ಬೆಂಗಳೂರು: ವಿನಯ್ ಬಾಲಾಜಿ ನಿರ್ದೇಶನದ ಮೊದಲ ಚಿತ್ರ ನನ್ನ ಪ್ರಕಾರ. ಬಿಡುಗಡೆ ಪೂರ್ವದಿಂದಲೇ ತನ್ನ ಹೊಸತನದ ಛಾಯೆಯಿಂದ ಪ್ರೇಕ್ಷಕರನ್ನು ಆಕರ್ಷಿಸಿದ್ದ ಈ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆದರೆ ಆ ನಂತರ ಎದುರಾದ ಒಂದಷ್ಟು ಎಡರುತೊಡರುಗಳನ್ನು ಸಮರ್ಥವಾಗಿಯೇ ಎದುರಿಸಿದ ಈ ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿಕೊಂಡಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ವಿಚಾರದಲ್ಲಿಯೂ ದಾಖಲೆ ಸೃಷ್ಟಿಸುತ್ತಾ ಮುಂದುವರೆಯುತ್ತಿದೆ.
ಇದು ವಿನಯ್ ಬಾಲಾಜಿ ನಿರ್ದೇಶನದ ಚೊಚ್ಚಲ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ನನ್ನ ಪ್ರಕಾರ ವಿಭಿನ್ನವಾದ ಸ್ಕ್ರೀನ್ ಪ್ಲೇ, ಎಲ್ಲರನ್ನೂ ಹಿಡಿದಿಡುವಂಥಾ ಕಥೆಯೊಂದಿಗೆ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಥೇಟರಿನತ್ತ ಸೆಳೆದುಕೊಳ್ಳುತ್ತಾ ಸಾಗಿ ಬಂದಿರೋ ಚಿತ್ರ ಇದೀಗ ಗೆಲುವಿನ ನಗೆ ಬೀರಿದೆ. ಇದೇನು ಸಲೀಸಾಗಿ ದಕ್ಕಿದ ಗೆಲುವಲ್ಲ. ಬಹುಶಃ ಗಟ್ಟಿತನ ಇಲ್ಲದೇ ಇದ್ದಿದ್ದರೆ ನನ್ನ ಪ್ರಕಾರ ಇಪ್ಪತೈದು ದಿನದಾಚೆಗೆ ಸಾಗಿ ಬರುವುದೂ ಕೂಡಾ ಸಾಧ್ಯವಾಗುತ್ತಿರಲಿಲ್ಲ. ಸಾಹೋದಂಥಾ ಬಿಗ್ ಬಜೆಟ್ಟನ ಪರಭಾಷಾ ಚಿತ್ರ ಎಂಟ್ರಿ ಕೊಡೋ ಘಳಿಗೆಯಲ್ಲಿ ಈ ಚಿತ್ರ ಒಳ್ಳೆ ಪ್ರದರ್ಶನ ಕಾಣುತ್ತಿದ್ದರೂ ಥಿಯೇಟರು ಸಿಗದೆ ಕಂಗಾಲಾಗಿತ್ತು. ಆದರೂ ಕೂಡಾ ಸಾವರಿಸಿಕೊಂಡು ಗೆಲ್ಲುವಂತೆ ಮಾಡಿರೋದು ಈ ಸಿನಿಮಾದ ಹೊಸತನ.
ಪರಭಾಷಾ ಚಿತ್ರಗಳ ಹಾವಳಿ ಸೇರಿದಂತೆ ಅದೆಂಥಾದ್ದೇ ಸವಾಲುಗಳೆದುರಾದರೂ ಒಳ್ಳೆ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಯಾವತ್ತಿಗೂ ಕೈ ಬಿಡೋದಿಲ್ಲ. ಈ ಮಾತಿಗೆ ದಂಡಿ ದಂಡಿ ಉದಾಹರಣೆಗಳಿವೆ. ಆ ಸಾಲಿನಲ್ಲಿ ಒಂದಾಗಿ ಸೇರಿಕೊಂಡಿರೋ ನನ್ನಪ್ರಕಾರ, ರೋಮಾಂಚಕ ಗೆಲುವನ್ನೇ ತನ್ನದಾಗಿಸಿಕೊಂಡಿದೆ. ಪ್ರಿಯಾಮಣಿ, ಕಿಶೋರ್ ಮತ್ತು ಮಯೂರಿ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ಅರ್ಜುನ್, ನಿರಂಜನ್ ದೇಶಪಾಂಡೆ, ಪ್ರಮೋದ್ ಶೆಟ್ಟಿ ಕೂಡಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಇಪ್ಪತೈದನೇ ದಿನದಾಚೆಗೆ ಯಶಸ್ವಿ ಯಾನ ಕೈಗೊಂಡಿರೋ ನನ್ನಪ್ರಕಾರ ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಸೇರ್ಪಡೆಯಾಗೋ ಹುಮ್ಮಸ್ಸಿನೊಂದಿಗೆ ಮುನ್ನುಗ್ಗುತ್ತಿದೆ.