್ತೆ ಅಂತ ಯಾರೂ ಊಹೆಯೂ ಮಾಡಿರಲಿಲ್ಲ. ಕಪ್ಪನೆಯ ‘ಆ’ ಹುಡುಗ ಹೀರೋ ಅಂದಾಗ ಇಡೀ ಗಾಂಧಿನಗರವೇ ಒಂದು ಕ್ಷಣ ನಕ್ಕು ಬಿಟ್ಟಿತ್ತು. ಸಿನಿಮಾ ಮಾರಾಟಕ್ಕೆ ಮುಂದಾದಾಗ ಖರೀದಿಗೆ ಯಾರೂ ಮುಂದಾಗಲಿಲ್ಲ. ಆಟೋ ಮೇಲೆ ಪೋಸ್ಟರ್ ಬೀಳಲಿಲ್ಲ. ಸ್ಟಿಕ್ಕರ್ ಹಚ್ಚೋಕೆ ಯಾರೂ ಒಪ್ಪಲಿಲ್ಲ. ಸಿನಿಮಾ ರಿಲೀಸ್ ಆಗಿ, ಸೂಪರ್ ಹಿಟ್ ಆಗುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಖಳನಟನಾಗಲು ಬಂದ ‘ಆ’ ಹೀರೋ ಇವತ್ತು ‘ಸ್ಟಾರ್’ ನಟ. ಯಾರು ಅವತ್ತು ಕರಿಯಾ. ಕರಿಯಾ ಅಂತ ಹೀಯಾಳಿಸಿದರೋ; ಇಂದು ಅದೇ ಕರಿಯನ ಕಾಲ್‍ಶೀಟ್‍ಗಾಗಿ ಕಾಯೋ ಕಾಲ ಬಂದಿದೆ. ಒಂದೇ ಒಂದು ಸಿನಿಮಾ ಹಿಟ್‍ನಿಂದ ಸ್ಟಾರ್ ನಟನಾದ ‘ಆ’ ಹೀರೋನೇ ದುನಿಯಾ ವಿಜಯ್.
Advertisement
‘ದುನಿಯಾ’ ವಿಜಯ್‍ಗೆ ನೇಮ್; ಫೆಮೂ ಎರಡನ್ನೂ ತಂದುಕೊಟ್ಟ ಸಿನಿಮಾ ಹೆಸರೇ ‘ದುನಿಯಾ’. ಇವತ್ತು ದುನಿಯಾ ವಿಜಯ್ ‘ದುನಿಯಾ’ ಬದಲಾಗಿರಬಹುದು. ಆದರೆ, ಅಂದು ಈ ‘ದುನಿಯಾ’ ಸೂಪರ್ ಹಿಟ್ ಆಗಿರದಿದ್ದರೆ, ವಿಜಯ್ ಸ್ಟಾರ್ ನಟನಾಗುತ್ತಿರಲಿಲ್ಲವೇನೋ…? ಇವತ್ತಿಗೂ ಕೂಡ ಖಳನಟನಾಗಿಯೇ ಮರೆಯಾಗುತ್ತಿದ್ದರೇನೋ…? ಸಿನಿಮಾದ ಹಿಂದೆ, ನಿರ್ದೇಶಕ ಸೂರಿ ಶ್ರಮ ಎಷ್ಟಿತ್ತೋ; ಅಭಿನಯದ ಮೇಲೆ ದುನಿಯಾ ವಿಜಯ್ ಕಾಳಜಿಯೂ ಅಷ್ಟೇ ಇತ್ತು.
Advertisement
ಅದೊಂದು ಸಣ್ಣ ಕೊಠಡಿ. ಆದ್ರೆ, ಅಲ್ಲಿ ಕನಸುಗಳಿಗೆ ಬರವಿರಲಿಲ್ಲ. ಏನಾದರೂ ಸಾಧಿಸಬೇಕೆಂಬ ಛಲವಿತ್ತು. ಹಸಿದ ಹೊಟ್ಟೆಯ ಜೊತೆಗೆ, ವೃತ್ತಿಪರತೆಯ ಶ್ರದ್ಧೆ ಇತ್ತು. ಜೀವನದಲ್ಲಿ ಬೆಳೆಯಬೇಕೆನ್ನುವ ಆಸೆ ಕೂಡ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅವಕಾಶ ಸಿಕ್ಕಿದ್ರೆ, ಎಲ್ಲವನ್ನೂ ಬಾಚಿ ಎಲ್ಲರನ್ನೂ ಬೆಚ್ಚಿಬೀಳಿಸುವ ತವಕವೂ ಇತ್ತು. ಹೀಗೆ, ನಾಲ್ಕು ಗೋಡೆಯ ಮಧ್ಯೆ ಕನಸು ಕಂಡು ಗೆದ್ದ ಕನ್ನಡದ ಸ್ಟಾರ್‌ಗಳೇ ಕಾಮಿಡಿಟೈಮ್ ಗಣೇಶ್, ದುನಿಯಾ ವಿಜಿ, ಶ್ರೀನಗರ ಕಿಟ್ಟಿ, ಯೋಗರಾಜ್ ಭಟ್ ಹಾಗೂ ಸೂರಿ.
Advertisement
Advertisement
ಅದು, 2007. ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸೂರಿ ಎರಡು ಸಿನಿಮಾಗಳನ್ನು ಮಾಡಿದ್ದರು. ಮಣಿ ಸಿನಿಮಾ ಆರ್ಟ್ ಫಿಲ್ಮ್ ತರಹ ಆಗಿ ಹೋಗಿತ್ತು. ರಂಗ ಎಸ್‍ಎಸ್‍ಎಲ್‍ಸಿ ಕಪ್ಲೀಟ್ ಕಮರ್ಷಿಯಲ್ ಹಣೆಪಟ್ಟಿ ಹಚ್ಚಿಕೊಂಡಿತ್ತು. ಯಾವುದೇ ಸಿನಿಮಾ ಇಲ್ಲದೆ 2 ವರ್ಷ ಸೂರಿ ಮನೆಯಲ್ಲೇ ಇದ್ದರು. ಒಂದೊಳ್ಳೆ ಬ್ರೇಕ್‍ಗಾಗಿ ಕಾಯುತ್ತಿದ್ದರು. ಆಗಾಗ ಆಫರ್ ಬರುತ್ತಿದ್ದರೂ, ಸೂರಿ ಕತೆ ಮಾತ್ರ ನಿರ್ಮಾಪಕರಿಗೆ ಇಷ್ಟವಾಗುತ್ತಿರತ್ತಿಲ್ಲ. ನಿರ್ಮಾಪಕರು ಹೇಳಿದ ರೀತಿಯಂತೆ ಸೂರಿಗೆ ಕತೆ ಬರೆಯಲು ಆಗುತ್ತಿರಲಿಲ್ಲ.
ಆಗ ಲೋಕಲ್ ಏರಿಯಾದಲ್ಲಿ ನಡೆಯೋ ಸಣ್ಣಪುಟ್ಟ ಘಟನೆ, ಚಿತ್ರ ವಿಚಿತ್ರ ಪಾತ್ರಗಳನ್ನು ಹರವಿಟ್ಟುಕೊಂಡು, ಅದಕ್ಕೊಂದು ಅಕ್ಷರ ರೂಪ ಕೊಟ್ಟು, ಚಿತ್ರಕತೆ ಹೊಸೆದು ಬದುಕಿನಲ್ಲ ಎಲ್ಲ ತಲ್ಲಣ, ಪ್ರಕ್ಷುಬ್ಧತೆ, ನೀಚತನ, ವಿಕೃತಿಗಳಿಗೆ ಜೀವ ತುಂಬಿದಾಗಲೇ ಧಗಧಗಿಸಿತಲ್ಲ ದುನಿಯಾ ಎನ್ನುವ ಮೂರಕ್ಷರದ ಮತಾಪು. ಆ ಮತಾಪಿಗೆ ಬೆಳಕಲ್ಲೇ ಒಬ್ಬೊಬ್ಬರು ಮರಳಿ ಹೊರಳಿ ಅರಳಿ ನಿಂತರು ಕರುನಾಡಿನ ಅಂಗಳದಲ್ಲಿ ತುಂಬಾ.
ಕೇವಲ 15 ದಿನಗಳಲ್ಲೇ ಕತೆ ಹೆಣೆದ ಸೂರಿಗೆ ಸಾದಾಸೀದಾ ವ್ಯಕ್ತಿತ್ವಕ್ಕಿಂತ, ಒರಟೊರಟು ಮುಖ, ಹುರಿಹುರಿ ದೇಹ, ಕೆಂಡ ಕಾರುವ ಕಣ್ಣು, ಪಕ್ಕಾ ಸ್ಲಂ ಕ್ಯಾರೆಕ್ಟರ್ ಹೊಂದಿದ್ದ ನಾಯಕ ಬೇಕಿತ್ತು. ಆದರೆ ಅದೆಲ್ಲಾ ಗಣೇಶ್ ಮುಖದಲ್ಲಾಗಲಿ, ಶ್ರೀನಗರದ ಕಿಟ್ಟಿ ಕಣ್ಣಲ್ಲಾಗಲಿ ಚಿಮ್ಮಲಿಲ್ಲ. ಆಗ ಸೂರಿ ಕಣ್ಣ ಮುಂದೆ ಮಿಸುಕಾಡಿದ್ದೇ ಫೈಟರ್ ವಿಜಯ್. ಎಣ್ಣೆ ಕಾಣದ ಜೊಂಪೆ ಕೂದಲು, ಎಷ್ಟೋ ವರ್ಷ ನೀರು ಕಾಣದಂತಿದ್ದ ಕಾಡುಬಂಡೆಯಂಥ ದೇಹ, ಇದಕ್ಕೆಲ್ಲ ಕಳಸ ಇಟ್ಟಂತಿದ್ದ ಕಡುಕಪ್ಪು