ಕನ್ನಡ ಚಿತ್ರರಂಗದಲ್ಲಿ ಕಳೆದ ಐದಾರು ವರ್ಷಗಳಿಂದ ಸಾಹಿತಿಯಾಗಿ, ಸಂಗೀತ ಸಂಯೋಜಕನಾಗಿ ಕೆಲಸ ಮಾಡಿರುವ ಮಂಜುಕವಿ ಈಗ ಚಲನಚಿತ್ರ ನಿರ್ದೇಶನಕ್ಕಿಳಿದಿದ್ದಾರೆ. ಹಳ್ಳಿ ಸೊಗಡಿನಲ್ಲಿ ನಡೆಯುವ ಮಾಸ್ ಲವ್‍ಸ್ಟೋರಿ ಹೊಂದಿರುವ ‘ಟೆಂಪರ್’ ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಮುಹೂರ್ತ ದೃಶ್ಯಕ್ಕೆ ನಿರ್ದೇಶಕ ನಂದಕಿಶೋರ್ ಕ್ಲ್ಯಾಪ್ ಮಾಡಿದರೆ ನಟ ತಬಲಾನಾಣಿ ಕ್ಯಾಮರಾ ಚಾಲನೆ ಮಾಡಿದರು. ಇದೇ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಆರ್ಯನ್ ಸೂರ್ಯ ಹಾಗೂ ಕಾಶಿಮಾ ಈ ಚಿತ್ರದ ನಾಯಕ-ನಾಯಕಿ. ತಬಲಾ ನಾಣಿ ನಾಯಕನ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಪತ್ರಕರ್ತ ಧನು ಯಲಗಚ್ ನಾಯಕನ ಮತ್ತೊಬ್ಬ ಸ್ನೇಹಿತನಾಗಿಯೂ ಬಣ್ಣ ಹಚ್ಚುತ್ತಿದ್ದಾರೆ. ಪವನ್ ಈ ಚಿತ್ರದಲ್ಲಿ ಒಬ್ಬ ಮೂಗ ಹಾಗೂ ನಾಯಕನ ಮತ್ತೊಬ್ಬ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ. ಎಂ.ಪಿ. ಸಿನಿ ಕ್ರಿಯೇಷನ್ಸ್ ಮೂಲಕ ಡಾ.ಹೆಚ್.ಎಂ.ರಾಮಚಂದ್ರ ಹಾಗೂ ವಿ.ವಿನೋದ್‍ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಿಸುತ್ತಿದ್ದಾರೆ.
ಮುಹೂರ್ತದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಮಂಜುಕವಿ, ಈ ಚಿತ್ರದ ನಾಯಕನಿಗೆ ಚಿಕ್ಕವನಾದಾಗಿನಿಂದ ಯಾವುದೇ ವಿಷಯಕ್ಕಾದರೂ ಶೀಘ್ರವೇ ಕೋಪಗೊಳ್ಳುವಂತಹ ಗುಣವಿರುತ್ತದೆ. ಒಂಥರಾ ಶಾರ್ಟ್ ಟೆಂಪರ್. ಹಾಗಾಗಿ ಅದನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಸೆಲೆಕ್ಟ್ ಮಾಡಿಕೊಂಡಿದ್ದೇವೆ. ಮಜಾ ಟಾಕೀಸ್ ಖ್ಯಾತಿಯ ಪವನ್ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ. ನಂಜನಗೂಡು, ಮೈಸೂರು, ಮಡಿಕೇರಿ, ಮಂಡ್ಯ ಸುತ್ತಮುತ್ತ 45 ದಿನಗಳ ಶೂಟಿಂಗ್ ಪ್ಲಾನ್ ಹಾಕಿಕೊಂಡಿದ್ದೇವೆ ಎಂದು ಹೇಳಿದರು.
ಖಳನಟ ಬಲ ರಾಜವಾಡಿ ಮಾತನಾಡಿ, ನಾನು ಹಳ್ಳಿಯ ಪ್ರಮುಖ. ಇಬ್ಬರು ತಮ್ಮಂದಿರೂ ದುಷ್ಟರು. ಆರಂಭದಲ್ಲಿ ಸಾಧ್ವಿಕನಾಗಿ ತೋರಿಸಿಕೊಂಡರೂ ಕೊನೆಯಲ್ಲಿ ತಮ್ಮಂದಿರು ಕೆಟ್ಟವರಾಗಲು ನಾನೇ ಕಾರಣ ಅಂತ ಗೊತ್ತಾಗುತ್ತೆ ಎಂದು ಹೇಳಿದರು.
ನಟ ತಬಲಾನಾಣಿ ಮಾತನಾಡಿ, ನಾನು ನಾಯಕನ ತಂದೆ. ಮಕ್ಕಳಿಗೆ ಜನ್ಮ ಕೊಡಬಹುದು. ಆದರೆ ಹಣೆಬರಹ ಬರೆಯಲಿಕ್ಕಾಗುತ್ತಾ ಎಂಬ ಮನೋಭಾವನೆಯುಳ್ಳವನು. ಮಕ್ಕಳನ್ನು ಚಿಕ್ಕವರಿದ್ದಾಗಿನಿಂದಲೇ ಸುಸಂಸ್ಕೃತರಾಗಿ ಬೆಳೆಸದಿದ್ದರೆ ಅವರು ದೊಡ್ಡವರಾದ ಮೇಲೆ ಅದರ ಪರಿಣಾಮ ಏನಾಗುತ್ತದೆ ಎಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು.
ನಾಯಕಿ ಕಾಶಿಮಾ ಮಾತನಾಡಿ, ಚಿತ್ರದಲ್ಲಿ ನಾನು ಊರಗೌಡನ ಮಗಳು. ಮೆಡಿಕಲ್ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದೇನೆ. ಗ್ಯಾರೇಜ್‍ನಲ್ಲಿ ಕೆಲಸ ಮಾಡುವ ನಾಯಕನನ್ನು ಲವ್ ಮಾಡಿದ ನಂತರ ಏನಾಗುತ್ತೆ ಅನ್ನೋದು ಈ ಚಿತ್ರದಲ್ಲಿದೆ ಎಂದು ಹೇಳಿದರು.
ಈ ಚಿತ್ರದಲ್ಲಿ 4 ಹಾಡುಗಳಿದ್ದು ಆರ್. ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ತಬಲಾನಾಣಿ ಸಂಭಾಷಣೆ, ಆರ್.ಕೆ.ಶಿವಕುಮಾರ್ ಅವರ ಕ್ಯಾಮರಾ ವರ್ಕ್ ಈ ಚಿತ್ರಕ್ಕಿದೆ. ಯತಿರಾಜ್ ಹಾಗೂ ದಿನೇಶ್ ಊರಗೌಡನ ಇಬ್ಬರು ದುಷ್ಟ ಸಹೋದರರಾಗಿ ನಟಿಸುತ್ತಿದ್ದಾರೆ. ಬಿ.ಎಸ್. ಕೆಂಪರಾಜ್ ಈ ಚಿತ್ರದ ಸಂಕಲನಕಾರರು.