ಹಫ್ತಾ: ಸ್ಯಾಂಡಲ್‍ವುಡ್‍ಗೆ ಆಗಮಿಸಿದ ಯುವ ನಿರ್ಮಾಪಕ ಬಾಲರಾಜ್!

Public TV
2 Min Read
Hafta a

ಬೆಂಗಳೂರು: ವರ್ಧನ್ ತೀರ್ಥಹಳ್ಳಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ `ಹಫ್ತಾ’ ಚಿತ್ರದ ಹವಾ ಅಡೆತಡೆಯಿಲ್ಲದೇ ಮುಂದುವರೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರೋ ಟ್ರೈಲರ್, ಹಾಡುಗಳ ಮೂಲಕವೇ ಭರ್ಜರಿ ಟಾಕ್ ಕ್ರಿಯೇಟ್ ಮಾಡಿರೋ ಈ ಸಿನಿಮಾ ಬಗ್ಗೆ ವ್ಯಾಪಕವಾದ ಸಕಾರಾತ್ಮಕ ಪ್ರತಿಕ್ರಿಯೆಗಳೇ ಕೇಳಿ ಬರುತ್ತಿವೆ. ಯಾವುದೇ ಒಂದು ಸಿನಿಮಾ ಅಂದರೂ ಹೆಚ್ಚಿನದಾಗಿ ಹಲವರ ಅದೆಷ್ಟೋ ವರ್ಷದ ಕನಸು ನನಸಾದ ಕಥೆಗಳಿರುತ್ತವೆ. ಹಫ್ತಾ ಚಿತ್ರದ ವಿಚಾರದಲ್ಲಿಯೂ ಅಂಥವೇ ಒಂದಷ್ಟು ಮೊದಲ ಕನಸಿನ ಕಥೆಗಳಿವೆ. ಈ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿರೋ ಬಾಲರಾಜ್ ಟಿಸಿ ಪಾಳ್ಯ ಕೂಡಾ ವರ್ಷಾಂತರಗಳ ಕನಸೊಂದು ಹಫ್ತಾ ಮೂಲಕ ನನಸಾದ ಖುಷಿಯಲ್ಲಿದ್ದಾರೆ.

Hafta a

ಹಫ್ತಾ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಅವರ ಪಾಲಿಗೂ ಮೊದಲ ಹೆಜ್ಜೆ. ವರ್ಧನ್ ತೀರ್ಥಹಳ್ಳಿ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ನಾಯಕನಾಗಿ ಅವರಿಗೂ ಇದು ಮೊದಲ ಹೆಜ್ಜೆಯೇ. ಇನ್ನು ನಿರ್ಮಾಪಕರಾದ ಮೈತ್ರಿ ಮಂಜುನಾಥ್ ಅವರೂ ಇದೇ ಸಾಲಿನಲ್ಲಿದ್ದಾರೆ. ಅದೇ ರೀತಿ ತಮ್ಮದೇ ಬ್ಯುಸಿನೆಸ್, ವಹಿವಾಟು ಅಂತಿದ್ದರೂ ಸಿನಿಮಾ ಧ್ಯಾನವನ್ನು ಬಹುವಾಗಿ ಹಚ್ಚಿಕೊಂಡಿದ್ದ ಬಾಲರಾಜ್ ಕೂಡಾ ಹಫ್ತಾ ಮೂಲಕವೇ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

Hafta a 1

ಬಾಲರಾಜ್ ಮೂಲ ಬೆಂಗಳೂರಿಗರೇ. ಟಿಸಿ ಪಾಳ್ಯ ಏರಿಯಾದಲ್ಲಿಯೇ ಹುಟ್ಟಿ ಬೆಳೆದ ಅವರು ಕಾಲೇಜು ದಿನಗಳಲ್ಲಿಯೇ ಸಹಜವೆಂಬಂಥಾ ಸಿನಿಮಾ ವ್ಯಾಮೋಹ ಹೊಂದಿದ್ದವರು. ತಾನೂ ಕೂಡಾ ಈ ಬಣ್ಣದ ಜಗತ್ತಿನ ಭಾಗವಾಗಬೇಕೆಂಬ ಕನಸನ್ನು ಆ ಕಾಲದಿಂದಲೇ ಕಾಪಿಟ್ಟುಕೊಂಡು ಬಂದಿದ್ದ ಬಾಲರಾಜ್ ಆ ನಂತರದಲ್ಲಿ ಜೀವನೋಪಾಯಕ್ಕಾಗಿ ತಮ್ಮದೇ ಬ್ಯುಸಿನೆಸ್‍ನ ಹಾದಿ ಹಿಡಿದಿದ್ದರು. ಈ ಜಂಜಾಟ, ಒತ್ತಡಗಳ ನಡುವೆಯೂ ಸಿನಿಮಾ ನಿರ್ಮಾಣ ಮಾಡಬೇಕೆಂಬ ಬಯಕೆ ಹೊಂದಿದ್ದ ಅವರಿಗೆ ಕಡೆಗೂ ಹಫ್ತಾ ಮೂಲಕ ಆ ಅವಕಾಶ ಕೂಡಿ ಬಂದಿದೆ.