ಮೈ ಬಣ್ಣ…ಛೆ…ಛೆ…ಈ ಮುಖವನ್ನಾ ಜನರು ಒಪ್ತಾರಾ ? ಸೂರಿ ಕತೆ ಹೇಳಿ, ಹೀರೋ ಹೆಸರು ಹೇಳಿದಾಕ್ಷಣ ನಿರ್ಮಾಪಕರು ಕೊಸರುತ್ತಿದ್ದ ಮಾತೇ ಇದು. ಇಲ್ಲ ಸೂರಿ ಹಠ ಬಿಡಲಿಲ್ಲ. ವಿಜಯ್ ಹೀರೋ ಮಾಡಿದ್ರೆ ದುನಿಯಾ. ಹೀಗಂತ ಗುಂಗುರು ಕೂದಲನ್ನು ಹಿಂಡಿಕೊಂಡು ಮತ್ತೊಮ್ಮ ನಿರ್ಮಾಪಕರತ್ತ ಹೋಗುತ್ತಿದ್ದರು. ಇನ್ನೊಂದು ಕಡೆ ಪಕ್ಕದ ಮನೆ ಹುಡುಗಿಯಂತಿದ್ದ ರಶ್ಮಿಯನ್ನು ನಾಯಕಿಯಾಗಿ ಫಿಕ್ಸ್ ಮಾಡಿದ್ದರು. ಆಕೆಗೆ ಅಭಿನಯದ ಗಂಧ-ಗಾಳಿಯೂ ಗೊತ್ತಿರಲಿಲ್ಲ; ಅವನ್ಯಾರೋ ಲೂಸ್ ಮಾದನಂತೆ, ಪೀಚೂ; ಪೀಚೂ ಹುಡುಗ, ಅದೇನೋ ‘ದುನಿಯಾ’ ಟೈಟಲ್ ಅಂತೆ; ಈ ಸಿನಿಮಾ ಹಿಟ್ ಆಗಲ್ಲ ಬಿಡಿ ಅಂತ ಷರಾ ಬರೆದುಬಿಟ್ಟಿತ್ತು ಗಾಂಧಿನಗರ. ಅವರೀವರ ಮನೆ ಎಡತಾಕಿ ಚಪ್ಪಲಿ ಸವೆಯಿತೇ ಹೊರತು ದುಡ್ಡು ಹಾಕಲು ಯಾರೊಬ್ಬರೂ ಮುಂದೆ ಬರಲಿಲ್ಲ. ಸಿನಿಮಾ ಮಾಡಲೇಬೇಕೆಂದು ಹಲ್ಲಲ್ಲು ಕಡಿಯುತ್ತಿದ್ದ ವಿಜಯ್ ಕೊನೆಗೆ ಸೂರಿಯನ್ನು ತಮ್ಮ ಅಕ್ಕನ ಗಂಡ ಟಿ.ಪಿ. ಸಿದ್ದರಾಜುಗೆ ಪರಿಚಯಿಸಿದ್ರು. ಆಗ ಸೂರಿ ಹೇಳಿದ್ದು ಒಂದೇ ಮಾತು. ‘ನನಗೆ ಎಲ್ಲರ ಥರ ಕಥೆ ಹೇಳೋಕೆ ಬರಲ್ಲ. ಆದರೆ ಒಂದು ಮಾತ್ರ ಸತ್ಯ. ಈ ಸಿನಿಮಾದಿಂದ ನಮಗೆ ನಿಮಗೆ ಹೆಸರು ದುಡ್ಡು ಎರಡೂ ಬರುತ್ತೆ.ನಂಬಿ…’ ಕಪ್ಪು ಪ್ಯಾಂಟು, ಕಪ್ಪು ಅಂಗಿ ಹಾಕಿದ್ದ ಸೂರಿಯ ಕುಳ್ಳ ದೇಹವನ್ನು ಸಿದ್ದರಾಜು ಮತ್ತೊಮ್ಮೆ ನೋಡಿದರು. ಸೂರಿ ಹಾಕಿದ್ದ ಕನ್ನಡಕದಲ್ಲಿ ಅಲ್ಲೇ ಹಚ್ಚಿಟ್ಟಿದ್ದ ದೀಪ ಮಿನುಗಿತು. ಫಿನಿಶ್ ಸಿದ್ದರಾಜು ಇನ್ನೊಂದು ಮಾತಾಡದೆ ಚೆಕ್‍ಗೆ ಸಹಿ ಮಾಡಿ ಸೂರಿ ಕೈಗಿಟ್ಟರು. ದೂರದಲ್ಲೆಲ್ಲೊ ದೇವಸ್ಥಾನದ ಗಂಟೆ ಎರಡು ಸಲ ಸದ್ದು ಮಾಡಿತು. ಸೂರಿ, ವಿಜಯ್, ಸಿದ್ದರಾಜು. ಎಲ್ಲರ ಕಣ್ಣಲ್ಲಿ ತಿಕ್ಕಿ ಒರೆಸಿದರೂ ಅಳಿಸಲಾಗದ ಉತ್ಸಾಹ.
