ಮುದ್ದು ಮನಸೇ ಖ್ಯಾತಿಯ ಅನಂತ್ ಶೈನ್ ನಿರ್ದೇಶನದ ಎರಡನೇ ಸಿನಿಮಾ ‘ವಿರಾಟ ಪರ್ವ’. ಸಿನಿಮಾ ಪೋಸ್ಟರ್ ನಿಂದ ಹುಟ್ಟಿಸಿದ್ದ ಕ್ಯೂರಿಯಾಸಿಟಿ ಒಂದು ರೀತಿಯಲ್ಲಿತ್ತು. ಸಿನಿಮಾ ಹೀಗಿರಬಹುದಾ ಎಂಬ ಪ್ರೇಕ್ಷಕರ ಅಂದಾಜುಗಳು ಅದಕ್ಕೆ ತಕ್ಕದಾಗಿತ್ತು. ಆದ್ರೆ ಚಿತ್ರತಂಡ ಇಂದು ಟೀಸರ್ ರಿಲೀಸ್ ಮಾಡಿದ್ದು, ಪ್ರೇಕ್ಷಕನ ತಲೆಯಲ್ಲಿದ್ದ ಊಹೆಯನ್ನು ಉಲ್ಟಾ ಮಾಡಿದೆ. ಕಥೆ ಕೇಳಿ ಸಾಫ್ಟ್ ಥಿಂಕಿಂಗ್ ಮಾಡಿದ್ದ ಪ್ರೇಕ್ಷಕ ಟೀಸರ್ ನೋಡಿ, ಈ ಲೆವೆಲ್ ಗೆ ಸಿನಿಮಾನ ಅಂತ ಆಶ್ಚರ್ಯಚಕಿತನಾಗುವಂತೆ ಮಾಡಿದೆ.
‘ವಿರಾಟ ಪರ್ವ’ ಟೀಸರ್ ಇಂದು ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ. ಟೀಸರ್ ನಲ್ಲಿ ಮೊದಲಿಗೆ ಧರ್ಮ-ಅಧರ್ಮದ ಬಗ್ಗೆ ಬರುವ ಶ್ಲೋಕವೇ ಜನರ ಕಿವಿಯನ್ನು, ಮನಸ್ಸನ್ನು ತನ್ನತ್ತ ಸೆಳೆಯುವಂತೆ ಮಾಡಿಕೊಳ್ಳುತ್ತಿದೆ. ಆ ನಂತರದಲ್ಲಿ ಬರುವ ನಮ್ಗೆ ಯಾರು ಕೇಡು ಬಗಿತಾರೋ ಅವ್ರಿಗೆ ಖೆಡ್ಡಾ ತೋಡಿದ್ರೆ ಅದು ಅಧರ್ಮವೇ ಅಲ್ಲ ಎಂಬ ಮಾತು ಪ್ರೇಕ್ಷಕನ ಮನಸ್ಸು ಹೌದು ಎನ್ನುವಂತೆ ಮಾಡುತ್ತದೆ.
ಆಕ್ಸಿಡೆಂಟ್, ಕೊಲೆ, ಗನ್ನು, ಹಾಸ್ಪಿಟಲ್, ಹೊಡೆದಾಟ, ಕಾಡಿನ ಚಿತ್ರಣ, ಭಯ ಪಡುವ ಮಗು, ಯಾರದ್ದೋ ಕೊಲೆ, ನಂಬಿಕೆ, ಸಂಬಂಧ, ಸಾವು ಎಲ್ಲವೂ ಟೀಸರ್ ನಲ್ಲಿ ಅಡಗಿದ್ದು ಕುತೂಹಲವನ್ನು ಕೆರಳಿಸಿದೆ. ನೈಜ ಘಟನೆಗಳ ಆಧಾರಿತ ಅಂತ ಸಬ್ ಟೈಟಲ್ ನಲ್ಲಿ ಹೇಳಿರುವಂತೆ ಯಾರ ಕಥೆಗಳು ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಒಂದು ಸಲ ಟೀಸರ್ ನೋಡಿದಾಗಲೇ ಎದೆ ಝಲ್ ಎನ್ನುತ್ತೆ. ಆದ್ರೂ ಆ ಟೀಸರ್ ನಲ್ಲಿ ಏನೋ ಇದೆ ಎಂಬುದು ಮನಸ್ಸಿಗೆ ನಾಟಿ ಮತ್ತೆ ಮತ್ತೆ ನೋಡುವಂತೆ ಮಾಡುತ್ತಿದೆ. ಟೀಸರ್ ಇಷ್ಟರ ಮಟ್ಟಿಗೆ ಪ್ರೇಕ್ಷಕನ ಮನಸ್ಸೊಳಗೆ ಜಾಗ ಮಾಡಿಕೊಂಡು ಕುಳಿತಿರುವುದನ್ನು ನೊಡಿದ್ರೆ ಸಿನಿಮಾದ ನಿರೀಕ್ಷೆ ಈಗಿದ್ದಕ್ಕಿಂತ ಹೆಚ್ಚಾದಂತೆ ಕಾಣುತ್ತಿದೆ.
ಎಸ್ ಆರ್ ಮೀಡಿಯಾ ಪ್ರೊಡಕ್ಷನ್ ಅಡಿಯಲ್ಲಿ ಸುನಿಲ್ ರಾಜ್ ನಿರ್ಮಾಣ ಮಾಡುತ್ತಿರುವ ಚೊಚ್ಚಲ ಚಿತ್ರ ‘ವಿರಾಟಪರ್ವ’ಗೆ ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜನೆ, ಶಿವು ಬಿಕೆ ಶಿವಸೇನಾ ಛಾಯಾಗ್ರಹಣ ಮಾಡುತ್ತಿದ್ದಾರೆ. ಅರುಗೌಡ, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.