ಹೆಣ್ಣಿನ ಸೂಕ್ಷ್ಮ ತಲ್ಲಣಕ್ಕೆ ಕಣ್ಣಾಗುವ ‘ರಂಗನಾಯಕಿ’!

Public TV
2 Min Read
RANGANAYAKI

ಬೆಂಗಳೂರು: ಗೋವಾ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗೋ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದ ಚಿತ್ರ ರಂಗನಾಯಕಿ. ನಮ್ಮ ನಡುವಿದ್ದೂ ನಾವ್ಯಾರೂ ಹೆಚ್ಚಾಗಿ ಗಮನ ಹರಿಸದ ಸೂಕ್ಷ್ಮ ಕಥೆಗಳತ್ತಲೇ ಹೆಚ್ಚು ಒತ್ತು ನೀಡುವವರು ನಿರ್ದೇಶಕ ದಯಾಳ್ ಪದ್ಮನಾಭನ್. ಅವರು ನಿರ್ಭಯಾ ಅತ್ಯಾಚಾರ ಪ್ರಕರಣದಂಥಾ ಘಟನೆಯನ್ನು ಬೇಸ್ ಆಗಿಟ್ಟುಕೊಂಡು ಸಿನಿಮಾ ನಿರ್ದೇಶನ ಮಾಡುತ್ತಾರೆಂಬ ಸುದ್ದಿ ಜಾಹೀರಾದ ಕ್ಷಣದಿಂದಲೇ ಗಾಢವಾದ ಕುತೂಹಲ ಮೂಡಿಕೊಂಡಿತ್ತು. ಅದಕ್ಕೆ ತಕ್ಕುದಾದ ವಿಚಾರಗಳೇ ಜಾಹೀರಾಗುತ್ತಾ ಸಾಗಿದ್ದರಿಂದಾಗಿ ರಂಗನಾಯಕಿಯತ್ತ ಎಲ್ಲ ವರ್ಗಗಳ ಪ್ರೇಕ್ಷಕರೂ ಕೂಡಾ ಚಿತ್ರ ನೆಟ್ಟಿದ್ದರು. ಅಂಥಾ ಅಗಾಧ ನಿರೀಕ್ಷೆ, ಕುತೂಹಲದ ಒಡ್ಡೋಲಗದಲ್ಲಿಯೇ ಈ ಚಿತ್ರವೀಗ ತೆರೆ ಕಂಡಿದೆ. ಹೆಣ್ಣೊಬ್ಬಳ ಸೂಕ್ಷ್ಮ ತಲ್ಲಣಗಳಿಗೆ ಕಣ್ಣಾಗುವಂತೆ, ಅದರ ಆಚೀಚೆಗೂ ಗಹನವಾದ ಕಥೆಯನ್ನೊಳಗೊಂಡು ಈ ಚಿತ್ರ ಪ್ರತೀ ಪ್ರೇಕ್ಷಕರನ್ನೂ ಕಾಡುವಂತೆ ಮೂಡಿ ಬಂದಿದೆ.

Ranganayaki 12 copy 1

ಹೆಣ್ಣಿನ ಮೇಲೆ ನಿರಂತರವಾಗಿ ಒಂದಿಲ್ಲೊಂದು ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದಂಥಾ ಘೋರ ಆಘಾತವೂ ಹೆಣ್ಣಿನ ಬದುಕನ್ನು ಕಂಗಾಲು ಮಾಡಿ ಹಾಕುತ್ತಿವೆ. ಇಂಥಾ ಭೀಕರ ಆಘಾತಕ್ಕೀಡಾದ ಹೆಣ್ಣೊಬ್ಬಳು ಈ ಸಮಾಜವನ್ನು, ಇಲ್ಲಿನ ಪಲ್ಲಟಗಳನ್ನು ಹೇಗೆಲ್ಲ ಎದುರುಗೊಳ್ಳ ಬಹುದೆಂಬ ಕಾಲ್ಪನಿಕ ಕಥೆಯನ್ನು ನಿರ್ದೇಶಕ ದಯಾಳ್ ವಾಸ್ತವಿಕ ನೆಲೆಗಟ್ಟಿನಲ್ಲಿ ನಿರೂಪಿಸಿದ್ದಾರೆ. ಅದು ಅತ್ಯಾಚಾರಕ್ಕೀಡಾದ ಹೆಣ್ಣೊಬ್ಬಳ ಆತ್ಮ ಮರ್ಮರ. ನಮ್ಮದೇ ಸಮಾಜದಲ್ಲಿ ನಮ್ಮ ನಡುವಿದ್ದರೂ ಒಳಗಿವಿಗೆ ಮಾತ್ರವೇ ಕೇಳುವಂಥಾ ಆ ರೀತಿಯ ಮಿಡಿತಗಳನ್ನು ದಯಾಳ್ ದೊಡ್ಡ ಸ್ವರದಲ್ಲಿ, ತಣ್ಣಗಿನ ಶೈಲಿಯಲ್ಲಿ ನಿರೂಪಿಸಿದ ರೀತಿಯೇ ಅದ್ಭುತ.