ವರ್ಷಗಟ್ಟಲೆ ದುಡ್ಡಿಗಾಗಿ ಅಲೆದಾಟ ಕಂಡ ಕಂಡವರ ಎದುರು ಅವಮಾನ. ಸಣ್ಣ ಸಣ್ಣ ಶಿಲುಬೆಗೇರಿದ ತಾತ್ಸಾರ. ಕೈ ಹಿಡಿಯದ ಕಣ್ಣಿಲ್ಲದ ದೇವರು. ಹೀಗೆ ಒಂದೊಂದು ಮೆಟ್ಟಿಲು ದಾಟಿ ಕೊನೆಗೂ ಕ್ಯಾಮೆರಾ ಸ್ಟಾರ್ಟ್ ಎಂದು ಹೇಳುವಾಗಲೇ ಮತ್ತೊಂದು ಅವಘಡ ಅಡ್ಡಗಾಲು ಹಾಕಿತ್ತು. ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಶೂಟಿಂಗ್ ಎರಡೇ ದಿನಕ್ಕೆ ಪ್ಯಾಕಪ್ ಆಗಿತ್ತು. ಯಾವ ಕಾರಣಕ್ಕೂ ನಾನು ಈ ಸಿನಿಮ ಮಾಡಲ್ಲ ಎಂದು ಸೂರಿ ಕೆಂಡ ಕಾಡಿಬಿಟ್ಟರು. ನನ್ನ ಪಾಡಿಗೆ ನನ್ನನ್ನು ಬಿಡಿ. ಮತ್ತೆ ಈ ಕಡೆ ತಲೆ ಹಾಕಲ್ಲ ಎಂದು ಮೈ ಕೊಡವಿ ಹೊರಟೇ ಬಿಟ್ಟರು. ಇಡೀ ತಂಡ ಕಂಗಾಲು ಕಂಗಾಲು. ಏನಾಯ್ತು ಈ ಯಪ್ಪನಿಗೆ? ಕೈಗೆ ಬಂದ ತುತ್ತನ್ನು ನೆಲಕ್ಕೆ ಬೀಸಾಡುತ್ತಿದ್ದಾನಲ್ಲ? ಪ್ರಶ್ನೆ ಕೇಳಬೇಕಾದವರು ಸುಮ್ಮನಿದ್ದರು. ಉತ್ತರ ಗೊತ್ತಿದ್ದ ವಿಜಯ್ ಒಂದೇ ಮಾತಿನಿಂದ ಮತ್ತೆ ಸೂರಿ ಹೆಗಲ ಮೇಲೆ ಕೈ ಹಾಕಿದರು. ಹಾಗಾದ್ರೆ ಸುಕ್ಕಾ ಸೂರಿ ಏಕಾಏಕಿ ಮುನಿಸಿಕೊಂಡಿದ್ದಕ್ಕೆ ಕಾರಣವೇನು ಗೊತ್ತಾ ? ಅದೇ ವಿಜಯ್‍ಗೆ ಹಾಕಿದ ಮೇಕಪ್ಪು. ಹೌದು, ಬಂಡೆ ಒಡೆಯುವ ಹುಡುಗನ ಪಾತ್ರಕ್ಕೆ ಮೇಕಪ್ ಬೇಡ, ಆತನಿಗೆ ಕಲರ್ ಕಲರ್ ಡ್ರೆಸ್ ಇರಲೇಬಾರದು, ಮುಖದಲ್ಲಿ ಎಣ್ಣೆ ಎಣ್ಣೆ ಸುರಿಯುತ್ತಿರಬೇಕು, ಚಪ್ಪಲಿ ಹರಿದು ಮೂರಾಬಟ್ಟೆಯಾಗಿರಬೇಕು. ಇದು ಸೂರಿಯ ಶಿವಲಿಂಗು ಪಾತ್ರದ ಕನಸು. ಆದರೆ ಎಲ್ಲರೂ ಸೇರಿಕೊಂಡು ವಿಜಯ್ ಕಪ್ಪು ಮುಖಕ್ಕೆ ಎರಡಿಂಚು ಕೆಂಪು ಬಣ್ಣ ಬಳಿದು ಇಂಗ್ಲೆಂಡಿನ ಹೈದನನ್ನಾಗಿ ಮಾಡಿಬಿಟ್ಟಿತ್ತು. ಅದಕ್ಕೆ ಸೂರಿ ಕ್ಯಾಪು ಕಿತ್ತೊಗೆದು ಸಿಗರೇಟು ಹಚ್ಚುತ್ತಾ ಸ್ಟುಡಿಯೋದ ಗೇಟು ದಾಟಿದ್ದರು. ಕೊನೆಗೆ ಸೂರಿ ಮಾತನ್ನು ಎಲ್ಲರೂ ಒಪ್ಪಿದರು. ವಿಜಯ್‍ಗೆ ಟಚಪ್ ಕೂಡ ಮಾಡಲಿಲ್ಲ. ಚಿಂದಿ ಆಯುತ್ತಿದ್ದ ಜನರಿಂದಲೇ ಬಟ್ಟೆ ಪಡೆದು ಹೊಸ ಬಟ್ಟೆ ಕೊಟ್ಟರು, ಕಿತ್ತೋಗಿರೋ ಚಪ್ಪಲಿಗೂ ಅದೇ ಪ್ಲಾನ್ ಬಳಸಿದರು. ಸೂರಿ ಮುಖದಲ್ಲಿ ಗೆಲುವಿನ ಠೇಂಕಾರ.
ಅದಾಗಲೇ ಸುದೀಪ್‍ರಂಥ ಸ್ಟಾರ್ ಜೊತೆ ಕೆಲಸ ಮಾಡಿದ್ದ ಸೂರಿಗೆ ಈ ಸಿನಿಮಾ ದೊಡ್ಡ ಸವಾಲಾಗಿತ್ತು. ಒಂದು ಕಡೆದ ಕಪ್ಪು ಮುಖದ ಬಂಡೆ ಒಡೆವ ಹುಡುಗನಂತಿದ್ದ ವಿಜಯ್ ಹೀರೊ. ಇನ್ನೊಂದು ಕಡೆ ಎಳಸು ಎಳಸು ಮೈ, ಬೊಂಬಿಗೆ ಪ್ಯಾಂಟು ಅಂಗಿ ಹಾಕಿದಂತಿದ್ದ ಯೋಗಿಯನ್ನು ಲೂಸ್ ಮಾದ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಆತನಿಗೂ ಅದು ಮೊದಲ ಸಿನಿಮುತ್ತು. ಇನ್ನು ರಶ್ಮಿ ಕತೆ ಹರೋಹರ….ಮುಹೂರ್ತದ ಇಡ್ಲಿವಡೆಯನ್ನು ಮೊದಲ ಬಾರಿ ತಿಂದ ರಶ್ಮಿ ಕ್ಯಾಮೆರಾ, ಲೈಟ್ ಅಂದರೆ ಸಾಕು ಮೂಲೆ ಸೇರುತ್ತಿದ್ದರು. ಬಿಳಿ ಹಾಗೂ ಕೆಂಪು ಬಟ್ಟೆಯನ್ನು ಇಟ್ಟುಕೊಂಡು ನಿರ್ದೇಶಕ ಸೂರಿ ಇಬ್ಬರಿಗೂ ಸಿಗ್ನಲ್ ನೀಡುತ್ತಿದ್ದರು. ಯೋಗಿ ತಪ್ಪು ತಪ್ಪಾಗಿ ಆಕ್ಟಿಂಗ್ ಮಾಡುತ್ತಿದ್ದರೂ ಅದೇ ಸರಿ ಅನ್ನೋ ರೀತಿ ಇತ್ತು. ಯಾಕಂದ್ರೆ ಆ ಸಿನಿಮಾಕ್ಕೂ ಬೇಕಾಗಿದ್ದೇ `ನ್ಯಾಚುರಲ್’ ಆಕ್ಟಿಂಗ್. ಇದೆಲ್ಲ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಗಾಂಧಿನಗರ ಗಹಗಹಿಸಿ ನಕ್ಕುಬಿಟ್ಟಿತ್ತು.
‘ಕರಿಯಾ ಐ ಲವ್ ಯೂ’ ಅಂತ ನಾಗೇಂದ್ರ ಪ್ರಸಾದ್ ಹಾಡನ್ನು ಬರೆದರು. `ಸಾಲ ಮಾಡಿಯಾದ್ರೂ ತುಪ್ಪ ತಿನ್ನು’ ಅಂತ ವಿ. ಮನೋಹರ್ ಬಾಯಿ ಚಪ್ಪರಿಸಿದರು. ಎರಡೂ ಜನರ ಎದೆಯಲ್ಲಿ ಬೇಯಲು ಕಾಯುತ್ತಿದ್ದವು. ಕೇವಲ 32 ದಿನದಲ್ಲಿ ಚಿತ್ರೀಕರಣ ಮುಗಿಸಿದರೂ ಸಮಸ್ಯೆಗಳ ಮೇಲೆ ಸಮಸ್ಯೆ ಎದುರಾಗುತ್ತಿದ್ದವು. 60 ಲಕ್ಷ ಬಜೆಟ್ಟಿನ ಸಿನಿಮಾ 70 ಲಕ್ಷಕ್ಕೆ ಮುಟ್ಟಿತ್ತು. ನಿರ್ಮಾಪಕ ಸಿದ್ದರಾಜು ಸಾಲದ ಸುಳಿಯಲ್ಲಿ ಸಿಕ್ಕಿಬಿಟ್ಟರು. ವಿಜಿ ಕುಟುಂಬದಲ್ಲಿ ಬಿರುಕು ಎದ್ದಿತು. ಸೊಸೆ ತನ್ನ ತಮ್ಮನನ್ನು ಹೀರೋ ಮಾಡೋಕೆ ದುಡ್ಡೆಲ್ಲಾ ಖಾಲಿ ಮಾಡಿಸುತ್ತಿದ್ದಾಳೆ ಅಂತ ಸಿದ್ದರಾಜು ತಂದೆ-ತಾಯಿ ಮುನಿಸಿಕೊಂಡು ದೂರವಾಗಿಬಿಟ್ಟರು. ಮುಂಗಾರು ಮಳೆಗಿಂತ ಮೊದಲೇ ಸಿನಿಮಾ ರಿಲೀಸ್ ಆಗಬೇಕಿದ್ದರೂ, ಹಣಕಾಸಿನ ಸಮಸ್ಯೆಯಿಂದ ಡಬ್ಬ ಸೇರಿಬಿಟ್ಟಿತ್ತು. ಸಿನಿಮಾ ಬಿಡುಗಡೆಗೆ ವಿತರಕರ್ಯಾರು ಮುಂದೆ ಬರಲೇ ಇಲ್ಲ.