Hafta a 1

ಈ ಸಿನಿಮಾ ನಿರ್ದೇಶಕರಾದ ಪ್ರಕಾಶ್ ಹೆಬ್ಬಾಳ, ನಿರ್ಮಾಪಕ ಮೈತ್ರಿ ಮಂಜುನಾಥ್ ಹಾಗೂ ಬಾಲರಾಜ್ ಸ್ನೇಹಿತರು. ವರ್ಷಗಳ ಹಿಂದೆ ಪ್ರಕಾಶ್ ಹೆಬ್ಬಾಳ ಹಫ್ತಾ ಚಿತ್ರದ ಬಗ್ಗೆ ಹೇಳಿ, ಕಥೆಯನ್ನೂ ವಿವರಿಸಿ ಬಾಲರಾಜ್ ಮುಂದೆ ನಿರ್ಮಾಣದಲ್ಲಿ ಭಾಗಿಯಾಗುವ ಬಗ್ಗೆ ಆಫರ್ ಇಟ್ಟಿದ್ದರಂತೆ. ಆ ಕ್ಷಣವೇ ಒಪ್ಪಿಗೆ ಸೂಚಿಸಿದ್ದ ಬಾಲರಾಜ್ ಅಂಥಾದ್ದೊಂದು ಹಠಾತ್ ನಿರ್ಧಾರ ತಳೆಯಲು ಕಾರಣವಾದದ್ದು ಹಫ್ತಾದ ಡಿಫರೆಂಟ್ ಕಥೆ. ಆ ಬಳಿಕ ಅಂದುಕೊಂಡಂತೆಯೇ ಸಾಗಿ ಬಂದು ನಿರೀಕ್ಷೆಗೂ ಮೀರಿ ಈ ಚಿತ್ರವನ್ನು ಅಚ್ಚುಕಟ್ಟಾಗಿ ರೂಪಿಸಿರುವ ತೃಪ್ತಿ ಬಾಲರಾಜ್ ಅವರಲ್ಲಿದೆ.

ಇಂಥಾ ಮೊದಲ ಹೆಜ್ಜೆಗಳು ಒಳ್ಳೆ ಅಭಿಪ್ರಾಯ, ಪ್ರೋತ್ಸಾಹಗಳಿಂದ ಮುದಗೊಳ್ಳುತ್ತವೆ. ಅದರಲ್ಲಿಯೂ ಗೆಲುವಿನ ಸೂಚನೆ ಸಿಕ್ಕಿದರಂತೂ ಉತ್ಸಾಹ ಇನ್ನೂ ಇಮ್ಮಡಿಸುತ್ತದೆ. ಬಾಲರಾಜ್ ಈಗ ಅಂಥಾದ್ದೇ ಮೂಡಿನಲ್ಲಿದ್ದಾರೆ. ಹಫ್ತಾ ಚಿತ್ರಕ್ಕೆ ಎಲ್ಲ ದಿಕ್ಕುಗಳಿಂದಲೂ ಸಕಾರಾತ್ಮಕ ಸ್ವಾಗತವೇ ಸಿಗುತ್ತಿದೆ. ಇನ್ನೇನು ತೆರೆಗೆ ಬರಲಿರೋ ಈ ಚಿತ್ರದ ಗೆಲುವಿನ ಸೂಚನೆ ಈಗಾಗಲೇ ಸಿಕ್ಕಿಬಿಟ್ಟಿದೆ. ಹಫ್ತಾ ಮೂಲಕವೇ ನಿರ್ಮಾಪಕರಾಗಿ ಅದೃಷ್ಟ ಪರೀಕ್ಷೆಗಿಳಿದಿರೋ ಬಾಲರಾಜ್ ಕೂಡಾ ಇದರಿಂದ ಖುಷಿಗೊಂಡು ದೊಡ್ಡ ಗೆಲುವೊಂದನ್ನು ಎದುರು ನೋಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *