ಬೆಂಗಳೂರು: ಶ್ರೀನೀಲಕಂಠೇಶ್ವರ ಸಿನಿ ಕಂಬೈನ್ಸ್ ಲಾಂಛನದಲ್ಲಿ ತಯಾರಾಗಿರುವ ‘ಹಿಕೋರಾ` ಚಿತ್ರತಂಡ ಚಿತ್ರೀಕರಣ ಮುಗಿಸಿದ ಸಂತಸದಲ್ಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದೆ. ನೀನಾಸಂನಲ್ಲಿ ಸುಮಾರು 18 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಅನ್ನ ಉಣಬಡಿಸಿದ ರತ್ನಶ್ರೀಧರ್ ಈ ಚಿತ್ರದ ನಿರ್ಮಾಪಕರು. ಬಹುತೇಕ ನೀನಾಸಂನಲ್ಲಿ ತರಬೇತಿ ಪಡೆದು, ತಮ್ಮ ಕೈ ತುತ್ತು ತಿಂದು ಬೆಳೆದವರನ್ನೇ ಈ ಚಿತ್ರದಲ್ಲಿ ಕಲಾವಿದರನ್ನಾಗಿ ಬಳಸಿಕೊಂಡಿದ್ದಾರೆ ನಿರ್ಮಾಪಕರು. ಈ ಚಿತ್ರದ ನಿರ್ದೇಶಕ ಮತ್ತು ನಾಯಕ ಎಂ.ಜಿ.ಕೃಷ್ಣ, ಯಶವಂತ ಶೆಟ್ಟಿ, ಸ್ಪಂದನ ಪ್ರಸಾದ್, ಮಹಾಂತೇಶ್, ಸರ್ದಾರ್ ಸತ್ಯ ಮುಂತದಾವರೆಲ್ಲ ನೀನಾಸಂನವರೇ.
ಚಿತ್ರದ ನಾಯಕರಾಗಿ ನಟಿಸಿರುವ ಕೃಷ್ಣಪೂರ್ಣ ಈ ಚಿತ್ರದ ನಿರ್ದೇಶಕರೂ ಹೌದು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕೃಷ್ಣಪೂರ್ಣ ಅವರೇ ಬರೆದಿದ್ದಾರೆ. ಪೂರ್ಣಚಂದ್ರತೇಜಸ್ವಿ ಸಂಗೀತ ನೀಡಿರುವ ಈ ಚಿತ್ರಕ್ಕೆ ಆಪ್ತಮಿತ್ರ, ಸಂಗೊಳ್ಳಿ ರಾಯಣ್ಣ ಖ್ಯಾತಿಯ ರಮೇಶ್‍ಬಾಬು ಅವರ ಛಾಯಾಗ್ರಹಣವಿದೆ. ಕಿರಣ್ ಸಂಕಲನ, ಮದನ್ – ಹರಿಣಿ ನೃತ್ಯ ನಿರ್ದೇಶನ ಹಾಗೂ ಡಾ.ನಾಗರಾಜ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಸಹ ನಿರ್ಮಾಪಕರು ಕುಮಾರಿ ಆದ್ಯ. ಸುನೀಲ್ ಯಾದವ್ ಹಾಗೂ ವಿನಾಯಕರಾಮ ಕಲಗಾರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಪ್ರೊಡಕ್ಷನ್ ಕಂಟ್ರೋಲರ್ ಆಗಿ ಅಭಿರಾಮ್ ಕಾರ್ಯ ನಿರ್ವಹಿಸಿದ್ದಾರೆ. ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಚಿತ್ರ ಮೂಡಿಬಂದಿರುವುದಕ್ಕೆ ಚಿತ್ರತಂಡ ಸಂತಸದಲ್ಲಿದೆ.
Advertisement
ಕೃಷ್ಣಪೂರ್ಣ, ಯಶ್ವಂತ್ ಶೆಟ್ಟಿ, ಸ್ಪಂದನಾ ಪ್ರಸಾದ್, ಪ್ರಕಾಶ್ ಬೆಳವಾಡಿ, ಸರ್ದಾರ್ ಸತ್ಯ, ಮಹಾಂತೇಶ್ ರಾಮದುರ್ಗ, ಆನಂದ್ ಮಾಸ್ಟರ್, ಲಾವಂತಿ, ಮುನಾಲಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟ ಪ್ರಕಾಶ್ ಬೆಳವಾಡಿ ಅತೀ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.