ಅಚ್ಚರಿಯ ಲೋಕಕ್ಕೆ ಕರೆದೊಯ್ಯುವ ಕಥಾ ಸಂಗಮ ಹಾಡು!

Public TV
2 Min Read
Katha Sangama B 1

ನಿರ್ದೇಶಕ ರಿಷಬ್ ಶೆಟ್ಟಿ ಯಾವುದೇ ಸಿನಿಮಾ ಆರಂಭಿಸಿದರೂ ಅಲ್ಲೊಂದು ಹೊಸತನ, ಹೊಸ ಪ್ರಯೋಗ ಇದ್ದೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಆದರೀಗ ಅವರು ಕಥಾ ಸಂಗಮವೆಂಬ ಸಿನಿಮಾ ಮೂಲಕ ಎಲ್ಲರ ನಿರೀಕ್ಷೆಯನ್ನು ಮೀರಿದ ಪ್ರಯೋಗದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಕಥಾ ಸಂಗಮದಲ್ಲಿ ಏಳು ಮಂದಿ ನಿರ್ದೇಶಕರ ಏಳು ಕಥೆಗಳನ್ನು ರಿಷಬ್ ಶೆಟ್ಟಿ ಒಂದೇ ಸಿನಿಮಾ ಫ್ರೇಮಿನಲ್ಲಿ ಕಟ್ಟಿ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ಏಳು ಭಿನ್ನ ಕಥೆಗಳನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಈ ಮೂಲಕ ಪ್ರೇಕ್ಷಕರ ಪಾಲಿಗೆ ಬಂದೊದಗಿದೆ. ಇತ್ತೀಚೆಗಷ್ಟೇ ಆಡಿಯೋ ಲಾಂಚ್ ಮಾಡಿದ್ದ ಚಿತ್ರತಂಡ ಇದೀಗ ಇಡೀ ಕಥೆಯ ಹೊಳಹು ನೀಡುತ್ತಲೇ ಬೇರೆಯದ್ದೊಂದು ಅನೂಹ್ಯ ಜಗತ್ತಿಗೆ ಕೈ ಹಿಡಿದು ಕರೆದೊಯ್ಯವಂಥಾ ಅದ್ಭುತ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆಗೊಳಿಸಿದೆ.

Katha Sangama 7

ಮನೆಯೊಂದಿರುವುದು ಇಲ್ಲಿ, ಮನವೇ ನಿಲ್ಲದು ನೋಡಿ. ಹೆಜ್ಜೆಯು ಮುಗಿಯಲೇ ಇಲ್ಲ ಗೋಡೆಯ ಜಾಗದಲಿ ಬರೀ ಬಾಗಿಲೇ ಇರಬಹುದೇ… ಎಂಬ ಚೆಂದದ ಸಾಹಿತ್ಯವಿರೋ ಈ ಹಾಡು ಅದಿತಿ ಸಾಗರ್ ಅವರ ವಿಶಿಷ್ಟ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಮಾಯಸಂದ್ರ ಕೃಷ್ಣಪ್ರಸಾದ್ ಅವರು ಬರೆದಿರುವ ಈ ಹಾಡು ನಿಗೂಢಾರ್ಥಗಳೊಂದಿಗೆ ಇಡೀ ಕಥೆಯ ಸಾರವನ್ನು ತನ್ನೊಳಗೆ ಹಿಡಿದಿಟ್ಟುಕೊಂಡಂತಿದೆ. ಈ ಹಾಡಿನ ಭಾವಕ್ಕೆ ತಕ್ಕುದಾಗಿ ಕಥಾ ಸಂಗಮದ ಏಳು ಕಥೆಗಳ ಪದರಗಳೂ ತೆರೆದುಕೊಳ್ಳುತ್ತವೆ. ಪಾತ್ರಗಳ ಚಹರೆ ಕಣ್ಣೆದುರು ಅನಾವರಣಗೊಳ್ಳುತ್ತವೆ. ಇಲ್ಲಿ ಪ್ರತೀ ಪ್ರೇಕ್ಷಕರೂ ಅಚ್ಚರಿಗೊಳ್ಳುವಂಥ ಏಳು ಕಥೆಗಳ ಗುಚ್ಛವಿದೆ ಅನ್ನೋದನ್ನು ಈ ಹಾಡು ಸಮರ್ಥವಾಗಿಯೇ ಪ್ರೇಕ್ಷಕರಿಗೆ ಮನವರಿಕೆ ಮಾಡಿ ಕೊಟ್ಟಿದೆ.