Ranganayaki 9 copy 1

ಈವರೆಗೂ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚುತ್ತಾ ಬಂದಿದ್ದ ಅದಿತಿ ಪ್ರಭುದೇವ ಇಲ್ಲಿ ಅನಾಥ ಹುಡುಗಿಯಾಗಿ, ಅತ್ಯಾಚಾರದಂಥಾ ಆಘಾತಕ್ಕೀಡಾದ ನಂತರದ ಚಹರೆಯಲ್ಲಿಯೂ ನಟಿಸಿರೋ ರೀತಿಯನ್ನು ಯಾರೇ ಆದರೂ ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ. ಆಕೆ ತಬ್ಬಲಿತನವನ್ನೇ ಬೆನ್ನಿಗಿಟ್ಟುಕೊಂಡಂತಿರೋ ಅನಾಥೆ. ಈ ಕಾರಣದಿಂದಲೇ ಆಸುಪಾಸಿನಲ್ಲಿ ಸುಳಿದಾಡುವವರನ್ನೆಲ್ಲ ತನ್ನವರೆಂಬಂಥಾ ಪ್ರೀತಿಯಿಂದ ಜೀವಿಸುತ್ತಾಳೆ. ಅನಾಥ ಪ್ರಜ್ಞೆಯನ್ನು ಮೀರಿಕೊಳ್ಳಲು ಹಚ್ಚಿಕೊಂಡಿದ್ದ ಸಂಗೀತದ ಗುಂಗೇ ಬದುಕು ರೂಪಿಸುತ್ತೆ. ಬೆಳದ ಮೇಲೆ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸಿಸುತ್ತಾ, ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಾ ಒಂದಷ್ಟು ಮಂದಿಯ ಪುಟ್ಟ ಪ್ರಪಂಚದಲ್ಲಿ ಹಾಯಾಗಿಯೇ ಇರುತ್ತಾಳೆ.

RANGANAYAKI DAYAL

ಇಂಥಾ ನಾಯಕಿಗೆ ನಾಯಿಗಳೊಂದಷ್ಟು ಮುಗಿಬಿದ್ದು ಕಾಡಿಸುವಂತೆ ಆಗಾಗ ಕನಸು ಬೀಳುತ್ತಿರುತ್ತೆ. ಒಂದಷ್ಟು ಕಾಲದ ನಂತರ ಅದು ನಿಜವೂ ಆಗುತ್ತೆ. ಸಾಮಾನ್ಯವಾಗಿ ಅತ್ಯಾಚಾರದಂಥಾ ಆಘಾತದ ನಂತರ ಬದುಕಿಗೆ ಅರ್ಥವಿಲ್ಲ ಎಂಬಂಥಾ ವಾತಾವರಣವಿದೆ. ಆದರೆ ಇಲ್ಲಿನ ಕಥೆ ಅಲ್ಲಿಂದಲೇ ಆರಂಭವಾಗುತ್ತೆ. ರಂಗನಾಯಕಿಯ ಮುಂದೆ ನಿಜವಾದ ಪ್ರೀತಿ, ಭ್ರಮೆಗಳ ವಾಸ್ತವ ಜಗತ್ತು ಬಿಚ್ಚಿಕೊಳ್ಳಲಾರಂಭಿಸುತ್ತೆ. ಅದಿತಿ ಪ್ರಭುದೇವ ಅವರಂತೂ ಈ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಅವರ ಗೆಳತಿಯಾಗಿ ಲಾಸ್ಯಾ ನಾಗರಾಜ್ ಅವರದ್ದೂ ಗಮನಾರ್ಹ ಅಭಿನಯ.

ಇನ್ನುಳಿದಂತೆ ತ್ರಿವಿಕ್ರಮ್, ಎಂ ಜಿ ಶ್ರೀನಿವಾಸ್, ಪೊಲೀಸ್ ಅಧಿಕಾರಿಯಾಗಿ ನಟಿಸಿರೋ ಚಂದ್ರಚೂಡ್ ಮತ್ತು ನ್ಯಾಯಾಧೀಶರ ಪಾತ್ರಕ್ಕೆ ಜೀವ ತುಂಬಿರೋ ಸುಚೇಂದ್ರಪ್ರಸಾದ್ ಸೇರಿದಂತೆ ಎಲ್ಲರೂ ಅವರವರ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ದಯಾಳ್ ಪದ್ಮನಾಭನ್ ಅಷ್ಟೊಂದು ಅಚ್ಚುಕಟ್ಟಾಗಿ, ಎಲ್ಲರೆದೆಗೂ ತಾಕುವಂತೆ, ಒಂದರೆ ಕ್ಷಣವೂ ಬೋರು ಹೊಡೆಸದಂತೆ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಈ ಮೂಲಕ ನಿರ್ಮಾಪಕ ಎಸ್ ವಿ ನಾರಾಯಣ್ ಅವರ ಶ್ರಮವೂ ಸಾರ್ಥಕಗೊಂಡಿದೆ. ಒಟ್ಟಾರೆಯಾಗಿ ಇದೊಂದು ಅಪರೂಪದ ಚಿತ್ರ. ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಿತ್ರವೂ ಹೌದು.

ರೇಟಿಂಗ್: 4/5

Share This Article
Leave a Comment

Leave a Reply

Your email address will not be published. Required fields are marked *