ಬೆಂಗಳೂರು: ಸುನೀಲ್ ಆಚಾರ್ಯ ನಿರ್ದೇಶನದ ಚೊಚ್ಚಲ ಚಿತ್ರ ರಾಂಧವ. ಈಗಾಗಲೇ ಈ ಸಿನಿಮಾದ ಎರಡು ಟ್ರೈಲರ್‍ಗಳು ಹೊರ ಬಂದಿವೆ. ಅದರಲ್ಲಿನ ಮೇಕಿಂಗ್, ದೃಶ್ಯಗಳಲ್ಲಿನ ಅಚ್ಚುಕಟ್ಟುತನ, ಹೊಸಾ ಥರದ ಕಥೆಯ ಸುಳಿವಿನ ಮೂಲಕವೇ ಈ ಟ್ರೈಲರ್‍ಗಳು ಪ್ರೇಕ್ಷಕರ ವಲಯದಲ್ಲಿ ಮೆರೆಸಿವೆ. ಇದು ನಿರ್ದೇಶಕ ಸುನೀಲ್ ಮತ್ತು ನಾಯಕ ಭುವನ್ ಸೇರಿದಂತೆ ಚಿತ್ರತಂಡದ ಬಹುತೇಕರ ಪಾಲಿಗೆ ಮೊದಲ ಚಿತ್ರ. ಆದರೆ ರಾಂಧವ ಪಳಗಿದ ತಂಡದಿಂದ ರೂಪುಗೊಂಡಂತೆ ಮೂಡಿ ಬಂದಿರೋದರ ಹಿಂದೆ ಅಗಾಧ ಪರಿಶ್ರಮವಿದೆ.
ಅಂಥಾ ವೃತ್ತಿಪರತೆ ಮತ್ತು ಕ್ರಿಯಾಶೀಲ ಕಾರ್ಯವೈಖರಿ ರಾಂಧವ ಚಿತ್ರದ ಎರಡು ಟ್ರೈಲರ್ ಮೂಲಕವೇ ಜಾಹೀರಾಗಿದೆ. ಅಖಂಡ ಎರಡು ವರ್ಷಗಳ ಶ್ರಮ ಮತ್ತು ಆ ಹಾದಿಯಲ್ಲಿ ಎದುರಾದ ಸವಾಲುಗಳೇ ಈ ಸಿನಿಮಾ ಮತ್ತಷ್ಟು ಅಂದವಾಗಿ ಮೂಡಿ ಬರಲು ಸಾಧ್ಯವಾಗಿಸಿದೆ ಅನ್ನೋದು ಚಿತ್ರತಂಡದ ಅನಿಸಿಕೆ. ಯಾವ ಗಿಮಿಕ್ಕುಗಳಿಗೂ ಆಸ್ಪದವಿಲ್ಲದೇ ಕೇವಲ ಗುಣಮಟ್ಟದ ಮೂಲಕ ಮಾತ್ರವೇ ಸದ್ದು ಮಾಡೋ ಚಿತ್ರಗಳು ಸೋತ ಇತಿಹಾಸವಿಲ್ಲ. ಈ ನಿಟ್ಟಿನಲ್ಲಿ ಹೇಳೋದಾದರೆ, ರಾಂಧವನ ಮುಂದೆ ಪುಷ್ಕಳವಾದೊಂದು ಗೆಲುವು ನಗುತ್ತಿದೆ.
ರಾಂಧವ ಶುರುವಾಗಿ ಎರಡು ವರ್ಷಗಳ ಕಾಲ ಚಿತ್ರೀಕರಣ ನಡೆಸಿಕೊಂಡಿದೆ. ಆರಂಭ ಕಾಲದಲ್ಲಿ ಈ ಚಿತ್ರ ಯಾಕಿಷ್ಟು ತಡವಾಗುತ್ತಿದೆ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಆದರೆ ಇದರ ಎರಡು ಟ್ರೈಲರ್ ಗಳು ಬಿಡುಗಡೆಯಾದ ನಂತರ ತಾನೇ ತಾನಾಗಿ ಜನ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದಾರೆ. ಯಾಕೆಂದರೆ ಆ ಎರಡು ವರ್ಷಗಳ ಕಾಲ ಚಿತ್ರತಂಡ ಅದೆಂಥಾ ಶ್ರಮ ಹಾಕಿದೆ ಅನ್ನೋದು ಈ ಟ್ರೈಲರ್ ಗಳ ಮೂಲಕವೇ ಅನಾವರಣಗೊಂಡಿತ್ತು. ಈ ಮೂಲಕ ರಾಂಧವ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸೋ ನಿರೀಕ್ಷೆಗಳೂ ಎಲ್ಲೆಡೆ ತುಂಬಿಕೊಂಡಿದೆ.