Katha Sangama 1

ಈ ಹಾಡೂ ಕೂಡಾ ರಿಷಬ್ ಶೆಟ್ಟಿ ಮತ್ತವರ ತಂಡದ ಹೊಸತನದ ಹಂಬಲದ ಪ್ರತಿಫಲ. ಟ್ರೇಲರ್ ಮತ್ತು ಟೀಸರ್‍ನಂಥವುಗಳ ಮೂಲಕ ಕಥೆಯ ಹೂರಣದ ಸುಳಿವು ಕೊಡುವುದು ಮಾಮೂಲು. ಆದರೆ ಕಥಾ ಸಂಗಮ ಅದನ್ನು ಈ ಹಾಡಿನ ಮೂಲಕವೇ ಮಾಡಿದೆ. ಮತ್ತದು ತುಂಬಾನೇ ಪರಿಣಾಮಕಾರಿಯಾಗಿದೆ. ಇಲ್ಲಿ ಏಳು ಮಂದಿ ಯುವ ನಿರ್ದೇಶಕರ ಏಳು ಕಥೆಗಳಿವೆ. ಅವೆಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿರುವಂಥವುಗಳು. ಒಂದೇ ಸಿನಿಮಾದಲ್ಲಿ ಏಳು ಸಿನಿಮಾ ತೋರಿಸೋ ಮಹತ್ವದ ಪ್ರಯತ್ನವೂ ಈ ಚಿತ್ರದಲ್ಲಿದೆ. ಏಳು ಮಂದಿ ನಿರ್ದೇಶಕರು, ಏಳು ಕಥೆ, ಏಳು ಜನ ಛಾಯಾಗ್ರಾಹಕರು ಈ ಸಿನಿಮಾದ ಪ್ರಧಾನ ಅಂಶಗಳಂತಿದ್ದಾರೆ. ಪ್ರತೀ ಕಥೆಗಳಲ್ಲಿಯೂ ಭಿನ್ನ ಪಾತ್ರಗಳು ಪ್ರೇಕ್ಷಕರನ್ನು ಚಕಿತಗೊಳಿಸಲು ತಯಾರಾಗಿವೆ.

ಲವ್, ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಕ್ರೈಂ ಜಾನರಿನಡಿ ಬರುವಂಥಾ ಕಥೆಗಳು ಇಲ್ಲಿವೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಕಥಾ ಸಂಗಮದತ್ತ ಪ್ರತೀ ಪ್ರೇಕ್ಷಕರೂ ಕಣ್ಣಿಟ್ಟು ಕಾಯುವಂತೆ ಮಾಡಿ ಬಿಟ್ಟಿದೆ. ಆ ಟ್ರೇಲರ್‍ಗೆ ಸಿಕ್ಕಿರೋ ಪ್ರತಿಕ್ರಿಯೆ ಮತ್ತು ವೀಕ್ಷಣೆಗಳೇ ಎಲ್ಲವನ್ನೂ ಹೇಳುವಂತಿವೆ. ಪುಟ್ಟಣ್ಣ ಕಣಗಾಲರು ದಶಕಗಳ ಹಿಂದೆಯೇ ಇಂಥಾದ್ದೊಂದು ಪ್ರಯತ್ನ ಮಾಡಿದ್ದರು. ಇದೀಗ ರಿಷಬ್ ಶೆಟ್ಟಿ ಮತ್ತು ತಂಡ ಸಂಪೂರ್ಣ ಹೊಸತನದೊಂದಿಗೆ ಕಥಾ ಸಂಗಮದ ಮೂಲಕ ಕಮಾಲ್ ಮಾಡ ಹೊರಟಿದ್ದಾರೆ. ಅದರ ಮಜವೇನನ್ನೋದು ಇದೀಗ ಬಿಡುಗಡೆಯಾಗಿರೋ ಹಾಡಿನ ಮೂಲಕವೇ ಸ್ಪಷ್ಟಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *