ಟ್ರೇಲರ್ ಮೂಲಕ ಆರ್ಭಟಿಸಿದ ಒಡೆಯ ಗಜೇಂದ್ರ!

Public TV
2 Min Read
Odeya

ಸಂದೇಶ್ ನಾಗರಾಜ್ ಅರ್ಪಿಸಿ, ಎನ್. ಸಂದೇಶ್ ನಿರ್ಮಾಣಮಾಡಿರುವ ಒಡೆಯ ಚಿತ್ರ ಇದೇ ಡಿಸೆಂಬರ್ 12ರಂದು ಬಿಡುಗಡೆಯಾಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರೋ ಈ ಚಿತ್ರದ ಬಗ್ಗೆ ಈಗಾಗಲೇ ಅಭಿಮಾನದಾಚೆಗೂ ಎಲ್ಲ ವರ್ಗದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಇದರ ಬಗೆಗಿನ ಹೆಚ್ಚಿನ ಸುದ್ದಿಗಳಿಗಾಗಿ ಅಭಿಮಾನಿಗಳೆಲ್ಲ ಕಾದು ಕೂತಿರುವಾಗಲೇ ಟ್ರೇಲರ್ ಬಿಡುಗಡೆ ಮಾಡೋದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಇದೀಗ ಖುದ್ದ ದರ್ಶನ್ ಅವರೇ ಒಡೆಯನ ಟ್ರೇಲರ್ ಅನ್ನು ಅನಾವರಣಗೊಳಿಸಿದ್ದಾರೆ.

ಪ್ರೀತಿಯ ಮಾತುಗಳೊಂದಿಗೆ ಅಭಿಮಾನಿಗಳನ್ನು ತಾಕಿದ್ದಾರೆ. ‘ನಮ್ಮ ಸಂದೇಶ್ ಕಂಬೈನ್ಸ್ ಬ್ಯಾನರ್ ನಲ್ಲಿ ಮೂಡಿಬಂದಿರುವ ಒಡೆಯ ಚಿತ್ರದ ಟ್ರೇಲರ್ ಅನ್ನು ನಿಮ್ಮ ಮಡಿಲಿಗೆ ಅರ್ಪಿಸಿದ್ದೇವೆ. ನೋಡಿ ಹರಸಿ’ ಅಂತ ಒಡೆಯ ದರ್ಶನ್ ಪ್ರೇಕ್ಷಕರನ್ನು ಕೇಳಿಕೊಂಡಿದ್ದಾರೆ. ಹೀಗೆ ಬಿಡುಗಡೆಯಾಗಿರುವ ಟ್ರೇಲರ್ ನಿರೀಕ್ಷೆಯಂತೆಯೇ ಚೆಂದಗೆ ಮೂಡಿ ಬಂದಿದೆ. ದರ್ಶನ್ ಗಜೇಂದ್ರನಾಗಿ ಅಕ್ಷರಶಃ ಮಿಂಚಿದ್ದಾರೆ. ಇದರಲ್ಲಿನ ಫ್ಯಾಮಿಲಿ ಬೆಸುಗೆ, ಮಾಸ್ ಸನ್ನಿವೇಶಗಳು, ಕಾಮಿಡಿ ಸೇರಿದಂತೆ ಎಲ್ಲವೂ ನೋಡುಗರಿಗೆ ಕಚಗುಳಿ ಇಡುವಂತಿವೆ. ಇದರೊಂದಿಗೆ ಅಭಿಮಾನಿಗಳೆಲ್ಲರ ಬಹು ಕಾಲದ ಆಸೆಯೂ ಸಾಕಾರಗೊಂಡಿದೆ.

ಒಡೆಯ ಚಿತ್ರದ ವಿಚಾರದಲ್ಲಿ ಒಂದೇ ಫೋಟೋ ಕೂಡಾ ಜಾಹೀರಾಗದಂತೆ ಎಚ್ಚರ ವಹಿಸಲಾಗಿತ್ತು. ಈ ಕಾರಣದಿಂದಲೇ ದರ್ಶನ್ ಲುಕ್ಕು ಹೇಗಿದೆ ಎಂಬುದರ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದರು. ಪೋಸ್ಟರ್ ಮೂಲಕ ಅದು ಜಾಹೀರಾಗಿದ್ದರೂ ಟ್ರೇಲರ್ ಮೂಲಕ ಅದನ್ನು ಕಣ್ತುಂಬಿಕೊಳ್ಳುವ ತಹ ತಹ ಎಲ್ಲರಲ್ಲಿಯೂ ಇತ್ತು. ಇದೀಗ ಟ್ರೇಲರ್ ನಲ್ಲಿ ಗಜೇಂದ್ರನ ಗೆಟಪ್ಪು ಕಣ್ಣು ಕೋರೈಸುವಂತೆಯೇ ಅನಾವರಣಗೊಂಡಿದೆ.

ODEYA

ದರ್ಶನ್ ಫ್ಯಾಮಿಲಿ ಸೆಂಟಿಮೆಂಟ್ ಸೀನುಗಳು, ಮಾಸ್ ಸನ್ನಿವೇಷಗಳಲ್ಲಿ ಅಬ್ಬರಿಸಿರೋ ಪರಿ ಕಂಡು ಅಭಿಮಾನಿಗಳೆಲ್ಲ ಥ್ರಿಲ್ ಆಗಿದ್ದಾರೆ. ಪ್ರಧಾನವಾಗಿ ಇಲ್ಲಿನ ಡೈಲಾಗುಗಳು ದರ್ಶನ್ ಅಭಿಮಾನಿಗಳು ಹುಚ್ಚೇಳುವಂತಿವೆ. ಈ ಒಡೆಯ ರೈತರ ಪರವಾಗಿ ಹೋರಾಡುವವನೆಂಬ ವಿಚಾರವೂ ಡೈಲಾಗುಗಳ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿವೆ. ಈ ಹಿಂದೆ ಪ್ರಿನ್ಸ್, ಮಿಸ್ಟರ್ ಐರಾವತ ಎಂಬ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಪಕ ಎನ್ ಸಂದೇಶ್ ಮತ್ತು ದರ್ಶನ್ ಒಟ್ಟಾಗಿ ಕೊಟ್ಟಿದ್ದರು. ಒಡೆಯ ಈ ಜೋಡಿಯ ಮೂರನೇ ಚಿತ್ರ. ಈ ಮೂಲಕ ಹ್ಯಾಟ್ರಿಕ್ ಗೆಲುವು ಗ್ಯಾರೆಂಟಿ ಅನ್ನೋದಕ್ಕೆ ಈ ಟ್ರೇಲರ್ ಸಾಕ್ಷಿಯಂತಿದೆ. ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವಂತೆಯೇ ನಿರ್ದೇಶಕ ಎಂ ಡಿ ಶ್ರೀಧರ್ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆಂಬುದೂ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಅಂದಹಾಗೆ ಒಡೆಯ ಇದೇ ತಿಂಗಳ 12ರಂದು ದರ್ಶನ ನೀಡಲಿದ್ದಾನೆ.

https://www.youtube.com/watch?time_continue=2&v=e2rDj_7h0DM

Share This Article
Leave a Comment

Leave a Reply

Your email address will not be published. Required fields are marked *