‘ದುನಿಯಾ’ಗೆ ಎಷ್ಟರಮಟ್ಟಿಗೆ ಅಡ್ಡಿ-ಆತಂಕ ಎದುರಾಯ್ತು ಅಂದರೆ, ಕಪ್ಪು ಹುಡುಗನ ಪೋಸ್ಟರ್ ಗಳನ್ನು ಆಟೋಗಳ ಮೇಲೆ ಅಂಟಿಸಲು ಡ್ರೈವರ್ ಹಿಂದೇಟು ಹಾಕಿದ್ರು. ಇದೇನ್ ಸಿನಿಮಾ ರೀ…ಇದ್ಯಾವ ಹೀರೋ ರೀ; ಹೋಗ್ರೀ ಹೋಗ್ರೀ ಅಂದುಬಿಟ್ಟರು. ಸಿನಿಮಾ ರಿಲೀಸ್‍ಗೂ ದುಡ್ಡಿರಲಿಲ್ಲ. ಈ ಸಿನಿಮಾ ರಿಲೀಸ್ ಆಗೋದೇ ಇಲ್ಲ ಅಂತ ದುನಿಯಾ ವಿಜಿ ತಲೆ ಮೇಲೆ ಕೈ ಹೊತ್ತರು. ಆರ್ಥಿಕ ಸಮಸ್ಯೆಯಿಂದಾಗಿ ರಂಗಾಯಣ ರಘು, ಕಿಶೋರ್ ಸೇರಿ ಯಾರೊಬ್ಬರಿಗೂ ಸಂಭಾವನೆ ಕೊಟ್ಟಿರಲಿಲ್ಲ. ಬಿಸಿ ನೀರಿನ ಪಾತ್ರೆಯನ್ನು ಎಷ್ಟು ಹೊತ್ತು ಹಿಡಿದುಕೊಂಡಿರಲು ಸಾಧ್ಯ ? ಅದೊಂದು ದಿನ ಸಿದ್ದರಾಜು ಗುಡುಗಿಬಿಟ್ಟರು. ‘ಏನಾದರಾಗಲಿ…ಈ ಸಿನಿಮಾ ನಮಗೆ ಬೇಡ…ಮಾರಿ ಬಿಡೋಣ….’ ಎರಡು ವರ್ಷದ ಕನಸನ್ನು ಇನ್ನೊಬ್ಬರಿಗೆ ಮಾರಬೇಕು, ಹಗಲು-ರಾತ್ರಿ ಬಸಿದ ಬೆವರಿಗೆ ಸುಟ್ಟ ಸಿಗರೇಟಿನ ಋಣ ಮರೆಯಬೇಕು….ಸೂರಿ ಕುಂತಲ್ಲೇ ಕುಸಿದುಬಿದ್ದರು. ವಿಜಯ್ ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದರು. ದೇಹ ದಿಕ್ಕಾಪಾಲಾಗಿತ್ತು. ಮನಸು ಮೂರಾಬಟ್ಟೆ….ಮುಂದೇನು ? ಅಕ್ಷರ ಬಲ್ಲವರನ್ನು ಜಗನ್ಮಾತೆ ಕೈ ಬಿಡಲ್ಲ, ಕಲೆಯನ್ನು ನೆತ್ತಿ ಮೇಲೆ ಹೊತ್ತುಕೊಂಡವರು ಸರಸ್ವತಿ ಮರೆಯುವುದಿಲ್ಲ…ಎಲ್ಲೋ ಮಳೆ ಬಿದ್ದ ವಾಸನೆ ಸೂರಿ-ಸಿದ್ದರಾಜು-ವಿಜಯ್ ಮೂಗಿಗೆ ಆವರಿಸಿಕೊಂಡಿತು…ಫಿನಿಶ್…
