ಬೆಂಗಳೂರು: ಏಳು ಬಣ್ಣಗಳ ಸಮಾಗಮವೇ ಮಳೆಬಿಲ್ಲು. ಈ ಮಳೆಬಿಲ್ಲನ್ನು ಮನುಷ್ಯನ ಜೀವನದ ಕಲರ್‍ಫುಲ್ ಲೈಫ್‍ಗೆ ಹೋಲಿಸಿ ನಾಗರಾಜ್ ಹಿರಿಯೂರು ಚಲನಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಮಳೆಬಿಲ್ಲು ಎಂಬ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಶರತ್ ನಾಯಕ, ಸಂಜನಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಗಣೇಶ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕರ ಸಹೋದರ ನಿಂಗಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಹಾಗೂ ಫಿಲಂ ಛೇಂಬರ್ ಅಧ್ಯಕ್ಷ ಎಸ್.ಎ. ಚಿನ್ನೇಗೌಡ್ರು, ಭಾಮಾ ಹರೀಶ್ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
Advertisement
Advertisement
ನಿರ್ಮಾಪಕ ನಿಂಗಪ್ಪ ಮಾತನಾಡುತ್ತಾ, ನಿರ್ದೇಶಕ ನಾಗರಾಜ್ ನನ್ನ ಸಹೋದರ. ಚಿಕ್ಕವನಿದ್ದಾಗಿನಿಂದಲೇ ಸಿನಿಮಾ ಬಗ್ಗೆ ತುಂಬಾ ಆಸಕ್ತಿಯಿತ್ತು. ಕಳೆದ ವರ್ಷ ಒಂದು ಕಿರು ಚಿತ್ರ ನಿರ್ಮಿಸಿದ್ದರು. ಈ ಚಿತ್ರವನ್ನು ಕಳೆದ ಜನವರಿಯಲ್ಲಿ ಆರಂಭಿಸಿದೆವು. ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಸೆನ್ಸಾರ್ ಹಂತದಲ್ಲಿದೆ. ಜುಲೈನಲ್ಲಿ ರಿಲೀಸ್ ಮಾಡುವ ಯೋಜನೆ ಇದೆ ಎಂದು ಹೇಳಿಕೊಂಡರು.
Advertisement
Advertisement
ನಾಯಕ ಶರತ್ ಮಾತನಾಡಿ, ಹಿಂದೆ ಕ ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ಹೈಸ್ಕೂಲ್ ಹುಡುಗ ಹಾಗೂ ಕಾಲೇಜ್ ವಿದ್ಯಾರ್ಥಿಯಾಗಿ ಎರಡು ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಾಯಕಿ ನಯನ ಮಾತನಾಡಿ, ಇದು 3ನೇ ಚಿತ್ರ ಈಗಿನ ಯೂಥ್‍ಗೆ ಇಷ್ಟವಾಗುವ ಕಥೆ, ಲವ್ ಸ್ಟೋರಿ ಜೊತೆಗೆ ಒಂದು ಟ್ವಿಸ್ಟ್ ಈ ಚಿತ್ರದಲ್ಲಿದೆ. ಅದು ಈ ಚಿತ್ರಕ್ಕೆ ಹೊಸ ರೂಪ ನೀಡುತ್ತದೆ ಎಂದು ಹೇಳಿದರು. ಮತ್ತೊಬ್ಬ ನಾಯಕಿ ಸಂಜನಾ ಮಾತನಾಡಿ, 2010-11ರ ಸಮಯದಲ್ಲಿ ನಡೆದ ಯುವ ಪ್ರೇಮ ಕಥೆಯಿದು. ಭಾರ್ಗವಿ ಎಂಬ ಬೋಲ್ಡ್ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.
ನಿರ್ದೇಶಕ ನಾಗರಾಜ್ ಮಾತನಾಡಿ ನನ್ನ ಚಿತ್ರದಲ್ಲಿ ಕಥೆಯೇ ಹೀರೋ. ನಾನು ರವಿಚಂದ್ರನ್ ಅವರ ಅಭಿಮಾನಿ. ಗೂಗಲ್‍ನಲ್ಲೇ ನಿರ್ದೇಶನ ಹೇಗೆ ಮಾಡೋದೆಂದು ಕಲಿತೆ. ಹುಡುಗರ ಜೀವನ ಬಿಳಿ ಹಾಳೆ ಇದ್ದ ಹಾಗೆ. ಅವರ ಲೈಫ್‍ನಲ್ಲಿ ಹುಡುಗಿಯೊಬ್ಬಳು ಬಂದಾಗ ಅವರ ಜೀವನದಲ್ಲಿ ಮಳೆ ಬಂದ ಹಾಗೆ ಆ ಮಳೆಬಿಲ್ಲು ಯಾರು ಅಂತ ಚಿತ್ರದಲ್ಲಿ ಹೇಳಿದ್ದೇವೆ ಅಂತ ಹೇಳಿದರು.
ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್ ಮಾತನಾಡಿ ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ. ಈ ಚಿತ್ರದಲ್ಲಿ ಹಾಡುಗಳನ್ನು ಬರೆದ ನಂತರ ಟ್ಯೂನ್ ಮಾಡಿಕೊಂಡು 10 ಹಾಡುಗಳು ಈ ಚಿತ್ರದಲ್ಲಿದ್ದು, ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿ ಬಂದಿವೆ ಎಂದು ಹೇಳಿದರು.
ಫಿಲಂ ಛೇಂಬರ್ ಅಧ್ಯಕ್ಷ ಚಿನ್ನೇಗೌಡ್ರು ಮಾತನಾಡಿ ಚಿತ್ರರಂಗವನ್ನು ಒಂದು ಕುಟುಂಬ ಎನ್ನುತ್ತೇವೆ. ಇಲ್ಲಿ ಕುಟುಂಬವೇ ಸೇರಿ ಒಂದು ಚಿತ್ರ ಮಾಡಿದ್ದಾರೆ. ಹೋಂವರ್ಕ್ ಮಾಡಿಕೊಳ್ಳದೆ ಚಿತ್ರರಂಗಕ್ಕೆ ಬರಬೇಡಿ ಎಂದು ಹೊಸದಾಗಿ ಬರುತ್ತಿರುವವರಿಗೆ ಕಿವಿ ಮಾತು ಹೇಳಿದರು.