Cinema
ಶಿಷ್ಯನ ಬಂಪರ್ ಕನಸಿಗೆ ಕ್ಲಾಪ್ ಮಾಡಲಿದ್ದಾರೆ ಒಡೆಯ!

ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು ಧನ್ವೀರ್. ಅದರಲ್ಲಿ ಶೋಕ್ದಾರ್ ಪಾತ್ರ ನಿರ್ವಹಿಸಿ ಅದರ ಮೂಲಕವೇ ಒಂದಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡು ಇದೀಗ ಬಂಪರ್ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. ಧನ್ವೀರ್ ಎರಡನೇ ಸಿನಿಮಾ ಬಂಪರ್ ಟೈಟಲ್ ಅನೌನ್ಸ್ ಆದ ಕ್ಷಣದಿಂದಲೇ ಸದ್ದು ಮಾಡಲಾರಂಭಿಸಿತ್ತು. ಆ ನಂತರದಲ್ಲಿ ದೀಪಾವಳಿ ಸ್ಪೆಷಲ್ ಎಂಬಂತೆ ಪೋಸ್ಟರ್ ಲಾಂಚ್ ಮಾಡಿದ ನಂತರವಂತೂ ಪ್ರೇಕ್ಷಕರ ನಡುವೆ ‘ಬಂಪರ್’ ಚರ್ಚೆ ಆರಂಭವಾಗಿತ್ತು. ಆ ನಂತರದಲ್ಲಿ ಇದರ ಬಗ್ಗೆ ಯಾವ ಮಾಹಿತಿಗಳೂ ಹೊರ ಬಿದ್ದಿರಲಿಲ್ಲ. ಆದರೀಗ ಇದೇ ತಿಂಗಳ 12ರಂದು ಬಂಪರ್ ಮುಹೂರ್ತ ನಡೆಸಲು ಚಿತ್ರತಂಡ ಮುಂದಾಗಿದೆ. ವಿಶೇಷವೆಂದರೆ, ಈ ಸಂದರ್ಭದಲ್ಲಿ ಒಡೆಯ ದರ್ಶನ್ ಹಾಜರಿದ್ದು ತಮ್ಮ ಶಿಷ್ಯನ ಚಿತ್ರಕ್ಕೆ ಕ್ಲಾಪ್ ಮಾಡೋ ಮೂಲಕ ಚಾಲನೆ ನೀಡಲಿದ್ದಾರೆ.
ಹೊಸ ಹುಡುಗರಿಗೆ ಸದಾ ಸಹಕಾರ, ಬೆಂಬಲ ನೀಡುತ್ತಾ ಬಂದಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಹಿಂದೆ ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಸಂದರ್ಭದಲ್ಲಿಯೂ ಅವರು ಧನ್ವೀರ್ ಗೆ ಸಾಥ್ ನೀಡಿದ್ದರು. ಇದೀಗ ಬಂಪರ್ ಗಂತೂ ದರ್ಶನ್ ಅಭೂತಪೂರ್ವವಾದ ಬೆಂಬಲವನ್ನೇ ನೀಡುತ್ತಿದ್ದಾರೆ. ಇದೇ ತಿಂಗಳ ಹನ್ನೆರಡನೇ ತಾರೀಕಿನಂದು ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿರೋ ಮುಹೂರ್ತ ಸಮಾರಂಬದಲ್ಲಿ ಅತಿಥಿಯಾಗಿ ಹಾಜರಿರಲಿರುವ ದರ್ಶನ್ ತಮ್ಮ ಮೆಚ್ಚಿನ ಶಿಷ್ಯನ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಒಡೆಯ ಚಿತ್ರ ಕೂಡಾ ಡಿಸೆಂಬರ್ ಹನ್ನೆರಡರಂದು ಬಿಡುಗಡೆಯಾಗುತ್ತಿದೆ. ಆ ದಿನವೇ ಧನ್ವೀರ್ ನಾಯಕನಾಗಿ ನಟಿಸಲಿರೋ ಬಂಪರ್ ಚಿತ್ರಕ್ಕೆ ಅದ್ದೂರಿಯಾಗಿಯೇ ಮುಹೂರ್ತ ಸಮಾರಂಭ ನೆರವೇರೋ ಮೂಲಕ ಸೆಟ್ಟೇರಲಿದೆ. ಧನ್ವೀರ್ ಆರಂಭ ಕಾಲದಿಂದಲೂ ದರ್ಶನ್ ಅವರ ಅಭಿಮಾನಿಯಾಗಿದ್ದವರು. ದರ್ಶನ್ ಸಾಗಿ ಬಂದಿರೋ ಕಷ್ಟದ ಹಾದಿಯನ್ನು ಅರಿತುಕೊಂಡು ಅದರಿಂದ ಸ್ಫೂರ್ತಿ ಪಡೆದುಕೊಂಡಿರುವ ಧನ್ವೀರ್ ಅಂಥಾ ಕಷ್ಟದ ಹಾದಿಯಲ್ಲಿಯೇ ಮುಂದುವರೆದು ಬಂದಿದ್ದಾರೆ. ದರ್ಶನ್ ಅವರ ಸ್ಫೂರ್ತಿಯಿಂದಲೇ ನಾಯಕನಾಗಿ ಅವತರಿಸಿರೋ ಧನ್ವೀರ್ ಇದೀಗ ತನ್ನ ಆರಾಧ್ಯ ದೈವದಂತಿರೋ ದರ್ಶನ್ ಅವರ ಸಮ್ಮುಖದಲ್ಲಿಯೇ ಎರಡನೇ ಚಿತ್ರದ ಯಾನವನ್ನು ಆರಂಭಿಸುತ್ತಿದ್ದಾರೆ.