ಮಣ್ಣನ್ನು ನಂಬಿದರೆ ಭೂತಾಯಿ ಕೈ ಬಿಡುವುದಿಲ್ಲ. ಬಣ್ಣದ ಲೋಕ ನಂಬಿದವರನ್ನು ಜನರು ಕೈ ಬಿಡುವುದಿಲ್ಲ. ಅದಕ್ಕೆ ದುನಿಯಾ ಸಾಕ್ಷಿ. ಕೇವಲ 25 ಲಕ್ಷಕ್ಕೆ ಸಿನಿಮಾ ಮಾರಾಟ ಮಾಡ್ತೀವಿ ಅಂದರೂ ಯಾರೊಬ್ಬರೂ ಖರೀದಿಗೂ ಮುಂದಾಗಲಿಲ್ಲ. ಮತ್ತೊಬ್ಬ ಪುಣ್ಯಾತ್ಮ ಕ್ಲೈಮ್ಯಾಕ್ಸ್ ಸೀನ್ ರೀ ಶೂಟ್ ಮಾಡಿದ್ರೆ ನಾನು ತಗೋತೀನಿ ಅಂತಂದರು. ಸೂರಿ ಕೊತ ಕೊತ ಅಂತ ಕುದ್ದು ಹೋದರು. ಹೇಗಿದೆಯೋ ಹಾಗೇ ಇರುತ್ತೆ.ಬೇಕಾದ್ರೆ ತಗೊಳ್ಳಿ.ಸೂರಿ ಹಠಕ್ಕೆ ಕೊನೆಗೆ ಸಿದ್ದರಾಜು ಮಣಿದರು. ಸಿದ್ದರಾಜು ಗೆಳೆಯರೊಬ್ಬರು ಮನೆಯನ್ನೇ ಅಡವಿಟ್ಟು ರಿಲೀಸ್‍ಗೆ ದುಡ್ಡು ಹೊಂದಿಸಿಕೊಟ್ಟರು.
ಕೊನೆಗೂ ಎರಡು ವರ್ಷದ ರಕ್ತ, ಬೆವರು, ಕಣ್ಣೀರು, ಅವಮಾನ, ಮುನಿಸು, ಜಗಳ. ಇವೆಲ್ಲದಕ್ಕೆ ತಿಥಿ ಮಾಡುವ ಸಮಯ ಬಂದಿತ್ತು. ಯಾಕೆಂದರೆ ಆ ದಿನ ದುನಿಯಾ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲು ಕುಂಕುಮ ಹಂಚಿಕೊಂಡು ನಗುತ್ತಿತ್ತು. ಕೆಲವೇ ದಿನಗಳ ಹಿಂದೆ ರಿಲೀಸ್ ಆಗಿದ್ದ ಭಟ್ಟರ ಮುಂಗಾರು ಮಳೆ ಹಣದ ಹೊಳೆ ಹರಿಸುತ್ತಿತ್ತು. ಆದರೆ ಇದು ಪಕ್ಕಾ ಸುಕ್ಕಾ ಸೂರಿ ದುನಿಯಾ. ಅಲ್ಲಿದ್ದ ಮಳೆ, ಪ್ರೇಮ, ಪುಳಕ, ಪ್ರಣಯ, ಕಣ್ಣೀರು, ಕಲರ್ ಕಲರ್ ಡ್ರೆಸ್ಸು, ಮಿಂಚಿಂಗ್ ಕಾರು, ಉಹುಂ, ಯಾವುದೂ ಇರಲಿಲ್ಲ. ಇದ್ದದ್ದು ಕಲ್ಲು ಬಂಡೆಯಂಥ ಶಿವಲಿಂಗು, ಬ್ಲೇಡಿನಿಂದ ಕತ್ತು ಕೊಯ್ಯುವ ಲೂಸ್ ಮಾದ, ಸ್ಲಮ್ಮು, ರಕ್ತ, ಗಬ್ಬುನಾತ, ಹಸಿದ ಹೊಟ್ಟೆ, ವಿಕೃತ ಲೋಕ, ಹಿಜಡಾ ಮುಖ, ಮಚ್ಚು, ಕೊಚ್ಚು, ನಡುವೊಂದು ಒಲವೇ ಜೀವನ ಸಾಕ್ಷಾತ್ಕಾರ. ಹೊಳಪು.
ಜನರು ಈ ಸಿನಿಮಾ ನೋಡುತ್ತಾರಾ? ನಮ್ಮನ್ನು ಗೆಲ್ಲಿಸುತ್ತಾರಾ? ಹೊಸ ರೀತಿಯ ಕಥನಕ್ಕೆ ಬೆನ್ನು ತಟ್ಟುತ್ತಾರಾ? ಸೂರಿ ಮನದಲ್ಲಿ ಸಾವಿರಾರು ಸರಪಣಿ. ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳಬೇಕಾಗಿದ್ದು ಕನ್ನಡದ ಪ್ರೇಕ್ಷಕ ಪ್ರಭು. ಇನ್ನೊಂದು ಕಡೆ ಓನ್ಲಿ ವಿಜಯ್ ದೇವರ ಮುಂದೆ ಕುಂತು ತುಪ್ಪದ ದೀಪ ಹಚ್ಚುತ್ತಿದ್ದರು. ಹತ್ತತ್ತು ವರ್ಷ ಎಲ್ಲೊ ಬಿದ್ದು ಇನ್ನೆಲ್ಲೊ ಎದ್ದು, ಯಾರಿಗೊ ಗುದ್ದಿ, ಇನ್ನಾರಿಗೊ ತಲೆಬಾಗಿ, ಸಾಲ ಮಾಡಿ, ರಕ್ತ ಸುರಿಸಿ ಈಗ ನಾಯಕನಾಗುವ ಜಾಗಕ್ಕೆ ಬಂದಿದ್ದೀನಿ. ಕುಲದೇವತೆ ಎರಡೂ ಕೈಯಿಂದ ಆಶೀರ್ವಾದ ಮಾಡುತ್ತಾಳಾ? ಒಂದು ಕ್ಷಣ ಕಣ್ಣು ಮುಚ್ಚಿ ಎದ್ದರು. ಅಷ್ಟೇ ದುನಿಯಾದ ಮೊದಲ ಶೋ ಮುಗಿದ ಮರುಕ್ಷಣವೇ ಒಂದು ಫೋನ್ ಬಂತು. ‘ವಿಜಿ ಅಣ್ಣಾ ನೀವು ಗೆದ್ದು ಬಿಟ್ಟಿರಿ’ ಮತ್ತೊಂದು ಕಡೆ ಸೂರಿಗೂ ಇನ್ಯಾವುದೋ ಊರಿಂದ ರಿಂಗ್ ಆಯ್ತು. ‘ಜನರು ಹುಚ್ಚೆದ್ದು ಹೋಗಿದ್ದಾರೆ ಡೈರೆಕ್ಟರ್ರೇ….ಕೆಮ್ಮಂಗಿಲ್ಲ ಬಿಡ್ರಿ….’
ಬೆಂಗಳೂರಿನ ಮೆಜೆಸ್ಟಿಕ್ ಥಿಯಟರ್‍ನಲ್ಲಿ ದುನಿಯಾ ತಂಡ ಬೀಡು ಬಿಟ್ಟಿತ್ತು. ಅದೇ ಪ್ರಮುಖ ಚಿತ್ರಮಂದಿರದಲ್ಲಿ ದುನಿಯಾ ಬಿಡುಗಡೆಯಾಗಿತ್ತು. ಆ ದಿನ, ಆ ಕ್ಷಣ, ಇಡೀ ತಂಡವೇ ಅಲ್ಲಿ ನೆರೆದಿತ್ತು. ಮೊದಲ ಶೋ ಮುಗಿದು ಹೊರ ಬಂದ ಜನರ ಕಣ್ಣಲ್ಲೇ ಕಹಳೆಯ ಕೂಗು ಕೇಳಿಸುತ್ತಿತ್ತು. ತಂಡದ ಪ್ರತಿಯೊಬ್ಬರ ಮುಖದಲ್ಲಿ ನಿಟ್ಟುಸಿರಿನ ಸಮಾಧಾನ, ಕಣ್ಣಲ್ಲಿ ಕಂಡು ಕಾಣದಂತಿದ್ದ ಹನಿಹನಿ.
ಎರಡೂವರೆ ವರ್ಷದ ತಪಸ್ಸಿಗೆ ಜನರು ಕೇವಲ ಎರಡೂವರೆ ಗಂಟೆಯಲ್ಲಿ ತೀರ್ಪು ಕೊಟ್ಟು ಬಿಟ್ಟಿದ್ದರು. ಅಲ್ಲಿಂದ ಸೂರಿ…ಸುಕ್ಕಾ ಸೂರಿಯಾದರು, ವಿಜಯ್ ದುನಿಯಾ ವಿಜಯ್ ನಾಮಾಂಕಿತರಾದರು, ಯೋಗಿ ಈಗಲೂ ಲೂಸ್ ಮಾದನೇ…ಒಂದು ಸಿನಿಮಾ ನೂರಾರು ಬದುಕಿಗೆ ರತ್ನ ಖಚಿತ ಸಿಂಹಾಸನ ಕೊಟ್ಟು ಬಿಟ್ಟಿತು. ಕೊನೆಗೊಂದು ಮಾತು. ಸಿನಿಮಾ ಮಂದಿಯನ್ನು ನಂಬಿ ಮೋಸ ಹೋದವರು ಇರಬಹುದು. ಅದರೆ ಸಿನಿಮಾ ರಂಗ ಅನ್ನೋ ದೇವಸ್ಥಾನ ನಂಬಿ ಹಾಳಾದವರು ಇತಿಹಾಸದಲ್ಲೇ ಇಲ್ಲ…ಆ ಅದ್ಭುತ ಅನನ್ಯ ಅವಿಸ್ಮರಣೀಯ ಸಾಕ್ಷಿ ಕಣ್ಣ ಮುಂದಿದೆ. ಅದೇ ದುನಿಯಾ….ಬೆಳ್ಳಿ ಪರದೆಗೆ ಸಲಾಂ ಹೇಳದದಿದ್ದರೆ ನಾವೇ ಪಾಪಿಗಳು ಅಲ್ಲವೇ?